ಮದುವೆಯಾಗದ ಯುವತಿಯರು ಬೇಗ ಮದುವೆಯಾಗಲಿ ಎಂದು, ಮದುವೆಯಾಗಿ ವರ್ಷವಾದರೂ ಮಕ್ಕಳಾಗದವರು ಬೇಗ ಮಗುವಾಗಲಿ ಎಂದು, ಹೆಣ್ಣು ಮಗು ಬೇಕು ಎಂದು ಕೆಲವರು, ಇನ್ನೂ ಕೆಲವರು ಗಂಡು ಸಂತಾನ ಬೇಕೆಂದು.., ಹೀಗೆ ಹರಸಿಕೊಂಡು ಮುಂಜಾನೆಯಿಂದ ಹೊಟ್ಟೆಗೆ ತೊಟ್ಟು ನೀರು ಸೇವಿಸದೆ ಉಪವಾಸ ವ್ರತದಲ್ಲಿದ್ದ ನೂರಾವೊಂದು ಜನ ಹೆಂಗಳೆಯರು ನೂರಾವೊಂದು ಕುಂಭಗಳಸ ಗಳನ್ನು ಹೊರಲು ಸಿದ್ಧರಾಗಿ ನಿಂತಿದ್ದರು.
“..ಮಡಿನೀರು ಮಂಗಲಸ್ನಾನ ಆಗಲಿ..” ಎಂದು ಪಂಚಪುರೋಹಿತರು ಅಲ್ಲಿದ್ದ ಯುವಕರಿಗೆ ಕೂಗಿ ಹೇಳಿದಾಗ ನೂರಾವೊಂದು ಕೊಡಗಳಲ್ಲಿ ತುಂಬಿಸಿ ಇಟ್ಟಿದ್ದ ಅರಿಶಿಣ ಬೆರೆಸಿದ ನೀರನ್ನು ಯುವಕರಾದಿಯಾಗಿ ಊರಿನ ಗಂಡಸರೆಲ್ಲರೂ ಒಂದೊಂದು ಕೊಡವನ್ನು ಹೊತ್ತು ತಂದು ಮೊಣಕಾಲೂರಿ ಕೆಳಗೆ ಕುಳಿತಿದ್ದ ಹೆಂಗಸರ ಮೇಲೆ ಒಬ್ಬೊಬ್ಬರಿಗೆ ಒಂದೊಂದರಂತೆ ತಲೆಯ ಮೇಲಿಂದ ಸುರಿದರು.
“..ಮಾರವ್ವುಂಗೇ ಜೈ!!! ಮಾಕಾಳೀಗೇ ಜೈ!!!..” ಎಂಬ ಜಯಕಾರ ಮುಗಿಲು ಮುಟ್ಟುತ್ತಿದ್ದಂತೆ ಮಂಗಳಾಂಗನೆಯರೆಲ್ಲಾ ಅತ್ಯಂತ ಭಕ್ತಿಭಾವದಿಂದ ಕೈಮುಗಿದು ಎದ್ದುನಿಂತು ಕಳಸ ಹೊರಲು ಅಣಿಯಾಗಿ ಒಬ್ಬರ ಹಿಂದೆ ಒಬ್ಬರಂತೆ ಸಾಲುಗಟ್ಟಿದರು.
ಮಾರಿಪುರದಲ್ಲಿ ಗ್ರಾಮದೇವತೆ ತೊಟ್ಲು ಮಾರಮ್ಮನ ಕುಂಭಾಭಿಷೇಕ ಹಾಗೂ ಮಹಾ ಹೋಮ ಪೂಜಾ ಉತ್ಸವವನ್ನು ಏರ್ಪಡಿಸಲಾಗಿತ್ತು. ಊರಿನಿಂದ ಎರಡುವರೆ ಮೈಲಿ ದೂರವಿರುವ ಕರಿಕಲ್ಲು ಕಲ್ಯಾಣಿಯಿಂದ ಕುಂಭಗಳಲ್ಲಿ ಗಂಗೆ ಪೂಜಿಸಿ ನೂರಾವೊಂದು ಜನ ಹೆಂಗಸರು ಹೊತ್ತು ತರಬೇಕಿತ್ತು.
ಸಂಜೆ ಐದು ಗಂಟೆಯಿಂದಲೇ ಕಲ್ಯಾಣಿಯ ಹತ್ತಿರ ಜನ ಸೇರಿದ್ದರು. ಅತ್ಯಂತ ಶಾಸ್ತ್ರೋಕ್ತವಾಗಿ ಮಡಿಯಿಂದ ಪೂಜೆ, ಗಂಗಾರತಿ ಸಾಗಿದ್ದವು. ಮಾರಿಪುರದವರು ಅಷ್ಟೇ ಅಲ್ಲದೆ ಸುತ್ತಮುತ್ತಲ ಊರಿನ ಹೆಣ್ಣುಮಕ್ಕಳು ಹರಕೆ ಹೊತ್ತುಕೊಂಡು ಮಾರವ್ವನಿಗೆ ಕುಂಭಗಳಸ ಸೇವೆ ಸಲ್ಲಿಸಲು ಬಂದಿದ್ದರು.
“..ಬೇಗ ಕಳ್ಸ ಹೊರ್ಸಿ, ಆಗ್ಲೇ ತಡಾತು..ಕತ್ಲೆಲಿ ಕಾಡ್ದಾರೀಲೀ ಕುಂಭ್ಗಳ್ಸ ಹೊತ್ಕಂಡು ಕಾಲಿಡೋದು ಕಷ್ಟ..ದಾರೀಲೀ ಇಷ್ದಾವೂ, ಚೋಣು ಹರೀತಿರ್ತಾವೇ..” ಎಂದು ಊರಿನ ಹಿರಿಯರೊಬ್ಬರು ಅವಸರಿಸಿದರು. ಎಲ್ಲಾ ಹೆಂಗಸರು ತಾವು ಉಟ್ಟ ಸೀರೆಯ ಸೆರಗನ್ನು ಬಿಗಿಯಾಗಿ ಎಳೆದುಕೊಂಡು ತಮ್ಮ ಸೊಂಟದ ಮುಂದಿನ ಭಾಗಕ್ಕೆ ಸಿಕ್ಕಿಸಿಕೊಂಡು ಕಳಸ ಹೊರಲು ಸಿದ್ಧರಾಗಿ ಕತ್ತನ್ನು ನೇರವಾಗಿ ಚಾಚಿ ದಿಟ್ಟರಾಗಿ ನಿಂತರು. ಪುರೋಹಿತರು ತಮ್ಮ ಜೊತೆ ಕೆಲವು ಮಡಿಯಾಗಿ ಬಂದಿದ್ದ ಗಂಡಸರೊಂದಿಗೆ ಸೇರಿ ಗಂಗೆ ತುಂಬಿದ ಕುಂಭಗಳನ್ನು ಮಹಿಳೆಯರ ತಲೆಯ ಮೇಲೆ ಹೊರೆಸಿದರು. ಮುಂಜಾನೆಯಿಂದ ಹೊಟ್ಟೆಗೆ ಏನು ಸೇವಿಸದೆ ಇದ್ದವರ ಮೇಲೆ ಒಂದೊಂದು ಕೊಡ ತಣ್ಣೀರು ಸುರಿದು ಮಂಗಲಸ್ನಾನ ಮಾಡಿಸಿದ ಕಾರಣ ಮುಸ್ಸಂಜೆ ಗಾಳಿಗೆ ಹಸಿಯಾದ ಮೈ ನಡುಕವೇರಿ ದೇಹ ನಿಯಂತ್ರಣ ಕಳೆದುಕೊಂಡಂತೆ ಸೋತಿದ್ದ ಅವರ ತಲೆಯ ಮೇಲೆ ಕಳಸಗಳನ್ನು ಇಡುತ್ತಿದ್ದಂತೆ ಅವುಗಳ ಭಾರಕ್ಕೆ ತಲೆ ಗಿರ್ರ್ ಎನ್ನುವಂತಾಗಿ ಕಳಸಗಿತ್ತಿಯರೆಲ್ಲ ವಾಲಾಡಲು ಶುರುವಾದರು. ಕೆಲವರು ಅಲ್ಲಿ ನುಡಿಸುತ್ತಿದ್ದ ವಾದ್ಯ ಗಳ ಶಬ್ದಕ್ಕೆ ಸರಿಯಾಗಿ ಮೈಝ್ವಲಿಸಲು ಆರಂಭಿಸಿ ತಮಗಾಗುತ್ತಿದ್ದ ಚಳಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೇ, ಮತ್ತೆ ಕೆಲವರು ತಮಟೆಯ ಸದ್ದಿಗೆ ಹೆಜ್ಜೆ ಹಾಕಲು ಶುರುವಾದರು.
