ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಪ್ಪನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಸತ್ಯಮ್ಮ ದೇವಿಯ ಹಬ್ಬ ಸಂಭ್ರಮದಿಂದ ನಡೆಯಿತು.
ಗ್ರಾಮಸ್ಥರು ಗ್ರಾಮದ ರಸ್ತೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು, ಮಹಿಳೆಯರು ಬಣ್ಣಬಣ್ಣದ ರಂಗೋಲಿಯನ್ನು ಹಾಕಿ ಗ್ರಾಮದಲ್ಲಿ ಹಬ್ಬದ ರಂಗನ್ನು ಹೆಚ್ಚಿಸಿದ್ದರು. ಗ್ರಾಮದ ರಾಜ ಬೀದಿಗಳಲ್ಲಿ ತಂಬಿಟ್ಟಿನ ಆರತಿಯೊಂದಿಗೆ ಮಹಿಳೆಯರು ಮೆರವಣಿಗೆ ಮೂಲಕ ದೇವಸ್ಥಾನದವರೆಗೆ ಬಂದು ಪೂಜೆ ಸಲ್ಲಿಸಿ, ಗ್ರಾಮವು ಸುಭಿಕ್ಷೆಯಿಂದ ಇರಲೆಂದು ಸತ್ಯಮ್ಮದೇವಿಗೆ ಪೂಜಿಸಿದರು.
ಗ್ರಾಮಕ್ಕೆ ಬರಗಾಲ ಬರದಿರಲಿ, ಜಾನುವಾರುಗಳಿಗೆ ಮೇವಿಲ್ಲದೇ ಪರಿತಪಿಸುತ್ತಿರುವ ಸಂದರ್ಭದಲ್ಲಿ ವರುಣ ದೇವನು ಆದಷ್ಟು ಬೇಗ ಮಳೆಯನ್ನು ಸುರಿಸಿ ಜನ-ಜಾನುವಾರುಗಳಿಗೆ ಅನುಕೂಲ ಮಾಡಿಕೊಡಲಿ ಮತ್ತು ಯಾವುದೇ ರೀತಿಯ ರೋಗರುಜಿನಗಳು ರಾಸುಗಳಿಗೆ ಬಾರದಿರಲಿ, ಉತ್ತಮ ಮಳೆಯಾಗಿ ನಾಡು ಸಂತೃಪ್ತಿಯಾಗಿರಲಿ ಎಂದು ಪ್ರಾರ್ಥಿಸಿದ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಗ್ರಾಮದೇವತೆ ಸತ್ಯಮ್ಮ ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿದರು.
ಗ್ರಾಮದೇವತೆ ಹಬ್ಬದಲ್ಲಿ ವಕೀಲರಾದ ಸುನೀತಾ, ಅಪ್ಪನಹಳ್ಳಿ ಅರುಣ್, ಗ್ರಾಪಂ ಸದಸ್ಯ ಲೋಕೇಶ್, ಮಾಜಿ ಪುರಸಭೆ ಎಸ್ ಜೆಎಸ್ಆರ್ವೈ ಮಾಜಿ ಅಧಕ್ಷೆ ಕಮಲಾ ಶಂಕರ್, ಹಿರಿಯ ಮುಖಂಡ ರಾಜೇಂದ್ರ, ಚಂದ್ರಕುಮಾರ್, ರಂಗಶೆಟ್ಟಿ, ನಾಗರಾಜು, ಬೋರಣ್ಣ ಬಸವಣ್ಣನ ಕುಮಾರ್, ಚಂದ್ರು, ರಮೇಶ್, ಮಂಜು, ಯೋಗೇಶ್, ರಮೇಶ್, ಶಿವಮೂರ್ತಿ, ಯಶವಂತ್ , ನಾಗೇಶ್, ಲಕ್ಷ್ಮೀಶ, ಅರ್ಚಕ ಉಮೇಶ್, ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.
– ಶ್ರೀನಿವಾಸ್ ಆರ್.
