ಹಾಸನ :ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಮೂರು ಚುಟುಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚುಟುಕು ಕವಿಯಿತ್ರಿ ಗಿರಿಜಾ ನಿರ್ವಾಣಿಯವರ ಚುಟುಕು ಯಾನ ಕೃತಿಯನ್ನು ಬೆಂಗಳೂರಿನ ಲೇಖಕಿ ಪ್ರೊ. ಸೌಮ್ಯಶ್ರೀ ಲೋಕಾರ್ಪಣೆಗೊಳಿಸಿ ವಿಶ್ಲೇಷಣೆ ಮಾಡುತ್ತಾ ಚುಟುಕು ಯಾನ ಕೃತಿ ಕವಿಯಿತ್ರಿಯ ಕಾವ್ಯ ಪ್ರಭೆ ಈ ಕೃತಿಯಿಂದ ಹೊರಹೋಮ್ಮಿದೆ. ಕವಿಯಿತ್ರಿ ಈ ಕೃತಿಯಲ್ಲಿ ಸಾಮಾಜಿಕ ಕ್ಲೇಶವನ್ನು ವಿಡಂಬಿಸಿ ಸುಗಮ್ಯ ಮಾರ್ಗವನ್ನು ಸೂಚಿಸಿದ್ದಾರೆ. ತಮ್ಮ ಭಾವನೆಯ ಬದುಕು ಬವಣೆಯನ್ನು ಕೆಲವೇ ಪದಗಳಲ್ಲಿ ಸೆರೆ ಹಿಡಿದು ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಕ್ಕಳು ತಮ್ಮ ತನವನ್ನು ಹಿರಿದು ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವ ಚುಟುಕುಗಳು ಮಿನುಗಿವೆ. ಗಾತ್ರದಲ್ಲಿ ವಾಮನನoತಿರುವ ಇವರ ಚುಟುಕುಗಳು ಅರ್ಥದಲ್ಲಿ ತ್ರಿವಿಕ್ರಮನಂತಿವೆ. ಪ್ರೀತಿಯ ಸೆಲೆ ಅಮೃತತ್ವದ ಪ್ರತಿಪಾದನೆ ಮಾಡಿವೆ. ಈ ಕೃತಿ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಭೆಯಾಗಿ ಹೊರಹೊಮ್ಮಲಿ ಎಂಬುದೇ ನನ್ನ ಆಶಯವಾಗಿದೆ ಎಂದರು.
*ಅರಸು* *ಚುಟುಕು* *ಚಿತ್ತಾರಗಳು*:
ಅನುವಾದಕರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕರ್ನಾಟಕ ಸರ್ಕಾರ ದ ಮಾಜಿ ಸದಸ್ಯರಾದ ಎಂ ಎಸ್ ಶಶಿಕಲಾ ಗೌಡ ಮೈಸೂರು ಇವರು ಡಾ ಎಂ ಜಿ ಆರ್ ಅರಸುರವರ ಕುರಿತಾದ ಕವಿಯಿತ್ರಿ ಸೀತಾಲಕ್ಷ್ಮಿ ವರ್ಮಾ ಸಂಪಾದಿತ ಕೃತಿ ಅರಸು ಚುಟುಕು ಚಿತ್ತಾರ ಕೃತಿಯನ್ನು ಲೋಕಾರ್ಪಣೆಗೊಳಿಸಿ ವಿಶ್ಲೇಷಣೆ ಮಾಡುತ್ತಾ ಅರಸುರವರವರು ಚುಟುಕು ಸಾಹಿತ್ಯ ಪರಿಷತ್ ಸ್ಥಾಪಿಸಿ ಚುಟುಕು ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದವರು. ಇವರು ದೇ ಜ ಗೌ, ಅಕಬರ್ ಅಲಿ, ಸಿ ಪಿ ಕೆ, ಡಾ ಯು ಆರ್ ಅನಂತಮೂರ್ತಿ, ಹಿರೇಮಗಳೂರು ಕಣ್ಣನ್ ಹಾಗೂ ಚನ್ನವೀರ ಕಣವಿ ಇನ್ನಿತರ ಕನ್ನಡದ ಮೇರು ಸಾಹಿತಿಗಳೊಂದಿಗೆ ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನ ಹಾಗೂ ನೂರಾರು ಕಮ್ಮಟಗಳನ್ನು ಮಾಡುತ್ತಾ ಬಂದಿದ್ದಾರೆ.ಸ್ವತಃ ಇವರು ಚುಟುಕು ಸಾಹಿತಿಯಾಗಿದ್ದು ಚುಟುಕು ಯುಗಾಚಾರ್ಯ ರೇನಿಸಿಕೊಂಡಿದ್ದಾರೆ.
