ಕೆ.ಆರ್.ಪೇಟೆ,ಮಾ.14: ತಾಲ್ಲೂಕಿನ ಕಿಕ್ಕೇರಿ ಹೋಬಳಿ ಕೇಂದ್ರದಲ್ಲಿರುವ ಪ್ರವಾಸಿ ಕೆಇಬಿ ಕಚೇರಿ ಎದುರು ಇರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಜಾಗದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಯಾವುದೇ ಲೈಸೆನ್ಸ್ ಪಡೆಯದೇ ಮೂರು ಅಂತಸ್ತಿನ ವಾಣಿಜ್ಯ ಮಳಿಗೆಗಳನ್ನು ಪ್ರಭಾವಿ ವ್ಯಕ್ತಿಗಳು ನಿರ್ಮಾಣ ಮಾಡುತ್ತಿದ್ದು ಕೂಡಲೇ ದಾಖಲೆಗಳನ್ನು ಪರಿಶೀಲನೆ ಮಾಡಿ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಬೇಕು.
ಈ ಮೂಲಕ ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ಮಂಡ್ಯ ಜಿಲ್ಲಾಡಳಿತವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಒತ್ತಾಯ ಮಾಡಿದ್ದಾರೆ.
ಕಿಕ್ಕೇರಿ ಹೋಬಳಿ ಕೇಂದ್ರದಲ್ಲಿ ಮೈಸೂರು-ಶಿವಮೊಗ್ಗ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಜಾಗದಲ್ಲಿ ಕೊಟ್ಯಾಂತರ ರೂ ಬೆಲೆ ಬಾಳುವ ನಿವೇಶನದಲ್ಲಿ ಖಾಸಗಿ ವ್ಯಕ್ತಿಗಳು ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ.
ಸರ್ಕಾರಿ ಆಸ್ತಿಯಲ್ಲಿ ಖಾಸಗಿಯವರು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಅವಕಾಶ ಕೊಟ್ಟವರು. ಲೈಸೆನ್ಸ್ ಕೊಟ್ಟವರು ಯಾರು ಎಂದು ಪ್ರಶ್ನಿಸಿರುವ ಕರವೇ ಜಿಲ್ಲಾಧ್ಯಕ್ಷ ವೇಣು ಅವರು ಈ ರೀತಿ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ವಾಣಿಜ್ಯ ಉದ್ದೇಶಗಳಿಗೆ ನೀಡುವ ಅವಕಾಶ ಇದ್ದರೆ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ನಿರುದ್ಯೋಗಿ ಯುವಕರಿಗೆ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡು ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಂಡು ಕಿಕ್ಕೇರಿ ಪಟ್ಟಣದ ಕೆಇಬಿ ಮುಂಭಾಗದಲ್ಲಿ ಪ್ರಭಾವಿಗಳು ನಿರ್ಮಿಸುತ್ತಿರುವ ಮೂರು ಅಂತಸ್ತಿನ ವಾಣಿಜ್ಯ ಮಳಿಗೆಗಳ ಕಟ್ಟಡ ಕಾಮಗಾರಿಯನ್ನು ಬಂದ್ ಮಾಡಿಸಬೇಕು. ಅದೇ ಜಾಗದಲ್ಲಿ ಸ್ವಂತ ಜಾಗವಿಲ್ಲದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಿಕ್ಕೇರಿ ಕೃಷಿ ಇಲಾಖೆ ಹಾಗೂ ಇನ್ನಿತರ ಸರ್ಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಡಿ.ಎಸ್.ವೇಣು ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರನ್ನು ಒತ್ತಾಯ ಮಾಡಿದ್ದಾರೆ.
– ಶ್ರೀನಿವಾಸ್ ಆರ್.