ಇನ್ನು ಕೆಲವು ಹೆಂಗಸರು ಬಿಗಿಯಾಗಿ ಮೈ ಸೆಟೆದುಕೊಂಡು ಗರುಡಗಂಬದಂತೆ ನಿಂತಿದ್ದರು. “..ಏನ್ಮಾಡ್ತಿದ್ದೀಯೋ ಬೊಮ್ಮ! ಬೇಗ ನೆಡ್ಮುಡಿ ಹಾಸೋ, ಕತ್ಲು ಅಮುರ್ಕಾತಾದೇ, ನೀವು ಮುಂದೆ ನಡೀರಮ್ಮಾ..ಕಳ್ಸಾ ಕೈ ಬುಟ್ಟೀರಾ ಜ್ವಾಪಾನಾ, ಉರಿಮಾರಿ ಅವ್ಳು, ಒನ್ನೀಟೂ ಯತ್ವಾಸಾ ಆಗ್ಬಾರ್ದು ಮಡೀನಾಗಾಗ್ಲೀ..ನೆಡೆನಾಗಾಗ್ಲೀ, ಬೋ ಕಟ್ನಿಟ್ಟೂ..ಜಪ್ತೀಲೀ ಮಡಿಕ್ಕಳೀ..” ಎಂದು ಜನರ ನಡುವಿನಿಂದ ಒಂದು ಹಿರಿಯ ದನಿ ಎಚ್ಚರಿಸಿತು.
ನಿಧಾನವಾಗಿ ಮುಂದೆ ಸಾಗಿತ್ತು ಕುಂಭಗಳಸಗಳ ಸಾಲು. ಪಂಜಿನ ಬೆಳಕು, ಐದಾರು ಲಾಟೀನುಗಳನ್ನು ಬಿಟ್ಟರೆ ಬೆಳಕಿಗಾಗಿ ಬೇರೆ ವ್ಯವಸ್ಥೆ ಇರಲಿಲ್ಲ. ಎಲ್ಲರಿಗಿಂತ ಹಿಂದೆ ಇದ್ದವರು ತಮ್ಮ ಮುಂದೆ ಸಾಗುತ್ತಿದ್ದವರನ್ನು ಅನುಸರಿಸುತ್ತಾ ಹೆಜ್ಜೆ ಹಾಕಬೇಕಿತ್ತು. ತಲೆ ಮೇಲಿನ ಕಳಸ ತಪ್ಪದಿರಲಿ ಎಂದು ಪ್ರತಿಯೊಬ್ಬ ಹೆಂಗಸಿನ ಜೊತೆ ಒಬ್ಬ ಗಂಡಸು ಅವರ ಕೈಹಿಡಿದು ಸಾಗುತ್ತಿದ್ದರು. ಎಲ್ಲರಿಗಿಂತ ಹಿಂದೆ ಇದ್ದ ನೂರಾವೊಂದನೇ ಕಳಸ ಹೊತ್ತ ಹೆಂಗಸು ತನ್ನ ಹಿಂದೆ ಯಾರೂ ಇಲ್ಲದಿರುವುದನ್ನು ಗಮನಿಸಿ ಕತ್ತಲು ಗೌವ್ವನೇ ತನ್ನನ್ನು ಮುತ್ತಿಕೊಂಡಂತೆ ಭಾಸವಾಗಿ ಭಯಪಡುತ್ತಾ ವಿಚಿತ್ರ ಸಂಕಟ ಅನುಭವಿಸುತ್ತಾ ತನ್ನ ಮುಂದೆ ಸಾಗುತ್ತಿದ್ದ ಹೆಂಗಸಿನ ಬೆನ್ನಿಗಂಟಿಕೊಂಡು ಹೆಜ್ಜೆ ಹಾಕುತ್ತಿದ್ದಳು.
ಮುಂದಿನವಳು ಅವಳ ಮೇಲೆ ಸಿಡುಕಿ “..ಯ್ಯಾ, ವಸೀ ಹಿಂದುಕ್ಕೆ ವೋಗಕ್ಕ..ನನ್ನೇ ನೂಕ್ತಿಯಾ, ಮೈಮ್ಯಾಕೇ ಬೀಳ್ತಿಯಲಾ, ನಿನ್ನಂಗೇ ನಾನುವ ಉಪಾಸ ಇವ್ನೀ, ಏಟು ಸುಸ್ತಾಗದೆ ಗೊತ್ತಾ..ದೂರು ಸರ್ದು ಬಾ..” ಎಂದಾಗ ತುಸು ಹಿಂದೆ ಸರಿದಳು ಅವಳು ಸ್ವಲ್ಪ ದೂರ ನಡೆಯುತ್ತಿದ್ದಂತೆ ಸುಸ್ತಾಗಿ ಬವಳಿ ಬಂದಂತೆ ವಾಲಾಡಿದ ಆ ಹೆಂಗಸನ್ನು ಹಿಡಿದುಕೊಂಡ ವ್ಯಕ್ತಿಯೊಬ್ಬ ಅವಳನ್ನು ತನ್ನ ದೇಹಕ್ಕೆ ಒರಗಿಸಿಕೊಂಡು ಆಸರೆ ನೀಡಿ ತಾನು ಅವಳ ಜೊತೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಅತ್ಯಂತ ಆಪ್ತ ಭಾವದಿಂದ ಅವಳ ಕಿವಿಯ ಬಳಿ ಸಾರಿ ಪಿಸುಮಾತಿನಲ್ಲಿ “..ತುಂಬಾ ಸುಸ್ತಾಗ್ತಾ ಐತಾ..?” ಎಂದು ಕೇಳಿದ. ಅವಳು ಏನು ಮಾತಾಡಲಿಲ್ಲ. ಅವನೇ ಮುಂದುವರೆದು..”ನೋಡು ಅಲ್ಲಿ ಕಲ್ಲುಚಪ್ಡಿ ಅದೆ. ಅದ್ರು ಮೇಲೆ ಕುಂತ್ಕಂಡು ಸ್ವಲ್ಪ ಹೊತ್ತು ಸುಧಾರಿಸ್ಕೋವಂತೆ ನಡೀ..” ಎಂದಾಗ ಆಕೆ ಒಂದು ಕ್ಷಣ ಬಿಟ್ಟು ಸಣ್ಣ ದನಿಯಲ್ಲಿ “..ಬ್ಯಾಡಾ..” ಎಂದಳು ಉದಾಸೀನ ಭಾವದಿಂದ.