ಉದಯೋನ್ಮುಖ ಚುಟುಕು ಕವಿಗಳಿಗೆ ವೇದಿಕೆಗಳನ್ನು ಕಲ್ಪಿಸಿಕೊಡುವುದು ಹಾಗೂ ಚುಟುಕು ಕೃತಿಗಳನ್ನು ಪ್ರಕಟಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಒಂದೊಂದು ಚುಟುಕುಗಳು ಚಾಟಿಯಲ್ಲಿ ಛಡಿ ಏಟನ್ನು ನೀಡಿವೆ. ಕೆಲವೊಂದು ಮಾರ್ಗದರ್ಶನ ನೀಡಿವೆ. ಸಮಾಜದ ಕತ್ತಲೆಯನ್ನು ಕಳೆಯಲು ಪ್ರೀತಿಯ ಜ್ಯೋತಿಯನ್ನು ಹಚ್ಚಿದ್ದಾರೆ. ಇವರ ಒಂದೊಂದು ಚುಟುಕುಗಳು ಅತೀ ಮುಖ್ಯ ಅಂಶವಾಗಿ ಹೊರಹೊಮ್ಮಿವೆ.ಸಂಪಾದಕಿ ಸೀತಾಲಕ್ಷ್ಮಿ ವರ್ಮಾ ರವರು ಸಂಪಾದನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ ಎಂದರು.
*ಕಿರಣ್* *ಕುಮಾರ್* *ಬಿರವರ* *ಚುಟುಕಾಮೃತ*:
ಬೇಲೂರು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ,ಶಿಕ್ಷಕ ಸಾಹಿತಿ ಕಿರಣ್ ಕುಮಾರ್ ಬಿ ಸ್ವರಚಿತ ಚುಟುಕು ಕವನಗಳ ಕೃತಿ ಚುಟುಕಾಮೃತ ಕೃತಿಯನ್ನು ಲೋಕಾರ್ಪಣೆಗೊಳಿಸಿ ವಿಮರ್ಶೆ ಮಾಡಿದ ಆಚಾರ್ಯ ಕಾಮರ್ಸ್ ಕಾಲೇಜಿನ ಪ್ರಾಶುಪಾಲ ಡಾ. ಆದರ್ಶ ರವರು ಚುಟುಕುಗಳು ಸಮಾಜದ ಅಂಕು ಡೊಂಕುಗಳನ್ನು ಸೂಕ್ಷ್ಮವಾಗಿ ಕೇವಲ ನಾಲ್ಕು ಸಾಲಿನಲ್ಲಿ ಹೇಳುವ ಶಕ್ತಿಯನ್ನು ಹೊಂದಿವೆ. ಕವಿ ಕಿರಣ್ ಕುಮಾರ್ ತಮ್ಮ ಕೃತಿಯಲ್ಲಿ ಎಲ್ಲಾ ರೀತಿಯ ವಿಷಯವನ್ನು ತೆಗೆದುಕೊಂಡು ಚುಟುಕು ರಚಿಸಿದ್ದಾರೆ. ಇವರ ಒಂದೊಂದು ಚುಟುಕುಗಳು ಒಂದೊಂದು ರೀತಿಯ ಮಾರ್ಗದರ್ಶನ ನೀಡುತ್ತವೆ. ಗಟ್ಟಿತನದಿಂದ ಕೂಡಿದ್ದು ಗಟ್ಟಿ ಸಾಹಿತ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ಪ್ರೀತಿ-ಪ್ರೇಮ, ವಿಡಂಬನೆ, ಬಂಡಾಯ,ನಮ್ರತೆ, ವಿವೇಚನೆ ಇನ್ನಿತರೆ ಅಂಶಗಳು ಮೇಲೈಸಿವೆ. ಇವರ ಈ ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಉತ್ತಮ ಸಂಪನ್ಮೂಲ ಕೃತಿಯಾಗಿದೆ ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಚುಟುಕು ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಅಧ್ಯಕ್ಷ ಬಾ ನಂ ಲೋಕೇಶ್ ಮಾತನ್ನಾಡುತ್ತಾ ಇಂದು ಮೈಸೂರಿನ ವೈಧ್ಯವಾರ್ತಾ ಪ್ರಕಾಶನದಲ್ಲಿ ಪ್ರಕಟವಾದ ಗಿರಿಜಾ ನಿರ್ವಾಣಿಯವರ ಚೋಚ್ಚಲ ಕೃತಿ ಚುಟುಕು ಯಾನ, ಕಿರಣ್ ಕುಮಾರ್ ಬಿ ಯವರ ಚೋಚ್ಚಲ ಕೃತಿ ಚುಟುಕಾಮೃತ, ಸೀತಾ ಲಕ್ಷ್ಮಿ ವರ್ಮಾ ರವರ ಸಂಪಾದಿತ ಕೃತಿ ಅರಸು ಚುಟುಕು ಚಿತ್ತಾರಗಳು ಕೃತಿಗಳ ಲೋಕಾರ್ಪಣೆ ಹಾಗೂ ಕೃತಿ ವಿಮರ್ಶೆ ಕಾರ್ಯಕ್ರಮ ನಡೆಸುವುದರೊಂದಿಗೆ ಚುಟುಕು ಸಾಹಿತ್ಯ ಕವಿಗಳಿಗೆ ಪ್ರೋತ್ಸಾಹ ನೀಡುವುದು ಪರಿಷತ್ತಿನ ಮುಖ್ಯ ಅಜೆಂಡಾವಾಗಿದೆ.
