
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಕನ್ನಡದಲ್ಲೇ ಜಗಳವಾಡ್ರೋ ಮಾರಾಯ್ರಾ..!
ನಮ್ಮ ನೇಚರ್ಕ್ಲಬ್ನ ಕಾರ್ಯಕ್ರಮಗಳಲ್ಲಿ ಆಗಾಗ ಏರ್ಪಡಿಸುತ್ತಿದ್ದ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪುಸ್ತಕಗಳನ್ನೇ ಬಹುಮಾನವಾಗಿ ನೀಡುತ್ತಿದ್ದೆವು. ತೇಜಸ್ವಿಯವರ ಪುಸ್ತಕಗಳನ್ನೇ ನೀಡುತ್ತಿದ್ದ ನಮಗೆ ಲೇಖಕರ ಹಸ್ತಾಕ್ಷರವಿದ್ದರೆ ಪುಸ್ತಕದ ಘನತೆ ಇನ್ನೂ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವಿದ್ದುದ್ದರಿಂದ ಹಸ್ತಾಕ್ಷರಕ್ಕಾಗಿ ದುಂಬಾಲು ಬಿದ್ದೆ.
ಪ್ರೈಸ್ ಕೊಡುವ ಪುಸ್ತಕಗಳಿಗೆ ಸಿಗ್ನೇಚರ್ ಹಾಕಿಕೊಡುತ್ತಾ “ಗೆದ್ದ ಎಲ್ಲರಿಗೂ ನನ್ನ ಹಸ್ತಾಕ್ಷರ ಬೇಕಿರುತ್ತೋ ಬೇಡವೋ ಯೋಚನೆ ಮಾಡಿಕೊಡಯ್ಯಾ”ಎಂದಿದ್ದರು ತೇಜಸ್ವಿ.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ತೇಜಸ್ವಿಯವರಿಗೆ ಇಂಗ್ಲೀಷ್ ಭಾಷೆಯ ಮೇಲೂ ಉತ್ತಮ ಹಿಡಿತ ಇತ್ತು. ದಶಕಗಳಿಂದ ತಮ್ಮ ತಿಳುವಳಿಕೆಯನ್ನು ವಿಸ್ತಾರಗೊಳಿಸಿಕೊಳ್ಳಲು ಆಂಗ್ಲ ಭಾಷೆಯ ಅನೇಕ ನಿಯತಕಾಲಿಕೆಗಳನ್ನು ನಿರಂತರವಾಗಿ ತರಿಸಿ ಓದಿಕೊಳ್ಳುತ್ತಿದ್ದರು.
ಹೆಸರಾಂತ ಲೇಖಕರ ಸಾಹಿತ್ಯವನ್ನು ಗಂಭೀರವಾಗಿ ಅವಲೋಕಿಸುತ್ತಿದ್ದರು. ಕೆಲ ಆಂಗ್ಲ ಮಾಧ್ಯಮ ಶಾಲಾ-ಕಾಲೇಜುಗಳಲ್ಲಿ ವಿಧ್ಯಾರ್ಥಿಗಳೊಡನೆ ಸಂವಾದ ನಡೆಸಿದಾಗ ಇಂಗ್ಲೀಷ್ ಭಾಷೆಯಲ್ಲಿ ಅವರು ಸಂವಹಿಸುತ್ತಿದ್ದ ಪರಿಯಂತೂ ಅಪ್ಯಾಯಮಾನವಾಗಿರುತ್ತಿತ್ತು. ಪ್ರಾಪಂಚಿಕ ಸಂಪರ್ಕ ಭಾಷೆಯಾಗಿ ಇಂಗ್ಲೀಷ್ನ ಅನಿವಾರ್ಯತೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ಒಪ್ಪಿಕೊಂಡಿದ್ದರು.