ಬೆನ್ನ ಹಿಂದೆ ರಕ್ಷಕನಂತೆ ಅವನು ಇದ್ದದ್ದು ಅವಳಿಗೆ ಒಂದಿಷ್ಟು ಧೈರ್ಯ ತಂದಿತ್ತು. ಹಾಗೆಯೇ ಅವನ ಶರೀರದ ಶಾಖ ಇವಳ ನಡುಕವನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಿತ್ತು. ಮತ್ತಷ್ಟು ಅವನಿಗೆ ತನ್ನ ಬೆನ್ನು ಆನಿಸಿಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಳು ಅವಳು. ಅವನು ಅವಳಿಂದ ಅಷ್ಟು ಒತ್ತಾಸೆ ದೊರೆಯುತ್ತಿದ್ದಂತೆ ಕಳಸ ಹಿಡಿದುಕೊಂಡಿದ್ದ ಅವಳ ಎರಡೂ ಕೈಗಳ ತೋಳುಗಳನ್ನು ಹಿಡಿದುಕೊಂಡು “..ಪಾಪ, ಅಷ್ಟೊತ್ತಿಂದ ಕೈಯೆತ್ತಿ ಕಳ್ಸ ಹಿಡ್ಕಂಡಿದ್ದಿಯಾ ನೀನು..ತೋಳಲ್ಲಿ ಸೋಲು ಕಾಣುಸ್ಕಂಡು ಅದೆಷ್ಟು ಹಿಂಸೆ ಪಡ್ತಿದ್ದಿಯಾ ಅಂತ ನಂಗೆ ಅರ್ಥ ಆಗ್ತದೆ. ಅದ್ಕೆಯಾ ನಾನೊಸಿ ನನ್ನ ಕೈನ ಆಸ್ರಿಗೆ ಕೊಟ್ಟೆ, ಬೇಸ್ರ ಮಾಡ್ಡಬ್ಯಾಡ..”ಎಂದ.
ಅವಳು ಮೌನದಲ್ಲೇ ಪ್ರತಿಕ್ರಿಯಿಸಿದಂತೆ ನಿಟ್ಟುಸಿರಿಟ್ಟಳು. ಅವಳಿಂದ ಸಕಾರಾತ್ಮಕ ಸ್ಪಂದನೆಯನ್ನು ಗ್ರಹಿಸಿದ ಆತ “..ಮಾತಾಡೋಕು ಶಕ್ತಿ ಇಲ್ಲದಷ್ಟು ಸುಸ್ತಾಗಿದ್ದೀಯ ನೀನು. ನೀನೇಳ್ದೇ ಇದ್ರು ಬುಡು ನಂಗೆ ಎಲ್ಲಾ ಅರ್ಥ ಆಗುತ್ತೆ..” ಎಂದು ಹೇಳಿ ಮುಂದೆ ಸಾಗುತ್ತಿದ್ದ ಹೆಂಗಸಿನಿಂದ ಐದಾರು ಹೆಜ್ಜೆ ಹಿಂದಕ್ಕೆ ಇರುವಂತೆ ಅಂತರ ಕಾಯ್ದುಕೊಂಡು ಕ್ಷಣನಿಂತು, ಕ್ಷಣ ನಡೆಯುತ್ತಾ ಸುತ್ತಮುತ್ತ ಯಾರು ಇಲ್ಲದನ್ನು ಗಮನಿಸಿ ಅವಳ ಕಿವಿಯ ಬಳಿ ಬಾಗಿ “ನಿನ್ನ ಹೆಸರೇನು..?” ಎಂದು ಕೇಳಿದ. ತನ್ನ ತೋಳುಗಳನ್ನು ಸೋಲಿನ ನೋವುಣ್ಣದಂತೆ ದಿಪ್ಪಾಗಿ ಹಿಡಿದುಕೊಂಡಿದ್ದ ಅವನ ಕೈಗಳಮೇಲೆ ನಂಬಿಕೆ ಹುಟ್ಟಿತ್ತು ಅವಳಿಗೆ. ಅದೇ ಸಣ್ಣ ಸ್ವರದಲ್ಲಿ “ಸಕ್ಕು..” ಅಂದಳು. ಚುಟುಕಾಗಿಯೇ ಉತ್ತರಿಸುತ್ತಿದ್ದವಳ ಭುಜದಿಂದ ಮೊಣಕೈವರೆಗೆ ಮಿದುವಾಗಿ ಒತ್ತಲಾರಂಭಿಸಿದ ಅವನು ತನ್ನ ಪ್ರಶ್ನೆ ಮುಂದುವರಿಸುತ್ತಾ “ಯಾವೂರು ನಿಂದು..?” ಎಂದು ಕೇಳಿದಾಗ ಅವನ ಒತ್ತುವಿಕೆ ಹಿತವೆನಿಸಿ ತಾನು ಮೃದು ಭಾವದಿಂದ “ಕಾಟಳ್ಳಿ..” ಎಂದಳು.
ಕಾಟಳ್ಳಿಯ ಹೆಣ್ಣು ಎಂಥಾ ಚಂದದ ಮೈಮಾಟಗಿತ್ತಿ.. ಹೆಚ್ಚು ಕಾಟ ಕೊಡದೆ ಕೂಟಕ್ಕೆ ಅಸ್ತು ಎಂದರೆ ಸಾಕೆಂದುಕೊಂಡ ಆತ ತುಸು ಬೆನ್ನು ಸೆಟೆದು ನಿಲ್ಲಲು ಯತ್ನಿಸಿದವಳ ಕಂಡು “ಎಲ್ಲಿ.., ಇಲ್ಲಿ ನೋಯ್ತಾಯ್ತಾ..” ಎಂದು ಅತಿಯಾಗಿ ಕಾಳಜಿ ವ್ಯಕ್ತಪಡಿಸುತ್ತಾ ಅವಳ ಪ್ರತಿಕ್ರಿಯೆಗೂ ಕಾಯದೆ ಅವಳ ಬೆನ್ನುಹುರಿಯ ಉದ್ದಕ್ಕೂ ತನ್ನ ಕೈಗಳ ಹೆಬ್ಬೆರಳಿನಿಂದ ನಿಧಾನವಾಗಿ ಒತ್ತುತ್ತಾ ನೀವತೊಡಗಿದ. ಅವಳ ಬೆನ್ನಿನ ಅಸ್ತಿಮಜ್ಜೆಯೊಳಗಿನ ಸಜ್ಜೆಯ ಮೇಲೆ ಅಡ್ಡಾದಿಡ್ಡಿ ಹೆಜ್ಜೆಹಾಕಿ ನರ್ತಿಸುತ್ತಿದ್ದ ನೋವು, ಸೆಳೆತ, ಎಲ್ಲವೂ ಅರೆಗಳಿಗೆಯಲ್ಲಿ ಮಂಗ ಮಾಯವಾಗಿದ್ದವು. ಅವನು ಮುಂದಿನ ಪ್ರಶ್ನೆ ಕೇಳುವ ಮೊದಲೇ ಅವಳು “ನಾನು ಈ ಊರ ಸಣ್ತಮ್ಮಣ್ಣನ ನಾದ್ನಿ..” ಎಂದಳು.
