ಹುಬ್ಬಳ್ಳಿ, ಫೆ.25: ನಾಯಕ ಪರಾಸ್ ಡೋಗ್ರಾ(70 ರನ್, 166 ಎಸೆತ, 8 ಬೌಂಡರಿ), ಕನ್ಹಯ್ಯ ವಧಾವನ್(70 ರನ್, 109 ಎಸೆತ, 9 ಬೌಂಡರಿ)ಹಾಗೂ ಸಾಹಿಲ್ ಲೋಟ್ರಾ(ಔಟಾಗದೆ 57 ರನ್, 93 ಎಸೆತ, 7 ಬೌಂಡರಿ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡ ಕರ್ನಾಟಕ ತಂಡದ ವಿರುದ್ಧದ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ.
ಬುಧವಾರ ಎರಡನೇ ದಿನದಾಟವು ಮಂದಬೆಳಕಿನಿಂದಾಗಿ ಬೇಗನೆ ಕೊನೆಗೊಂಡಾಗ ಜಮ್ಮು-ಕಾಶ್ಮೀರ ತಂಡವು 156 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 527 ರನ್ ಕಲೆ ಹಾಕಿದೆ. ಸಾಹಿಲ್ ಹಾಗೂ ಆಲ್ರೌಂಡರ್ ಅಬೀದ್ ಮುಷ್ತಾಕ್(ಔಟಾಗದೆ 20 ರನ್, 31 ಎಸೆತ)ಏಳನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 56 ರನ್ ಸೇರಿಸಿ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದ್ದಾರೆ.
ಹುಬ್ಬಳ್ಳಿ ಕ್ರಿಕೆಟ್ ಮೈದಾನದ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ವಿಕೆಟ್ ಪಡೆಯಲು ಪರದಾಟ ನಡೆಸುತ್ತಿರುವ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡದ ಪರ ಪ್ರಸಿದ್ಧ ಕೃಷ್ಣ(3-90)ಯಶಸ್ವಿ ಪ್ರದರ್ಶನ ನೀಡಿದ್ದಾರೆ. ವಿದ್ಯಾಧರ ಪಾಟೀಲ್(1-104), ಶಿಖರ್ ಶೆಟ್ಟಿ(1-112)ಹಾಗೂ ಶ್ರೇಯಸ್ ಗೋಪಾಲ್(1-130)ತಲಾ ಒಂದು ವಿಕೆಟ್ಗಳನ್ನು ಪಡೆದಿದ್ದಾರೆ.
ಜಮ್ಮು-ಕಾಶ್ಮೀರ ತಂಡವು 2 ವಿಕೆಟ್ಗಳ ನಷ್ಟಕ್ಕೆ 284 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಶತಕವೀರ ಶುಭಮ್ ಪುಂದಿರ್ ನಿನ್ನೆಯ ಮೊತ್ತಕ್ಕೆ 4 ರನ್ ಸೇರಿಸಿ ವಿದ್ಯಾಧರ ಪಾಟೀಲ್ಗೆ ವಿಕೆಟ್ ಒಪ್ಪಿಸಿದರು.
ಔಟಾಗದೆ 52 ರನ್ ಗಳಿಸಿದ್ದ ಅಬ್ದುಲ್ ಸಮದ್ ಕೂಡ ಹೆಚ್ಚು ಹೊತ್ತು ನಿಲ್ಲದೆ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ನಾಯಕ ಪರಾಸ್ ಡೋಗ್ರಾ ಹಾಗೂ ಕನ್ಹಯ್ಯ ವಧಾವನ್ ಐದನೇ ವಿಕೆಟ್ಗೆ 110 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 417ಕ್ಕೆ ತಲುಪಿಸಿದರು.
ವಂಶಜ್ ಶರ್ಮಾ ಗಾಯಗೊಂಡ ಕಾರಣ ಕೊನೆಯ ಕ್ಷಣದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಸೇರಿಕೊಂಡಿರುವ ಸಾಹಿಲ್ ಲೋಟ್ರಾ ಅವರು ತನಗೆ ಲಭಿಸಿದ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ಕಳೆದ ವಾರ ರಣಜಿ ಟೂರ್ನಿಯಲ್ಲಿ 10,000 ರನ್ ಕ್ರಮಿಸಿರುವ ಡೋಗ್ರಾ ಅವರು ಈ ವರ್ಷದ ರಣಜಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದಾರೆ.