ಅವರ ತೋಟಕ್ಕೆ ಕೆಲಸಕ್ಕೆ ಬರುತಿದ್ದ ಕಾರ್ಮಿಕರು ಸಹಜವಾಗಿಯೇ ಕನ್ನಡ, ತುಳು, ತಮಿಳು, ತೆಲುಗು, ಮಳಯಾಳಂ, ಬ್ಯಾರಿ, ಉರ್ದು ಹೀಗೆ ಸ್ಥಳೀಯವಾಗಿ ಬಳಸುವ ಭಾಷೆಗಳನ್ನು ಉಪಯೋಗಿಸುತ್ತಿದ್ದರು. ಕಾರ್ಮಿಕರ ನಡುವೆ ಅವರವರಲ್ಲೇ ಕಾರಣಾಂತರದಿಂದ ಜಗಳಗಳು ಘಟಿಸಿದಾಗ, ಬೈದಾಟಗಳು ನಡೆದಾಗ ತೇಜಸ್ವಿ “ನಿಮ್ಮ ಜಗಳದ ಕಾರಣ ಮತ್ತು ವಿಷಯ ನಮಗೂ ತಿಳಿಯಬೇಕಾದರೆ ನೀವು ನಮಗೆ ಅರ್ಥವಾಗುವ ಕನ್ನಡದಲ್ಲೇ ಜಗಳವಾಡ್ರೋ ಮಾರಾಯ್ರಾ” ಎಂದು ಗದರಿಸಿದ್ದರು.
ಕನ್ನಡದಲ್ಲಿ ಏನಿದೆ ಎಂದು ಮೂಗು ಮುರಿಯುವವರೂ, ಕನ್ನಡದಲ್ಲಿ ಎಲ್ಲವೂ ಇದೆ ಎಂಬ ಅತೀ ವಿಶ್ವಾಸ ತೋರುವವರೂ ಪರಸ್ಪರ ಸಮಾಲೋಚಿಸಲಿ. ಆಗ ಮುಂದೇನಾಗಲಿಕ್ಕಿದೆ ಎಂದು ಸೂಕ್ತ ನಿರ್ಧಾರಕ್ಕೆ ಬರಬಹುದು ಎಂದಿದ್ದ ತೇಜಸ್ವಿಯವರು, ಶರವೇಗದ ಜಗತ್ತಿನಲ್ಲಿ ಅದೇ ವೇಗದಲ್ಲಿ ಭಾಷೆಯನ್ನು ಸನ್ನದ್ಧಗೊಳಿಸದಿದ್ದರೆ ಭಾಷೆಯೂ ಕುಂಟುತ್ತಾ, ಎಡವುತ್ತಾ, ಅವಸಾನಗೊಳ್ಳುತ್ತದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಹಾಗೂ ಸಮೃದ್ಧ ಸಾಹಿತ್ಯವಿರುವ ಕನ್ನಡ ಭಾಷೆ ನಮ್ಮ ಕಣ್ಣೆದುರೇ ಜನ ಬಳಕೆಯಿಂದ ತಿರಸ್ಕೃತವಾದರೆ ಆ ಅನಾಹುತಕ್ಕೆ ನಾವೆಲ್ಲರೂ ನೇರವಾಗಿ ಹೊಣೆಗಾರರಾಗುತ್ತೇವೆ. ತಂತ್ರಜ್ಞಾನಕ್ಕೆ ತಕ್ಕಂತೆ ನಮ್ಮ ಭಾಷಾ ಬಳಕೆಯನ್ನು ರೂಢಿಸಿಕೊಳ್ಳಲೇಬೇಕಾದ ಗುರುತರ ಹೊಣೆಗಾರಿಕೆಯನ್ನು ವಿವೇಚನೆಯಿಂದ ನಿರ್ವಹಿಸಲು ಸನ್ನದ್ಧರಾಗುವುದೇ ಈ ನಾಡುನುಡಿಗೆ ನಮ್ಮಿಂದ ಅಗತ್ಯವಾಗಿರುವ ಕರ್ತವ್ಯ.