ಅದನ್ನು ಕೇಳಿ ಅವನು ಅಚ್ಚರಿ ಪಡುತ್ತಾ “ಅಲ್ಲಾ, ಸಣ್ತಮ್ಮನ ಹೆಂಡ್ತಿ ನೋಡಿದ್ರೆ ಅಮಾಸೆ! ನೀನು ನೋಡಿದ್ರೆ ಹುಣ್ಮೆ!! ಅದೆಂಗೇ..!!?” ಎಂದು ಕೇಳಿದಾಗ ಅವಳು ಹುಬ್ಬುಗಂಟಿಕ್ಕುತ್ತಾ “ಅದೇನಾ, ನಾಕಾಣೇ..ನಮ್ಮವ್ವುನ ಕೇಳ್ಬೇಕು..” ಎಂದಳು. ಒತ್ತರಿಸಿಬಂದ ನಗುವನ್ನು ಹತ್ತಿಕ್ಕುತ್ತಾ “ಹೋಗ್ಲಿಬುಡು, ಅದು ಕಟ್ಕೊಂಡು ನಂಗೇನೂ,.. ಅದೂ.., ನಿನ್ನ ಗಂಡಾ..”ಎಂದು ಕೇಳಿದಾಗ ಅವಳು ನಿಟ್ಟುಸಿರೊಂದು ಹೊರಹಾಕಿ “ನನ್ಗಂಡ ಕಾಟಳ್ಳಿ ಇಟ್ಗೆ ಪ್ಯಾಕ್ಟ್ರೀಲೀ ಕೆಲ್ಸಮಾಡಾ ಮುನಿಸ್ವಾಮಿ. ಮದುವಾಗಿ ನಾಲ್ಕು ವರ್ಷ ಆಯ್ತು, ಮಕ್ಳಾಗಿಲ್ಲ..ನಮ್ಮಕ್ಕ ಈಗ ಎರಡನೇ ಮಗಿನ ಬಾಣಂತಿ. ಅವ್ಳ ಬಾಣಂತನ ಮಾಡಕ್ಕೆ ಅಂತ ನನ್ನ ಕರುಸ್ಕಂಡವಳೇ.. ಹಂಗೆಯಾ ಈ ಊರ್ಮಾರವ್ವುಂಗೆ ಹರ್ಕೆ ಮಾಡ್ಕಂಡ್ರೆ ವರ್ಷುದೊಳ್ಗೆ ಮಕ್ಳಾಯ್ತವೆ ಅಂತ ಅವಳೇ ಹೇಳಿ ಹರಕೆ ಮಾಡ್ಸಿದ್ಲು. ನಂಗೇನು ಈ ದ್ಯಾವ್ರು..ಹರ್ಕೆ ಅನ್ನಾದ್ರು ಮ್ಯಾಗೆ ನಂಬ್ಕೆ ಇಲ್ಲ.. ನಮ್ಮ ಅಕ್ಕುನ ಮನ್ಸಿಗೆ ಬ್ಯಾಸ್ರ ಆಯ್ತದಲ್ಲ ಅಂತವ ಒಪ್ಕಂಡೆ. ಅಲ್ಲ ತಿಳಿದಂತರು ನೀವೇ ಯೋಳೀ, ಗಂಡ ಅನ್ನುಸ್ಕೊಂಡಿರಾ ಆ ಪಿಂಡ ಒಂದು ದಿನಾರಾ ನೆಟ್ಟುಗೆ ಸಂಸಾರ ಮಾಡಿದ್ರೆ ತಾನೇ ಮಕ್ಳು-ಮರಿ ಅಂತವ ಆಗಾದು, ಅದಕ್ಕೆ ಹೊಟ್ಟೆಗೆ ಹಿಟ್ಟು, ಮಂಗಕ್ಕೆ ದಟ್ಟಿ, ಕುಡಿಯಾಕೆವೊಟು ಕಳ್ಳು ಇದ್ರೆ ಸಾಕು ಅವಯ್ಯುಂಗೆ..ಥೂ!! ಅವ್ನು ನೆಟ್ಟುಗೆ ಪಿರೂತಿ ತೋರಿದ್ರೆ ಇವತ್ತು ನಾನು ಈ ಕತ್ಲೇಲೀ ಮೈಮೇಲೆ ತಣ್ಣೀರ ಹೊಯ್ಕಂಡು, ಹಣಭಾರುದ ಕ್ವಡ ಹೊತ್ಕಂಡು, ಬೆಳಗಾನ ಉಪವಾಸ ಬಿದ್ದು ಸಂಕಟಪಡಾದು ಬೇಕಿರ್ನಿಲ್ಲ..”ಎಂದು ಬೇಸರದಿಂದ ಲೊಚಗುಟ್ಟಿದಳು.
ಅವಳು ಆ ರೀತಿ ತನ್ನ ಅಂತರಂಗವನ್ನು ಅಪರಿಚಿತನಾದ ತನ್ನೆದುರು ತೆರೆದುಕೊಳ್ಳುತ್ತಿದ್ದಂತೆ ಅತ್ಯುತ್ಸಾಹ ಆತ್ಮವಿಶ್ವಾಸದಿಂದ ಉದ್ವಿಗ್ನಗೊಂಡ ಅವನ ಕೈಗಳ ಹೆಬ್ಬೆರಳುಗಳು ಬೆನ್ನುಮೂಳೆಯ ಕೆಳ ಅಂಚಿನಿಂದ ಮೇಲ್ಮುಖವಾಗಿ ಸಾಗಿ ಶೃಂಗದಂಚಲ್ಲಿ ಕ್ಷಣ ನಿಂತು ಅಕ್ಕಪಕ್ಕಕ್ಕೆ ಹೊರಳಿ ಕಿವಿ ಹಿಂಭಾಗದಿಂದ ಮುಂಭಾಗದ ವರೆಗೆ ತಮ್ಮ ಸಹಪಾಠಿ ಬೆರಳುಗಳೊಂದಿಗೆ ಸುರುಳಿಯಾಕಾರದಾಟ ಆಡುತ್ತ ಹಿತವಾಗಿ ಸುತ್ತಿಸುತ್ತಿ ನೋವಾಗದಂತೆ ಒತ್ತತೊಡಗಿದವು. ತನ್ನ ಬೆನ್ನಿನ ತಳಪಾಯದಿಂದ ಭುಗಿಲೆದ್ದ ಬಿಸಿಯ ಭಾವವೊಂದು ಕುತ್ತಿಗೆಯ ಗೋಣಿನವರಿಗೂ ಪ್ರವಹಿಸಿ ಕಿವಿಯಲ್ಲಿ ಧರಿಸಿದ್ದ ಬೆಂಡೋಲೆಯ ಬಿಳಿಯ ಹರಳುಗಳಲ್ಲಿ ಹೊಸ ಹೊಳಪನ್ನು ತುಂಬಿದಂತೆ ಭಾಸವಾಗಿ ಒಮ್ಮೆ ನವಿರಾಗಿ ಕಂಪಿಸಿದಳು ಆ ಹೆಂಗಸು.
