ತುಮಕೂರು: ಮಹಿಳೆಯರು ಕೇವಲ ಅದೃಷ್ಟದಿಂದ ಸಾಧನೆ ಮಾಡುವುದಿಲ್ಲ, ಬದಲಾಗಿ ತಮ್ಮ ಶ್ರಮ ಮತ್ತು ಛಲದಿಂದ ಗುರಿ ತಲುಪುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅಭಿಪ್ರಾಯಪಟ್ಟರು.
ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಜೀವನದ ಕಥೆಗೆ ನೀವೇ ಹಿರೋಯಿನ್. ಸಮಾಜದಲ್ಲಿ ನಿಮ್ಮ ಸ್ಥಾನವನ್ನು ನೀವೇ ನಿರ್ಧರಿಸಬೇಕು. ನೀವು ಇಲ್ಲಿರುವುದು ಕೇವಲ ಅದೃಷ್ಟದಿಂದಲ್ಲ, ನಿಮ್ಮ ಪರಿಶ್ರಮದಿಂದ ಎಂದು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ತುಂಬಿದರು.
ಇತಿಹಾಸದಲ್ಲಿ ಗಾರ್ಗಿ, ಮೈತ್ರೇಯಿಯಂತಹ ವಿದ್ವಾಂಸರಿದ್ದರೂ ಅವರು ಗಣ್ಯರ ಕುಟುಂಬಕ್ಕೆ ಸೀಮಿತವಾಗಿದ್ದರು. ಆದರೆ ಇಂದು ಸಾಮಾನ್ಯ ಮಹಿಳೆಯರಿಗೂ ಶಿಕ್ಷಣ ಮತ್ತು ಸಮಾನತೆಯ ಅವಕಾಶವಿದೆ. ಮಹಿಳೆಯನ್ನು ದೇವತೆಯೆಂದು ಪೂಜಿಸಿ, ಅವಳ ಸ್ವಾತಂತ್ರö್ಯವನ್ನು ಹತ್ತಿಕ್ಕುವ ಪ್ರವೃತ್ತಿಯನ್ನು ಅವರು ಖಂಡಿಸಿದರು.
ತಮ್ಮ ಜೀವನದ ಸವಾಲುಗಳನ್ನು ಹಂಚಿಕೊಂಡ ನ್ಯಾಯಾಧೀಶರು, “ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದಿಂದ ಬಂದ ಮೊದಲ ಮಹಿಳಾ ನ್ಯಾಯಾಧೀಶೆಯಾಗುವುದು ಸುಲಭವಿರಲಿಲ್ಲ. ಮದುವೆಯ ನಂತರ ಐದು ವರ್ಷಗಳ ಕಾಲ ಗೃಹಿಣಿಯಾಗಿದ್ದರೂ, ಹಠ ಬಿಡದೆ ಓದಿ ಜುಡಿಷಿಯಲ್ ಪರೀಕ್ಷೆಯಲ್ಲಿ ಯಶಸ್ವಿಯಾದೆ. ಹೆರಿಗೆಯಾದ ಎಂಟೇ ದಿನಗಳಲ್ಲಿ ಪರೀಕ್ಷೆ ಬರೆದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ” ಎಂದು ಸ್ಮರಿಸಿದರು.
ವಿಟೆಕ್ ಸೊಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕಿ ನಾಗಪ್ರಿಯಾ ಕೆ.ಜೆ. ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಒಂದು ಕನಸು, ಗುರಿ ಮತ್ತು ಮಹತ್ವಾಕಾಂಕ್ಷೆ ಇರಬೇಕು. ಕೇವಲ ದೃಷ್ಟಿಕೋನವಿದ್ದರೆ ಸಾಲದು, ಆ ಕನಸನ್ನು ನನಸಾಗಿಸಲು ನಿರಂತರ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಭಾರತೀಯ ಮಹಿಳಾ ದೃಷ್ಟಿಚೇತನ ಕ್ರಿಕೆಟ್ ತಂಡದ ಆಟಗಾರ್ತಿ ಕಾವ್ಯ ಎನ್.ಆರ್,ಭಾರತೀಯ ಮಹಿಳಾ ದೃಷ್ಟಿಚೇತನ ಕ್ರಿಕೆಟ್ ತಂಡದ ಮ್ಯಾನೇಜರ್ ಶಿಖಾ, ಪ್ರಾಂಶುಪಾಲರಾದ ಅಮೂಲ್ಯ.ಜಿ, ಹುಮೇರಾ ಪರ್ವೀನ್, ಡಾ. ಪ್ರಸನ್ನಕುಮಾರ್ ಟಿ.ಎಂ ಉಪಸ್ಥಿತರಿದ್ದರು.
