ಚನ್ನರಾಯಪಟ್ಟಣ: ಯಾವುದೇ ಒಂದು ದೇಶ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡದೇ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು ಅಸಾಧ್ಯ ಎಂದು ವಕೀಲ ಗಂಗಾಧರ್ ಬಹುಜನ್ ಅಭಿಪ್ರಾಯಪಟ್ಟರು.
ಮಾನಸ ಜಿಲ್ಲಾ ಸಂಪನ್ಮೂಲ ಕೇಂದ್ರದ ವತಿಯಿಂದ ಚನ್ನರಾಯಪಟ್ಟಣ ಪಟ್ಟಣದ ವೀರಭದ್ರೇಶ್ವರ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಲ್ಲದೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆ ಕುಟುಂಬದ ಮೂಲಸ್ತಂಭವಾಗಿದ್ದು, ಸಮಾಜದ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದು ಹೇಳಿದರು. ಪ್ರತಿವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರ ಹಕ್ಕುಗಳು, ಅವರ ಸಾಧನೆಗಳು ಮತ್ತು ಸಮಾಜದಲ್ಲಿ ಅವರ ಮಹತ್ವದ ಪಾತ್ರವನ್ನು ಗೌರವಿಸುವ ದಿನವಾಗಿದೆ ಎಂದು ತಿಳಿಸಿದರು.
ಮಹಿಳಾ ದಿನಾಚರಣೆಯ ಇತಿಹಾಸವನ್ನು ಉಲ್ಲೇಖಿಸಿದ ಅವರು, 1908ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ತಮ್ಮ ಕೆಲಸದ ಪರಿಸ್ಥಿತಿಯನ್ನು ಸುಧಾರಿಸಲು, ಸಮಾನ ವೇತನ ಪಡೆಯಲು ಹಾಗೂ ಮತದಾನದ ಹಕ್ಕು ಪಡೆಯಲು ಪ್ರತಿಭಟನೆ ನಡೆಸಿದದ್ದು ಮಹಿಳಾ ಹಕ್ಕುಗಳ ಹೋರಾಟಕ್ಕೆ ಮಹತ್ವದ ಆರಂಭವಾಗಿತ್ತು ಎಂದು ಹೇಳಿದರು.
1910ರಲ್ಲಿ ಕೋಪನ್ಹೇಗನ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಜರ್ಮನಿಯ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ಮಹಿಳೆಯರಿಗಾಗಿ ವಿಶೇಷ ದಿನವನ್ನು ಆಚರಿಸಬೇಕೆಂದು ಪ್ರಸ್ತಾಪಿಸಿದರು. ಬಳಿಕ 1911ರಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳಲ್ಲಿ ಮೊದಲ ಬಾರಿಗೆ ಮಹಿಳಾ ದಿನಾಚರಣೆ ಆಚರಿಸಲಾಯಿತು. ನಂತರ 1975ರಲ್ಲಿ ವಿಶ್ವಸಂಸ್ಥೆ ಮಾರ್ಚ್ 8ನ್ನು ಅಧಿಕೃತವಾಗಿ ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು ಎಂದು ವಿವರಿಸಿದರು.

ಇಂದಿನ ಯುಗದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ವೈದ್ಯಕೀಯ, ಕ್ರೀಡೆ, ರಾಜಕೀಯ, ತಂತ್ರಜ್ಞಾನ ಮತ್ತು ಅಂತರಿಕ್ಷ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಕಲ್ಪನಾ ಚಾವ್ಲಾ, ಕಿರಣ್ ಬೇಡಿ, ಪ್ರತಿಭಾ ಪಾಟೀಲ್, ದ್ರೌಪದಿ ಮುರ್ಮು, ಮಾಯಾವತಿ, ಜಯಲಲಿತಾ, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಮದರ್ ತೆರೇಸಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ ದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಇಂತಹ ಮಹನೀಯ ಮಹಿಳೆಯರು ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ ಎಂದರು.
ಆದರೆ ಇಂದಿಗೂ ಲಿಂಗ ಅಸಮಾನತೆ, ಮಹಿಳೆಯರ ಮೇಲಿನ ಹಿಂಸಾಚಾರ ಹಾಗೂ ಶಿಕ್ಷಣದ ಕೊರತೆ ಇನ್ನೂ ಕೆಲವಡೆ ಕಂಡು ಬರುತ್ತಿದೆ. ಮಹಿಳೆಯರಿಗೆ ಸಮಾನ ಹಕ್ಕುಗಳು ಹಾಗೂ ಅವಕಾಶಗಳನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಜಗತ್ತಿನ ಮಾನವ ಸಂಕುಲದಲ್ಲಿ ಅರ್ಧದಷ್ಟು ಮಹಿಳೆಯರೇ ಇರುವುದರಿಂದ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲೂ 50 ಶೇಕಡಾ ಮೀಸಲಾತಿ ನೀಡುವುದು ನ್ಯಾಯಸಮ್ಮತವಾಗಿದೆ ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್, ನಿವೃತ್ತ ಅಧಿಕಾರಿಗಳಾದ ವೆಂಕಟೇಶ್, ಶಿವಕುಮಾರ್, ಮಹದೇವ್ ದಾಸ್, ಪುರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ರಘು, ಮಾಜಿ ಉಪಾಧ್ಯಕ್ಷ ಭಾರತೀಯ ರಂಗಸ್ವಾಮಿ, ವಕೀಲ ವಿರೂಪಾಕ್ಷ, ಭಾಗ್ಯ ಪದ್ಮಲತಾ ಸೇರಿದಂತೆ ಬಹುಜನ ಚಳುವಳಿಯ ಮುಖಂಡರು ಹಾಗೂ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