ಕೂಡಲೇ ಆ ಕಂಪನದ ಹಪಹಪಿಕೆ ಯ ಜಾಡುಹಿಡಿದ ಅವನು “ಅಲ್ಲಾ, ಅವ್ನು ಒಬ್ಬ ಗಂಡ್ಸಾ, ಛೇ ಛೇ! ನಿನ್ನಂಥಾ ಸುಂದ್ರಿ ಹೆಂಡ್ತಿ ಇದ್ರೂ,..! ಹೋಗ್ಲಿ ಬಿಡು ಅವ್ನ ವಿಷ್ಯಾ ನಂಗ್ಯಾಕೆ.. ಒಂದು ಮಾತು ಹೇಳ್ಳಾ ಸಕ್ಕೂ, ನೀನು ನಿಮ್ಮ ಭಾವ ಸಂತಮ್ಮಣ್ಣನ ಜೊತೆ ಕಲ್ಯಾಣಿ ಹತ್ರ ಗಂಗೆಪೂಜೆ ನಡೆಯುವ ಜಾಗಕ್ಕೆ ಬಂದಲ್ಲಾ ಆವಾಗ್ಲೇ ನಿನ್ನ ನೋಡ್ದೆ ನಾನು. ಈ ಸಣ್ಣನ ಜತ್ಗೆ ಬಂದಿರೋ ಚಂದುಳ್ಳಿ ಚೆಲುವೆ ಯಾರು ಅಂತ ಸೋಜ್ಗ ಆತು. ಕಾಮನಬಿಲ್ಲಂತ ಹುಬ್ಬು, ಸಂಪ್ಗೆವೂನಂತ ಮೂಗು, ಕಳ್ತಿರಾ ತೊಂಡೆಹಣ್ಣಂತಾ ತುಟಿ, ಕಪ್ಪಾಗಿರಾ ಮೋಡ್ದಂತ ತಲೆಕೂದ್ಲು.. ನೀನುಟ್ಟಿರಾ ಹಸ್ರು ಸೀರೆ ಮತ್ತೆ ಜಾಕಿಟಂತೂ ನೊರೆಹಾಲ್ನಂಗೆ ಬೆಳ್ಳುಗಿರಾ ನಿನ್ನ ಮೈಮಾಟ್ವಾ ಪೂರಾ ತಮ್ಮೊಳ್ಗೆ ಬಚ್ಚಿಟ್ಕಳ್ಳಾಕೆ ಆಗ್ದೆ ಕಷ್ಟಪಟ್ಟಿದ್ದು ನೋಡಿ ‘ಇವ್ಳು ಯಾರಪ್ಪ ಒಳ್ಳೆ ಸಿನಿಮಾ ಹಿರೋಯಿನ್ನಂಗೆ ಅವ್ಳಲಾ..’ ಅಂತ ಅಂದ್ಕಂಡೆ ಗೊತ್ತಾ.., ದಿಟ ಹೇಳ್ಲಾ ನಾನಷ್ಟೇ ಅಲ್ಲ ನನ್ನಂಗೆ ಅದೆಷ್ಟು ಗಂಡಸರು ಅಂಗೇ ಭಾವ್ಸವ್ರೇ, ನಂಗಾದಂಗೆ ಇನ್ನುವಾ ಅದೆಷ್ಟು ಗಂಡಸ್ರು ಮೈನಾ ಬೆಚ್ಚುಗಾಗ್ಸೈತೆ ಈ ನಿನ್ನ ರತಿರೂಪ ಗೊತ್ತಾ..!! ನಾನು ಹಿಂಗಂದೆ ಅಂತ ಬೇಸ್ರ ಮಾಡ್ಕೋಬೇಡ, ಯಾಕಂದ್ರೇ ನೀನು ಇರೋದೆ ಹಂಗೆ! ಅದು ನಿನ್ನ ಗಂಡಂಗೆ ಅರ್ಥ ಆಗ್ಬಾರ್ದಾ ಛೇ, ಬಿಡು..” ಎಂದ ಅವಳ ಮನದಾಳದ ನೋವಿಗೆ ಮಿಡಿಯುವಂತೆ.
ಅವಳು ತನ್ನ ಬಗ್ಗೆ ಮರುಕಪಡುತ್ತಾ ತಾನು ಎಷ್ಟು ಚಂದದ ಹೆಣ್ಣು ಎಂಬುದನ್ನು ತನಗೆ ಅರಿವಾಗುವಂತೆ ಮಾಡಿದ ಅವನ ಬಗ್ಗೆ ಆಪ್ತಭಾವ ತಾಳಿದ ಆಕೆ ಸಪ್ಪಗಿನ ದನಿಯಲ್ಲಿ “..ನನ್ನೋಡಿ ಯಾವ್ಗಂಡ್ಸಿನ ಮೈ ಬೆಚ್ಗಾದ್ರೇನು ಬಂತು ಭಾಗ್ಯ, ನನ್ಗಂಡ ಅನ್ನುಸ್ಕಂಡಿರಾ ಆ ಪ್ರಾಣಿ ಉಸ್ರಾಡ್ತಿರಾ ಹೆಣುದಂಗೆ ತಣ್ಣುಗೆ ಬಿದ್ದಿರ್ತದೆ ಮಗ್ಲಾಗೇ.., ಅಲ್ಲ ನೀವೇ ಯೋಳಿ, ಹೊಲವ ವೈನಾಗಿ ಉಳ್ಮೆಮಾಡಿ ಬೀಜಬಿತ್ತಿ ಬೆಳೆ ಬೆಳುದ್ರೆ ತಾನೆಯಾ ಮನೆಲಿರಾ ಕಣ್ಜ ತುಂಬಾದು. ಅದುಬುಟ್ಟು ಏನೂ ಮಾಡ್ದಲೆಯಾ ಕಣ್ಜುದ ಮುಂದೆ ಗಂಧುದಕಡ್ಡಿ ಬೆಳ್ಗಿ ಹರ್ಕೆ ಮಾಡ್ಕಂಡ್ರೆ ದವ್ಸಧಾನ್ಯ ತುಂಬಾತಾ.., ಹಂಗೆಯಾ ಸಂತಾನ್ವಾಗ್ಲೀ, ಸಂಪತ್ತಾಗ್ಲೀ ಮನೆತುಂಬ ತುಂಬಿರ್ಬೇಕು ಅಂದ್ರೆ ಅದುಕ್ಕೆ ತಕ್ನಾಗಿ ದುಡ್ಮೆ ಮಾಡ್ಬೇಕು. ಇದು ಆ ನನ್ನ ದಂಡ್ಪಿಂಡ ಗಂಡುನ ತಲಿಗೆ ಈ ಜನುಮ್ದಾಗೆ ಹೊಳಿಯಾಕುಲ್ಲ ಬುಡಿ. ನಾನಂತುವಾ ಎಲ್ಲಾ ಆಸೆಗುಳ್ಗುವ ಎಳ್ಳುನೀರು ಬಿಟ್ಟೀವ್ನೀ..ಏನಾ ನಮ್ಮಕ್ಕುನ ಮನ್ಸಿಗೆ ಸಮಾಧಾನ ಆಗ್ಲಿ ಅಂತವ ಈ ಕುಂಭ್ಗಳ್ಸ ಹೊತ್ಕಂಡೀವ್ನಿ, ಯಾಕಾ ಬೋ ಸೋಲಾಕೆ ಹತ್ಯವೆ ಕೈಗೋಳು, ಯಾವಾಗ ಕೈಬಿಡ್ತಿನಾ ಕಾಣೇ..ಅದ್ರಾಗೂ ನಂಗೊರ್ಸಿರಾ ಈ ಕುಂಭುದ ತಳ ಬ್ಯಾರೇ ತಗ್ಗದೆ..” ಎಂದಳು ಮತ್ತಷ್ಟು ಬಳಲಿಕೆಯ ಭಾವ ವ್ಯಕ್ತಪಡಿಸುತ್ತ.