ಒಂದು ಭಾಷೆಯ ನಾಶದಲ್ಲಿ ಪರಭಾಷಾ ವ್ಯಾಮೋಹ ಮತ್ತು ಸ್ವಬಾಷೆಯ ಅಂದಭಿಮಾನ ಪೈಪೋಟಿಯಲ್ಲಿ ಕೆಲಸ ಮಾಡಿರುತ್ತದೆ ಎನ್ನುವ ತೇಜಸ್ವಿ, “ಕನ್ನಡ ಭಾಷೆ ಬೆಳೆದು ಉಳಿಯಬೇಕಾದರೆ ಅದನ್ನು ಬಳಕೆ ಮಾಡಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಹಾಗೂ ನೂರಾರು ಭಾಷೆಗಳಿಗೆ ಮಾತೃ ಸ್ವರೂಪಿಯಾಗಿರುವ ಸಂಸ್ಕೃತವಿಂದು ಮೃತಭಾಷೆಯಾಗುವತ್ತ ಹೊರಟಿದೆಯೆಂದರೆ ಅದಕ್ಕೆ ಬಳಕೆಯ ಕೊರತೆಯೇ ಕಾರಣ. ನಮ್ಮ ಕನ್ನಡ ಬಾಷೆಗೆ ಆ ದಿನಗಳು ಬರಬಾರದೆಂದರೆ ನಮಗೆ ಬೇಕಿದೆಯೋ ಬೇಡವೋ ಅಂತೂ ಬದುಕಿನ ಎಲ್ಲ ವಿಭಾಗಗಳಲ್ಲೂ ಅವರಿಸುತ್ತಿರುವ ಕಂಪ್ಯೂಟರ್ ತಂತ್ರಜ್ಞಾನಕ್ಕೆ ನಮ್ಮ ಕನ್ನಡವನ್ನು ಅನುವಾಗಿಸುವತ್ತ ಗಮನಹರಿಸಬೇಕಾಗಿದೆ. ಸಾಹಿತ್ಯ ಸಮ್ಮೇಳನಗಳಿಗೆ ಕೋಟಿಗಳನ್ನು ಖರ್ಚುಮಾಡುವ ಸರ್ಕಾರ, ಸುಲಭ ಬೆಲೆಗೆ ಎಕರೆಗಟ್ಟಲೆ ಭೂಮಿಯನ್ನು ಇನ್ಫೋಸಿಸ್, ವಿಪ್ರೋಗಳಂಥ ಸಂಸ್ಥೆಗೆ ಕೊಟ್ಟಿರುವ ಸರ್ಕಾರ ಕನ್ನಡದ್ದೇ ಆದ ತಂತ್ರಾಂಶವನ್ನು ಅಭಿವೃದ್ಧಿಮಾಡಲು ಕಣಿ ಕೇಳುತ್ತಾ ಕುಳಿತಿರುವುದು ಹಾಸ್ಯಾಸ್ಪದವಾಗಿದೆ. ಭಾಷೆಯನ್ನು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸದಿದ್ದರೆ ಭಾಷೆ ಕ್ರಮೇಣ ಬಳಕೆಯಿಂದ ದೂರವಾಗಿ ಅವಸಾನ ಹೊಂದುತ್ತದೆ’’ ಎಂದು ಎಚ್ಚರಿಸುತ್ತಾರೆ.
ಕನ್ನಡ ನಾಡು ನುಡಿಯ ಬಗ್ಗೆ ವಸ್ತುನಿಷ್ಠ ನಿಖರ ನಿಲುವನ್ನು ಹೊಂದಿದ್ದ ತೇಜಸ್ವಿ “ಒಂದು ಭಾಷೆ ಜೀವಂತವಾಗಿ ಇರಬೇಕಾದರೆ ಅದನ್ನು ಬಳಸಬೇಕು. ಹಾಗೆಯೇ ಬದಲಾಗುತ್ತಿರುವ ಬದುಕಿನೊಡನೆ, ತಂತ್ರಜ್ಞಾನದೊಂದಿಗೆ ಸಮಾನಾಂತರವಾಗಿ ಹೆಜ್ಜೆ ಹಾಕಬೇಕು. ಜನ ಕಂಪ್ಯೂಟರನ್ನು ಪ್ರತಿ ಹಂತದಲ್ಲೂ ಬಳಸುತ್ತಿರುವ ಈ ಸಂದರ್ಭದಲ್ಲಿ ಸಂವಹನ ಮಾಧ್ಯಮವನ್ನಾಗಿ ಇಂಗ್ಲಿಷ್ಗೆ ಪರ್ಯಾಯವಾಗಿ ಕನ್ನಡವನ್ನು ಬಳಸುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು.ಕಾಲದೊಂದಿಗೆ ನಾವು ನಡೆಯದಿದ್ದರೆ ಬಳಕೆಯಿಲ್ಲದೆ ಕೊನೆಯುಸಿರೆಳೆಯುತ್ತಿರುವ ಸಂಸ್ಕೃತದಂತೆ ಕನ್ನಡವೂ ಅವಸಾನದತ್ತ ಸಾಗುತ್ತದೆ” ಎಂದು ಎಚ್ಚರಿಸಿ, ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಜವಾಬ್ದಾರಿ ಅರಿತು ಸಮರ್ಪಕವಾಗಿ ಕನ್ನಡ ಭಾಷೆಯ ಅಳಿವು-ಉಳಿವಿನ ನಿರ್ಧಾರ ತೆಗೆದುಕೊಳ್ಳಲು ಚುರುಕು ಮುಟ್ಟಿಸಿದರು.
