ಕೆ.ಆರ್.ಪೇಟೆ,ಮಾ.11: ತಾಲೂಕು ಪಂಚಾಯತ್ ಒಡೆತನದಲ್ಲಿರುವ ಒಟ್ಟು 52 ವಾಣಿಜ್ಯ ಮಳಿಗೆಗಳನ್ನು ಹರಾಜು ಮೂಲಕ ಪಡೆಯಲು ಇದೇ ಮಾರ್ಚ್ 17ರಂದು ಆನ್ಲೈನ್ ಮೂಲಕ ಟೆಂಡರ್ ಸಲ್ಲಿಸಬಹುದಾಗಿದೆ. ಬಿಡ್ ಸಲ್ಲಿಸಲು ಮಾರ್ಚ್ 18ರಂದು ಬೆಳಿಗ್ಗೆ 11ರಿಂದ 5.30 ರವರೆಗೆ ಆನ್ಲೈನ್ನಲ್ಲಿ ಬಿಡ್ ಮೂಲಕ ಬಹಿರಂಗ ಹರಾಜು ಮಾಡಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಿ ಮಳಿಗೆ ಪಡೆದುಕೊಂಡು ವ್ಯಾಪಾರ-ವ್ಯವಹಾರ ಆರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ವೇಣು ಅವರು ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಣು ರವರು ಆಸಕ್ತ ನಿರುದ್ಯೋಗಿಗಳು ಬಹಿರಂಗ ಹರಾಜಿನಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಳೆದ 25ರಿಂದ 30ವರ್ಷಗಳಿಂದ ಬಾಡಿಗೆಯನ್ನು ಪರಿಷ್ಕರಣೆ ಮಾಡಿರುವುದಿಲ್ಲ. ಮೂಲ ಬಾಡಿಗೆದಾರರು ಯಾರೂ ಸಹ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿಲ್ಲ. ಮೂಲ ಬಾಡಿಗೆದಾರರು ಕಡಿಮೆ ಬಾಡಿಗೆಯನ್ನು ತಾಲ್ಲೂಕು ಪಂಚಾಯತ್ ಕಚೇರಿಗೆ ಪಾವತಿಸಿ ಅದೇ ಮಳಿಗೆಗೆ ತಿಂಗಳಿಗೆ 20ರಿಂದ 30ಸಾವಿರದ ವರೆಗೆ ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇದು ಸರ್ಕಾರಕ್ಕೆ ಅಪಾರ ನಷ್ಟವಾಗುತ್ತದೆ.
ಹಾಗಾಗಿ ಯಾರು ಮಳಿಗೆಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತಾರೋ ಅವರೇ ವ್ಯವಹಾರ ಮಾಡಬೇಕು. ಯಾವುದೇ ಕಾರಣಕ್ಕೂ ಒಳ ಬಾಡಿಗೆಗೆ ಬೇರೆಯವರಿಗೆ ಅವಕಾಶ ಮಾಡಿಕೊಡಬಾರದು. ಬೇಕಾಬಿಟ್ಟಿ ಬಾಡಿಗೆ ಕೂಗಿ ನಂತರ ಆ ಮಳಿಗೆಯನ್ನು ಪಡೆದುಕೊಳ್ಳದೇ ಇದ್ದರೆ ಅಂತಹ ಬಿಡ್ದಾರರ ಇಎಂಡಿ ಹಣ ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಕರವೇ ಕಳೆದ ಮೂರು ವರ್ಷಗಳಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳಿಗೆ ಪತ್ರ ಬರೆದು ಬಹಿರಂಗ ಹರಾಜು ಮಾಡುವಂತೆ ಒತ್ತಾಯ ಮಾಡುತ್ತಾ ಬರಲಾಗಿತ್ತು ನಮ್ಮ ಕರವೇ ಹೋರಾಟದ ಪ್ರತಿಫಲವಾಗಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಕೆ.ಆರ್.ಪೇಟೆ ಪಟ್ಟಣದಲ್ಲಿರುವ 40ಮಳಿಗೆಗಳು ಹಾಗೂ ಕಿಕ್ಕೇರಿ ಪಟ್ಟಣದಲ್ಲಿರುವ 12ಮಳಿಗೆಗಳನ್ನು ಇದೇ ಮಾ.17 ಮತ್ತು 18ರಂಗ ಆನ್ಲೈನ್ ಮೂಲಕ ಹರಾಜು ನಡೆಸುವ ಪ್ರಕ್ರಿಯೆ ನಡೆಯುತ್ತಿದೆ ಆಸಕ್ತ ಸಾರ್ವಜನಿಕರು ಆನ್ಲೈನ್ ಮೂಲಕ ಹರಾಜು ಪ್ರಕ್ರಿಯೆಯನ್ನು ಭಾಗವಹಿಸಿ ತಮ್ಮ ವ್ಯಾಪಾರ- ವ್ಯವಹಾರವನ್ನು ಆರಂಭಿಸಬೇಕು ಎಮದು ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕರವೇ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಟೆಂಪೋ ಶ್ರೀನಿವಾಸ್, ಕರವೇ ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ತಾಲ್ಲೂಕು ಸಂಚಾಲಕ ಸ್ವಾಮಿ, ತಾಲ್ಲೂಕು ಯುವ ಘಟಕದ ಕಾರ್ಯದರ್ಶಿ ಮನು, ಕಸಬಾ ಹೋಬಳಿ ಕರವೇ ಅಧ್ಯಕ್ಷ ಕೊಮ್ಮೇನಹಳ್ಳಿ ಅನಿಲ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಜಾಹೀರ್ ಮತ್ತಿತರರು ಇದ್ದರು.