ಆ ಕೂಡಲೇ ಕಳಸ ಹಿಡಿದ ಅವಳ ಕೈಯನ್ನು ಬಿಡಿಸಿ ತಾನು ಹಿಡಿದುಕೊಂಡ ಆತ “..ನೀನು ಆರಾಮವಾಗಿ ಕೈಬೀಸುತ್ತಾ ನಡಿ.. ನಾನು ಕಳಸ ಹಿಡ್ಕೋತೀನಿ, ಈಗಿನ್ನೂ ಸ್ನಾನಮಾಡಿ ಮಡಿಯಾಗೇ ಬಂದಿದ್ದೇನೆ. ನಿನ್ನ ವ್ರತಕ್ಕೆ ಏನು ಭಂಗ ಆಗೋಕೆ ನಾನು ಬಿಡಲ್ಲ ಆಯ್ತಾ..” ಎಂದವನ ಕಂಡು “..ಅಲ್ಲಾ ಅದೂ, ಕುಂಭ.. ಸರಿಯಾಗಿ..” ಎಂದು ರಾಗ ಎಳೆಯುತ್ತ ತಡವರಿಸಿದ ಅವಳಿಗೆ ಸ್ಥೈರ್ಯ ನೀಡುತ್ತಾ “..ನೋಡು ಸಕ್ಕು, ಇಲ್ಲಿರುವ ನೂರವೊಂದು ಕುಂಭಗಳಿಗೆಲ್ಲಾ ಹೋಲಿಸಿದರೆ ನಿನ್ನದೇ ಸ್ಟ್ರಾಂಗು.ಒಂದುಚೂರು ಅಲುಗಾಡದಂಗೆ, ತುಳುಕಾಡದಂಗೆ.. ಸರಿಯಾಗಿ ನೆಪ್ಪಾಗಿ, ದಿಪ್ಪಾಗಿ ಕೂತಿದೆ.. ನೀನು ಚಿಂತೆ ಮಾಡಬೇಡ, ನಾನಿದ್ದೀನಲ್ಲ ಬೀಳೋಕೆ ಬಿಡಲ್ಲ..” ಎಂದ. ಮತ್ತಷ್ಟು ದೂರ ಸಾಗಿದ ನಂತರ ತಮ್ಮಿಂದ ಅಷ್ಟುದೂರ ಸಾಗಿದ್ದ ಕಳಸದ ಸಾಲನ್ನು ನೋಡಿದ ಆಕೆ ತುಸು ಅವಸರಪಡಿಸುತ್ತಾ “..ಅವರಾಗಲೇ ಅಷ್ಟು ದೂರ್ದಗದಾರೆ, ನಾವಿನ್ನುವ ಇಲ್ಲೇ..ಬೇಗ್ಬೇಗ ಹೋಗ್ಬೇಕು.. ನಾನೇ ಕಳ್ಸ ಇಟ್ಕಂತೀನಿ ಬುಡಿ ಬೇಗ ಹೆಜ್ಜೆ ಹಾಕ್ಬೈದು..” ಎಂದಾಗ ಅವನು ಅಷ್ಟೇ ಸಮಾಧಾನದಿಂದ “..ಅವಸರವೇನಿಲ್ಲ.. ನಿಧಾನುಕ್ಕೆ ಹೋಗನ. ಆ ಕಳಸದ ಸಾಲು ಇನ್ನೂ ಮಾರವ್ವನ ಗುಡಿ ಮುಟ್ಟೋಕೆ ಎರಡು ಗಂಟೆ ಹಿಡಿಯುತ್ತೆ.. ಯಾಕೆ ಗೊತ್ತಾ ಕಳಸ ಹೊತ್ತಿರುವ ಹೆಂಗಸರ ಮೈಮೇಲೆ ದಾರಿಯುದ್ದಕ್ಕೂ ಮಾರವ್ವ ಬರ್ತಾನೆ ಇರ್ತಾಳೆ.. ನಿಂಬೆಹಣ್ಣು, ತೆಂಗಿನಕಾಯಿ, ಕರ್ಪೂರ, ಊದ್ಗಡ್ಡಿ.. ಸಾಮ್ರಾಣಿ ಅಂತ ಬೇಡಿಕೆ ಹಾಕಿ ಪೂಜೆ ಮಾಡಿಸಿಕೊಳ್ತಾನೇ ಇರ್ತಾಳೆ. ಅಲ್ಲೇ ಅರ್ಧ ಅರ್ಧ ಗಂಟೆ ನಿಂತು ಸಾಗುತ್ತೆ ಕಳಸದ ಸಾಲು. ಅದಕ್ಕೆ ನಾನು ಅವರಿಂದ ಸ್ವಲ್ಪ ದೂರನೇ ನಿನ್ನನ್ನು ಉಳಿಸಿಕೊಂಡಿದ್ದು, ಆರಾಮಾಗಿ ಸಾಗಲಿ ಅಂತ. ನಾವು ಇಷ್ಟುದೂರ ಇರೋದು ಯಾರಿಗೂ ಕಾಣ್ಸಲ್ಲ ನೀನು ಗಾಬ್ರಿ ಆಗ್ಬೇಡ.. ಬಂಗಾರ” ಎಂದ. ಅವನು ಹಾಗೆಂದೊಡನೆ ಹಿಂದಕ್ಕೆ ತಿರುಗಿ ನೋಡಿ ಆಕೆ ಹುಸಿಕೋಪ ಪ್ರಕಟಿಸುತ್ತಾ “ಯಾಕೆ ನನ್ನ ಹಾಗಂದ್ರಿ!?”ಎಂದು ಕೇಳಿದಳು. ಪ್ರತಿಯಾಗಿ ನಕ್ಕ ಅವನು ತಕ್ಷಣ ಅವಳ ಮೊಗವನ್ನು ಬೊಗಸೆಯಲ್ಲಿ ಹಿಡಿದು “..ನೋಡು, ನೋಡು.. ನಾನು ಹೇಳಿದ್ದು ನಿಜ ಅಲ್ವಾ ಈ ನಿನ್ನ ಬೆಣ್ಣೆಯಂಗೆ ನುಣ್ಪಾಗಿರೋ ಕೆನ್ನೆ ಗಲ್ಲಾ ಎಲ್ಲಾ ಸೇಬಿನ ಹಣ್ಣಂಗೆ ಕೆಂಪಾಗಿಹೋದೋ..ನಿನ್ನ ಬಂಗಾರ ಅಂತ ಕರೀದೇ ಹೆಂಗಿರ್ಲಿ ಹೇಳು ಸಕ್ಕೂ, ನೋಡು ನನ್ನ ಎದೆಬಡ್ತಾನುವ ಬಂಗಾರ, ಬಂಗಾರ ಅಂತ ಬಡ್ಕಾತೈತೇ..” ಎಂದು ಹೇಳಿ, ಒಪ್ಪಿಗೆಯನ್ನು ಸಾರಿದಂತೆ ಕಣ್ಣುಕಪ್ಪು ಹಚ್ಚಿಕೊಂಡಿದ್ದ ಅವಳ ಕಣ್ರೆಪ್ಪೆಗಳು ನಾಚಿಕೆಯಿಂದ ಮುಚ್ಚಿಕೊಂಡಾಗ ಅವುಗಳ ಮೇಲೆ ಮಿದುವಾಗಿ ತುಟಿ ಒತ್ತಿಬಿಟ್ಟ ಅವನು. ಕಗ್ಗತ್ತಲಲ್ಲಿ ಬೆಳಕಾಗಿ ತನ್ನ ಬಳಿ ಬಂದವನು, ಕೊರೆಯುವ ಚಳಿಗೆ ನಡುಗುತ್ತಿದ್ದ ತನ್ನ ದೇಹಕ್ಕೆ ಬಿಸುಪಿತ್ತವನು, ಬಳಲಿದ್ದ ತನ್ನ ತೋಳುಗಳಿಗೆ ಕಸುವಾದವನು, ನೊಂದ ಮನಸ್ಸಿಗೆ ಸಾಂತ್ವಾನ ವಾದವನು, ವ್ಯರ್ಥವೆನಿಸಿದ ತನ್ನ ರೂಪಕ್ಕೆ ಅರ್ಥ ನೀಡಿದವನು..ಹೀಗೇ ಬರಡಾದ ತನ್ನ ಭಾವನೆಗಳಿಗೆ ಪ್ರೀತಿಯಿಂದ ಮಿಡಿದವನ ಸಾಂಗತ್ಯ ಸಹ್ಯವೆನಿಸಿ ಅವನಿತ್ತ ಮುತ್ತನ್ನು ತನ್ನ ಮೂಗಿನ ನತ್ತಂತೆ ಅಮೂಲ್ಯ ಎಂದು ಭಾವಿಸಿ ಸ್ವೀಕರಿಸಿದಳು ಆಕೆ.