ಈ ಕುರಿತು ಕುವೆಂಪು ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಹಾಸನದ ಯುವ ತಂಡಕ್ಕೆ ಪ್ರೇರಣೆ, ಪ್ರೋತ್ಸಾಹವನ್ನು ನೀಡಿದ್ದರು. ಕನ್ನಡದ ಅಭಿವೃದ್ಧಿಗೆ ಯೂನಿಕೋಡ್ ಸೌಲಭ್ಯವನ್ನು ಹಾಸನದ ಮಾರುತಿ ಸಾಫ್ಟ್ವೇರ್ ಯುವಕರಾದ ಆನಂದ್, ಮಂಜಾಚಾರಿ ಹಾಗೂ ಅವರ ತಂಡದೊಂದಿಗೆ ಶ್ರಮಿಸಿದ ತೇಜಸ್ವಿ ನೀಡಿದ ಕುವೆಂಪು ತಂತ್ರಾಂಶ ಕನ್ನಡದ ಮಾಹಿತಿ ತಂತ್ರಜ್ಞಾನಕ್ಕೆ ಬಹುದೊಡ್ಡ ಕೊಡುಗೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದರಿಂದ ಭಾಷೆಯ ಉಳಿವು, ಬೆಳವಣಿಗೆ ಮತ್ತು ಬಳಕೆ ಎಷ್ಟರಮಟ್ಟಿಗೆ ಸಾಫಲ್ಯಗೊಳ್ಳುವುದೋ ಅದನ್ನು ಕಾಲವೇ ನಿರ್ಧರಿಸಬೇಕು. ಸಂಬಂಧಿತ ಅನುದಾನ ನಿರ್ವಹಣೆಯನ್ನು ಮಾತ್ರ ತೀರಾ ಎಚ್ಚರಿಕೆಯಿಂದ ಮಾಡಬೇಕಿರುವುದು ಅತ್ಯಗತ್ಯವಾದುದೆಂದು ನನ್ನ ವೈಯಕ್ತಿಕ ಅಭಿಪ್ರಾಯ.
ಸರ್ಕಾರೀ ಹಣ, ಸಾರ್ವಜನಿಕ ಆಸ್ತಿ-ಪಾಸ್ತಿ ಎಂದರೆ ನಮ್ಮೆಲ್ಲರಿಗೂ ಏನೋ ಒಂದು ರೀತಿಯ ಸದರ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಭಾಷೆಯ ಬಳಕೆಯನ್ನು ಹೆಚ್ಚಿಸದೇ ಕೇವಲ ಪ್ರತಿಷ್ಠೆಗಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಠಾನಮಾನ ಪಡೆಯುವುದರಿಂದ ಭಾಷೆಗಿಂತ ಸಂಬಂಧಿತ ಅನುದಾನ ನಿರ್ವಹಿಸುವವರಿಗೇ ಹೆಚ್ಚು ಅನುಕೂಲವಾಗಬಹುದೆಂಬುದು ನನ್ನ ಊಹೆ.
ಮುಂದುವರೆಯುತ್ತದೆ…