ಹಾಸನ: ತಾಲೂಕಿನ ಗೊರೂರು ಪೊಲೀಸ್ ಠಾಣೆಯಲ್ಲಿ ಅಪರೂಪದ ಘಟನೆೊಂದು ನಡೆದಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿ ಠಾಣೆಯಲ್ಲೇ ಹಾರ ಬದಲಾಯಿಸಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾಯಕರಹಳ್ಳಿ ಗ್ರಾಮದ ಅಜಯ್ ಮತ್ತು ಧನಲಕ್ಷ್ಮಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಮನೆಯವರ ವಿರೋಧದ ಹಿನ್ನೆಲೆ ಇಬ್ಬರೂ ಗೊರೂರು ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ನೆರವು ಕೋರಿದರು.
ಈ ವೇಳೆ ಇಬ್ಬರೂ ಮದುವೆಗೆ ಕಾನೂನುಬದ್ಧ ವಯಸ್ಸು ಹೊಂದಿರುವುದು ತಿಳಿದ ಪೊಲೀಸರು, ಯುವತಿಯ ಪೋಷಕರಿಗೆ ಕಾನೂನು ಕುರಿತು ತಿಳುವಳಿಕೆ ನೀಡಿದರು. ಪೊಲೀಸರ ಬುದ್ಧಿಮಾತಿಗೆ ಒಪ್ಪಿದ ಪೋಷಕರು ಕೊನೆಗೆ ಮದುವೆಗೆ ಸಮ್ಮತಿ ಸೂಚಿಸಿದರು.
ಪಿಎಸ್ಐ ಧನರಾಜ್ ಸಮ್ಮುಖದಲ್ಲಿ ಅಜಯ್ ಹಾಗೂ ಧನಲಕ್ಷ್ಮಿ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಠಾಣೆಯಲ್ಲೇ ಸಿಹಿ ಹಂಚಿ ತಮ್ಮ ಮದುವೆಯ ಸಂಭ್ರಮವನ್ನು ಹಂಚಿಕೊಂಡರು.
ಪೊಲೀಸರು ನವಜೋಡಿಗೆ ಉತ್ತಮ ಜೀವನದ ಸಲಹೆ ನೀಡಿ ಆಶೀರ್ವಾದ ಮಾಡಿದರು. ಈ ಅಪರೂಪದ ಘಟನೆಗೆ ಗೊರೂರು ಪೊಲೀಸ್ ಠಾಣೆ ಸಾಕ್ಷಿಯಾಯಿತು.