ಇಂದು ಸಾಹಿತ್ಯದ ಪ್ರಾಕಾರಗಳಲ್ಲಿ ಚುಟುಕು ಸಾಹಿತ್ಯ ಪ್ರಮುಖ ಪ್ರಾಕಾರವಾಗಿ ಮಾರ್ಪಟ್ಟಿದೆ. ಚುಟುಕು ಕವಿಗಳ ಸಂಖ್ಯೆ ಹೆಚ್ಚುತ್ತಿದೆ. ತುಮಕೂರಿನ ತಪೋವನದ ಹಿರೇಮಠದ ಮಠಾದೀಶರಾದ ಡಾ ಶಿವಾನಂದ ಶಿವಾಚಾರ್ಯ ಮಹಾ ಸ್ವಾಮೀಜಿಯವರು ಚುಟುಕು ಸಾಹಿತಿಗಳಿಗೆ ಆದರ್ಶಪ್ರಾಯರಾಗಿದ್ದಾರೆ.ದಿನಕರ ದೇಸಾಯಿ, ಕುವೆಂಪು, ದುಂಡಿರಾಜ್,ಸಿಪಿಕೆ, ಜರಗನಹಳ್ಳಿ ಶಿವಶಂಕರ್,ಬಿ ಆರ್ ಲಕ್ಷ್ಮಣರಾವ್,ಡಾ ಎಂ ಜಿ ಆರ್ ಅರಸುರವರಿಂದ ಪೂಜಿತವಾದ ಚುಟುಕು ಸಾಹಿತ್ಯಕ್ಕೆ ಇತಿಹಾಸವಿದೆ.ಇಂದು ಯುವಜನಾಂಗದ ಅಚ್ಚುಮೆಚ್ಚಿನ ಸಾಹಿತ್ಯ ಪ್ರಾಕಾರವಾಗಿದೆ. ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ಎಂಬುದನ್ನು ಮನಗಂಡು ಚುಟುಕುಗಳನ್ನು ಬರೆಯಿರಿ. ಪ್ರಪಂಚದ ಎಲ್ಲಾ ಭಾಷೆಯಲ್ಲಿ ಚುಟುಕು ಸಾಹಿತ್ಯ ರಚಿತವಾಗುವುದರೊಂದಿಗೆ ಸರ್ವರ ಆಪ್ತವೆನಿಸಿಕೊಂಡಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ತುಮಕೂರಿನ ಹಿರೇಮಠದ ಡಾ ಶಿವಾನಂದ ಶಿವಾಚಾರ್ಯ ಮಹಾ ಸ್ವಾಮೀಜಿಯವರು ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನ ನೀಡಿದರು. ಪ್ರಾoಶುಪಾಲ ಮಂಜಯ್ಯ ಡಿ. ಕೆ. ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ಕಿರಣ್ ಕುಮಾರ್ ಬಿ., ಗಿರಿಜಾ ನಿರ್ವಾಣಿ, ಉಪನ್ಯಾಸಕ ಮೋಹನ್ ಕುಮಾರ್, ಅಧ್ಯಕ್ಷೆ ಪ್ರತಿಮಾ ಹಾಸನ,ಶಂಕರಾಚಾರ್, ಸೋಮನಾಯಕ್, ಕುಮಾರ್ ಬಿ ಹೊನ್ನೇನಹಳ್ಳಿ, ಸೋಮಶೇಖರ್, ಪೂರ್ಣಿಮಾ ನಾಗೇಂದ್ರ ಇನ್ನಿತರರು ಉಪಸ್ಥಿತರಿದ್ದರು.
ಹಲೋ ಹಾಸನ ದಿನ ಪತ್ರಿಕೆಯ ಸಂಪಾದಕರಾದ ನಾಕಲಗೂಡು ರವಿಯವರು ಚುಟುಕು ಕವಿಯಿತ್ರಿ ಸುಧಾಮಣಿ ಹಾಗೂ ಪ್ರೊ. ಮಂಜಯ್ಯ ಡಿ ಕೆ ರವರಿಬ್ಬರಿಗೆ ಚುಟುಕು ಕೌಸ್ತುಭ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು.ದುದ್ದ ಹೋಬಳಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪೂರ್ಣಿಮಾ ನಾಗೇಂದ್ರ ಕಾರ್ಯಕ್ರಮ ನಿರ್ವಹಿಸಿದರು.