ಅವನು ಅಷ್ಟೇ ಮಿದುವಾಗಿ ಅವಳ ಭುಜದ ಮೇಲೆ ಭರವಸೆಯ ಭಾವ ಒತ್ತಿ “..ನೋಡು ಸಕ್ಕು, ನನ್ನ ಜೀವಮಾನದಲ್ಲೇ ನಿನ್ನಂತಹ ಸುಂದ್ರವಾಗಿರೋ ಹೆಣ್ಣನ್ನು ಕಂಡಿಲ್ಲ, ನಾನು ಈ ಊರಿನ ಪಟೇಲ್ರು ಮಗ ಆಗಿರೊ ನನ್ನ ಒಲಿಸ್ಕೊಳ್ಳಾಕೆ ಅದೆಷ್ಟು ಹೆಂಗಸ್ರು ಕಾಯ್ತಾ ಇದ್ದಾರೆ ಗೊತ್ತಾ.., ನಾನು ಹುಂ ಅನ್ನೋದೇ ಕಾಯ್ತಿದ್ದಾರೆ, ಅಂತದ್ರಲ್ಲಿ ನಾನು ನಿನ್ನ ಸೆರಗಿನ್ಸೆರ್ಗೆ ಬಂದಿದ್ದೀನಿ ಅಂದ್ರೆ ಅರ್ಥಮಾಡ್ಕೋ.. ನೀನು ಅದೆಷ್ಟು ರೂಪ್ವಂತೆ, ಗುಣ್ವಂತೆ ಅಂತ. ನೋಡು ನೀನು ಒಪ್ಪೋದಾದ್ರೆ ನೀನು ತೊಟ್ಲು ಮಾರವ್ವುಂಗೆ ಮಾಡ್ಕೊಂಡಿರೋ ಹರ್ಕೆನಾ ನಾನು ಈಡೇರೋ ಹಾಗೆ ಮಾಡ್ತೀನಿ, ಹೆಂಗಿದ್ರೂ ನಿಮ್ಮಕ್ಕನ ಬಾಣಂತನ ಮಾಡೋಕೆ ಅಂತ ನಮ್ಮೂರಿಗೆ ಬಂದಿದ್ದೀನಿ ಅಂತೀಯಾ.. ಇನ್ನು ಮೂರು ತಿಂಗಳಾದ್ರೂ ಇಲ್ಲೇ ಇರ್ಬೇಕಾಗುತ್ತೆ.. ದಿನಾ ರಾತ್ರಿ ನಿನ್ಗೆ ಅನ್ಕೂಲ ಆಗೋ ಟೈಮ್ಗೆ ನಮ್ಮ ತೋಟದ ಮನೆಗೆ ಬಂದ್ಬಿಡು, ಅದಿರೋ ಜಾಗ ತೋರಿಸ್ತೀನಿ.. ಏನಂತೀಯಾ, ಒಪ್ಗೆನಾ ನನ್ನ ಬಂಗಾರಾ..” ಎಂದು ಅತಿಯಾದ ಮುದ್ದಿನಿಂದ ಕೇಳಿದ. ಅವಳು ಏನು ಹೇಳದೆ ಮೌನಿಯಾದಾಗ ಮೌನಂ ಸಮ್ಮತಿ ಲಕ್ಷಣಂ ಅಂತಾರೆ ಎಂದುಕೊಂಡ ಅವನು ಅವಳನ್ನು ಮೊದಲಿನಂತೆ ಮುಂದಕ್ಕೆ ತಿರುಗಿಸಿ ನಿಲ್ಲಿಸಿ “ಇನ್ನೊಂದು ನಾಲ್ಕು ಹೆಜ್ಜೆ ಮುಂದೆಹೋದ್ರೆ ಎಡಕ್ಕೆ ಹೊಳ್ಳು ದಾರಿಲಿ ಒಂದು ಪಾಳ್ಗುಡಿ ಐತೆ, ಅಲ್ಲಿ ಹಗಲುಹೊತ್ತೇ ಯಾರು ಬರಲ್ಲಾ.. ಇನ್ನು ಇಷ್ಟೊತ್ತಲ್ಲಂತೂ ಇಲ್ಲವೇ ಇಲ್ಲ. ಆಗೋ ಒಳ್ಳೆಯ ಕೆಲ್ಸ ಇವತ್ತೇ ಆಗ್ಲಿ.. ಈ ಘಳ್ಗೆನೇ ಶುಭ ಮುಹೂರ್ತ ಅಂದ್ಕೊಳ್ಳೋಣ..ಏನಂತೀಯಾ?” ಎಂದು ನುಡಿದ ಅವನು ಮಂಡಿಗೆ ಸವಿಯಲು ಕ್ಷಣ ಗುಣಿಸತೊಡಗಿದ. ಮೆಲ್ಲನೆ ಬಾಯ್ತೆರೆದ ಅವಳು ತಡವರಿಸುತ್ತಾ “ಅದು.. ಅದೂ, ಕುಂಭ್ಗಳ್ಸಾ..”ಎಂದು ಅನುಮಾನ ವ್ಯಕ್ತಪಡಿಸಿದಾಗ, ಮೊದಲಿನಂತೆ ಅವಳ ತೋಳು ಒತ್ತುತ್ತಾ “..ಕಳಸದ ಸಾಲು ಗುಡಿಗೇಟು ತಲುಪೋದ್ರೊಳ್ಗೆ ನೀನು ಅಲ್ಲಿರ್ತಿಯಾ ಆಯ್ತಾ, ಆ ರೀತಿ ಜೋಪಾನ್ವಾಗಿ ನಿನ್ನ ಕಳ್ಸಿಕೊಡ್ತೀನಿ ನನ್ನ ರಾಣಿ.. ಆಯ್ತಾ, ನನ್ನ ಈಗ್ಲಾದ್ರೂ ನಂಬ್ತಿಯಾ..” ಎಂದು ಪ್ರೀತಿಯಿಂದ ಕೇಳಿದ. ಅವಳು “ಹುಂ” ಎಂದು ಗೋಣು ಆಡಿಸಿದ ಕೂಡಲೇ ಅವಳ ತೋಳುಗಳ ತೊರೆದ ಅವನ ಕೈಗಳು ನೇರವಾಗಿ ಆಕೆಯ ಸ್ವಂಟಕ್ಕೆ ಆತುಕೊಂಡವು. ಅವನ ಎರಡು ಕೈಗಳ ನಡುಬೆರಳಿನ ತುದಿ ಅವಳ ನಾಭಿಯ ಅಂಚನ್ನು ಮುಟ್ಟಿ ಪುಳಕಗೊಂಡವು. ಕಿಬ್ಬೊಟ್ಟೆಯಿಂದ ಮೇಲೆ ಕುಚದಂಚಿನವರೆಗೂ ಬಟಾಬಯಲಾಂಗಣ ತೆರೆದು ಅವನ ಕೈಬೆರಳುಗಳಾಟಕ್ಕೆ ಮುಕ್ತ ಕ್ರೀಡಾಂಗಣವಾಗಿ ಬದಲಾಗಿತ್ತು. ತೆವಳುತ್ತಾ, ಹೊರಳುತ್ತಾ ನೆಗೆಯುತ್ತಾ, ಕುಣಿಯುತ್ತ ನಲಿದಾಡುತ್ತಾ, ಸಾಗಿದ ಅವುಗಳ ಕಚಗುಳಿಯಾಟ ನಿಂತಿದ್ದು ಪಾಲ್ಗುಡಿ ಒಳಹೊಕ್ಕಾಗಲೇ! ಇವರ ಹೆಜ್ಜೆ ಸಪ್ಪಳಕ್ಕೆ ಗುಡಿಯೊಳಗಿದ್ದ ನಿಶಾಚರ ಹುಳಉಪ್ಪಟೆಗಳು ಸರಗುಡುತ್ತಾ ಸರಿದು ಹೋದ ಸದ್ಯಿದಾಯಿತು. ಅವಳ ತಲೆಯ ಮೇಲಿನ ಕಳಸ ಇಳಿಸಿ ಆ ಕತ್ತಲಲ್ಲೇ ಗುಡಿಯೊಳಗೆ ಮೂಲೆಯೊಂದರಲ್ಲಿ ಇರಿಸಿದ ಅವನು ಕೂಡಲೇ ಮುಂದಿನ ಸಂತಾನಕಾಮೇಷ್ಟಿಯಾಗಕ್ಕೆ ಸಿದ್ಧನಾದ. ಅವಳು ಬಯಲಾಗಿದ್ದಳು.. ಕಾಮಕೇಳಿಯ ಕೂಟದೂಟ ಸವಿಯುವ ಸಂಭ್ರಮದಲ್ಲಿ ತಮ್ಮ ಬೆತ್ತಲಾದ ದೇಹಗಳಿಗೆ ಚುಚ್ಚಿ ಕಾಟ ಕೊಟ್ಟ ಕಸಕಡ್ಡಿ, ಕಲ್ಲುಮುಳ್ಳುಗಳು ಲೆಕ್ಕಕ್ಕೆ ಬರಲಿಲ್ಲ ಅವರಿಗೆ. ಮೈ ಮೇಲೆ ಇಲಿಯೊಂದು ಜಿಗಿದು ಓಡಿದರು ಪರಿವೇ ಇರಲಿಲ್ಲ.
ಇತ್ತ ಕಲ್ಯಾಣಿಯಿಂದ ಸರಿಯಾಗಿ ಏಳುಗಂಟೆಗೆ ಹೊರಟ ಕುಂಭಗಳಸ ಉತ್ಸವ ಸಾಲು ಮಾರಮ್ಮನ ಗುಡಿ ಮುಖ್ಯದ್ವಾರ ತಲುಪಿದಾಗ ರಾತ್ರಿ ಒಂಭತ್ತುವರೆ ಆಗಿತ್ತು. ಪೂಜಾರಿ ಒಂದೊಂದೇ ಕಳಸವನ್ನು ಎಣಿಸುತ್ತಾ ಪೂಜೆಮಾಡಿ ಕೆಳಗಿಳಿಸಿಕೊಂಡು ಗುಡಿಯ ಒಳಗೆ ಇರಿಸತೊಡಗಿದ. ಮಾರವ್ವ ಮೈಮೇಲೆ ಬಂದು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿ ತಹರೇವಾರಿ ಪೂಜೆ ಮಾಡಿಸಿಕೊಂಡು, ಅರಿಶಿಣ ಕುಂಕುಮಗಳನ್ನು ಬಳಿಸಿಕೊಂಡು ಬಳಲಿ ಸುಸ್ತಾಗಿದ್ದ ಕಳಸಗಿತ್ತಿ ಯರೆಲ್ಲ ಗುಡಿಯ ಒಂದು ಬದಿಯ ಆವರಣಕ್ಕೆ ಒರಗಿದಂತೆ ಕುಳಿತು ಸುಧಾರಿಸಿಕೊಳ್ಳುತ್ತಿದ್ದರು. “..ತೊಂಭತ್ತೆಂಟು, ತೊಂಭತ್ತೊಂಭತ್ತೂ… ನೂರೂ….! ನೂರಾ…ಒಂದನೆಯ ಕಳ್ಸ ಯಾರಮ್ಮಾ…ಇನ್ನು ಬರ್ಲಿಲ್ಲಾ..!!” ಎಂದು ಕೂಗಿ ಹೇಳುವಷ್ಟರಲ್ಲಿ ಜನರ ನಡುವೆ ದಾರಿ ಮಾಡಿಕೊಂಡು ಕುಂಟುತ್ತಾ ಬಂದ ವಸ್ತ್ರವೆಲ್ಲಾ ಅಸ್ತವ್ಯಸ್ತಗೊಂಡಿದ್ದ ಹೆಂಗಸು ತಾನು ಹೊತ್ತ ಕಳಸ ಕೆಳಗಿಳಿಸುವ ಮೊದಲೇ ಅದನ್ನು ಕೈಬಿಟ್ಟು ಪ್ರಜ್ಞೆತಪ್ಪಿ ಗುಡಿಯ ಗೇಟಿನ ಹೊರಗೆ ಬಿದ್ದುಬಿಟ್ಟಳು!! “ಏನಾಯಿತು..??!!!! ಎಂದು ಅರಿಯದೇ ನೆರೆದಿದ್ದ ಭಕ್ತ ಜನಸ್ತೋಮವೆಲ್ಲ ಒಂದು ಕ್ಷಣ ಸ್ತಬ್ಧವಾಯಿತು. ಅದೇ ಸಮಯಕ್ಕೆ ಒಬ್ಬ ಗಂಡಸು ತೂರಾಡುತ್ತಾ ಜನರ ನಡುವೆ ನುಗ್ಗಿ ಬಂದು ಅವಳತ್ತ ಧಾವಿಸಿ “ಸಕ್ಕೂ.. ಸಕ್ಕೂ..” ಎನ್ನುತ್ತಾ ತಾನು ಕೆಳಗೆ ಕುಸಿದುಬಿದ್ದ. ಕೆಳಗೆ ಬಿದ್ದ ಕುಂಭಗಳಸದ ನೀರು ಹೊರಚೆಲ್ಲಿ ಅವರಿಬ್ಬರ ಹತ್ತಿರ ಹರಿದು ಬಂದು ನಿಂತಿತ್ತು. ಬೋರಲಾಗಿ ಬಿದ್ದಿದ್ದ ಇಬ್ಬರನ್ನು ತಿರುಗಿಸಿ ನೋಡಿದ ತಮಟೆ ನಿಂಗಾ ಏರು ದನಿಯಲ್ಲಿ “..ಇಬ್ರೂ ಬಾಯಾಗೂ ನೊದ್ಲೆ ಬಂದದೇ!! ಇವ್ರಿಬ್ರಿಗುವಾ ಹಾವ್ಕಚ್ಚದೇ..ಇಬ್ರೂವ ಸತ್ತೋಗವ್ರೇ..” ಎಂದು ಅರಚಿದ ಕೂಡಲೇ ಜನರ ಬಾಯಲ್ಲಿದ್ದ ಮಾರವ್ವುನ ಜಯಕಾರ ಕ್ಷಣಮಾತ್ರದಲ್ಲಿ ಆಹಾಕಾರವಾಗಿ ಬದಲಾಗಿ ಮುಗಿಲು ಮುಟ್ಟಿತ್ತು.
“..ಅಯ್ಯೋ ಇದು ನಮ್ಮ ಪಟೇಲ್ರು ಮಗಾ!!!! ಇವ್ಳು ಯಾರಾ ಗುರ್ತಾಸಿಗವಲ್ದೂ…?!!!!”
“..ಇಬ್ರೂ ಹಿಂಗಾ ಸತ್ಬಿದ್ದವ್ರಲಾ..ಯವ್ವಾ, ಮಾರವ್ವಾ..ಏನಪ್ಚಾರ ಆತೋ ಕಾಣೇಕಣೆಯವ್ವಾ..!!!”
” ಏನಾ ಮುಟ್ಚಟ್ಟಾಗದೇ ಮಡಿನಾಗೇ…ಅದ್ಕೆ ಇಂಗಾಗದೇ..”
“..ಕಾಡ್ದಾರಿಲೀ ಬರಾವಾಗ ಅಪ್ತಪ್ಪಿ ಹಾವು ಕಚ್ಚಿರ್ಬೇಕು ಇಬ್ರಿಗುವಾ, ಪಾಪಾ..!!”
“ಛೇ…ಛೇ, ಹಿಂಗಾಗ್ಬಾರ್ದಿತ್ತು..”
ಹೀಗೆ ತಲೆಗೊಂದು ಹೊಳೆದಂತೆ ಮಾತಾಡಿಕೊಂಡ ಎಲ್ಲರಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು ಅವರಿಬ್ಬರ ಸಾವು.
ಜೋಡಿ ಕೋಳಿಗಳ ಬದಲು ಜೋಡಿ ನರಬಲಿಯನ್ನೇ ತೆಗೆದುಕೊಂಡಿದ್ದ ಉರಿಮಾರಿ ತೊಟ್ಲು ಮಾರಮ್ಮನ ಮರ್ಮ ಹುಲುಮಾನವರ ಗಣನೆಗೆ ನಿಲುಕದ್ದಾಗಿತ್ತು.
***************
ಜಯಂತಿ ಚಂದ್ರಶೇಖರ್
ಶ್ರವಣಬೆಳಗೊಳ
