ಕೆ.ಆರ್.ಪೇಟೆ,ಮಾ.14: ತಾಲ್ಲೂಕಿನ ಹೊಸಹೊಳಲು ಗ್ರಾಮದ ಡಾ.ಬಾಬು ಜಗಜೀವನರಾಂ ಬಡಾವಣೆಯಲ್ಲಿರುವ ಶ್ರೀ ದೇವಮ್ಮ ದೇವಾಲಯವನ್ನು ಜೀರ್ಣೋದ್ದಾರ ಮಾಡಿಸಿಕೊಟ್ಟಿರುವ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಅವರನ್ನು ಗ್ರಾಮದ ಶ್ರೀ ಚಾಮುಂಡೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಸನ್ಮಾನಿಸಿ ಗೌರವಿಸುವ ಮೂಲಕ ನಂಜುಂಡಸ್ವಾಮಿ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸಹೊಳಲು ಶ್ರೀ ಚಾಮುಂಡೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ನಂಜಮ್ಮ ನಂಜುಂಡಸ್ವಾಮಿ ಅವರನ್ನು ಅಭಿನಂದಿಸಿ ಮಾತನಾಡಿ ಹೊಸಹೊಳಲು ಗ್ರಾಮದ ಸಾಮಾನ್ಯ ರೈತನ ಮಗನಾಗಿ ಜನಿಸಿದ ನಂಜುಂಡಸ್ವಾಮಿ ಅವರು ಉದ್ಯೋಗ ಹುಡುಕಿಕೊಂಡು ಹೋಗಿ ಆಟೋಮೊಬೈಲ್ ಕಂಪನಿಯೊಂದರಲ್ಲಿ ಕಡಿಮೆ ವೇತನಕ್ಕೆ ಕೆಲಸ ಮಾಡಿ ನಂತರ ಉದ್ಯಮಿಯಾಗಿ ಬೆಳೆದಿದ್ದಾರೆ. ಸುಮಾರು 50ರಿಂದ 100ಮಂದಿಗೆ ಉದ್ಯೋಗ ನೀಡಿದ್ದಾರೆ.
ಉದ್ಯೋಗ ನೀಡುವ ಮೂಲಕ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ತಮ್ಮದೂ ಅಳಿಲು ಸೇವೆಯನ್ನು ನೀಡುವ ಮೂಲಕ ಇಂದು ಕೊಟ್ಯಾಧಿಪತಿಯಾಗಿ ಉದ್ಯಮಿಯಾಗಿ ಬೆಳೆದಿದ್ದಾರೆ. ಇದು ನಮ್ಮ ಹೊಸಹೊಳಲು ಗ್ರಾಮಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಇದಲ್ಲದೇ ನಂಜುಂಡಸ್ವಾಮಿ ಅವರು ತಮ್ಮ ಉದ್ಯಮದ ಆಧಾಯದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿರುವುದು.
ತಾಲ್ಲೂಕಿನ ವಿವಿಧೆಡೆ ನಡೆಯುವ ಕ್ರೀಡಾ ಚಟುವಟಿಕೆಗಳಿಗೆ, ದೇವಾಲಯ ಪ್ರವಾಸಕ್ಕೆ ಹೋಗಲು ಆರ್ಥಿಕ ನೆರವು, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಪೌರಾಣಿಕ ನಾಟಕ ಪ್ರದರ್ಶನಗಳಿಗೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ತಮ್ಮ ಕೈಲಾದ ಆರ್ಥಿಕ ನೆರವು ನೀಡುವ ಮೂಲಕ ಹೊಸಹೊಳಲು ಗ್ರಾಮದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಂಜುಂಡಸ್ವಾಮಿ ಇವರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿಯನ್ನು ಹೊಸಹೊಳಲು ಗ್ರಾಮಸ್ಥರು ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಹೊಸಹೊಳಲು ಗ್ರಾಮದಲ್ಲಿ ಓದಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿ ನಮ್ಮ ತಂದೆ-ತಾಯಿ ಹಾಗೂ ಗ್ರಾಮಸ್ಥರ ಆಶೀರ್ವಾದಿಂದ ಉದ್ಯಮಿಯಾಗಿ ಬೆಳೆದು ನಿಮ್ಮ ಮುಂದೆ ನಿಂತಿದ್ದೇನೆ.
ನನಗೆ ತಾಲ್ಲೂಕಿನ ಹಾಗೂ ಗ್ರಾಮದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ಇನ್ನೂ ಹೆಚ್ಚಿನ ಜನಸೇವೆ ಮಾಡುವ ಉದ್ದೇಶದಿಂದ ಮುಂಬರುವ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಮಹದಾಸೆಯನ್ನು ಇಟ್ಟುಕೊಂಡಿದ್ದೇನೆ. ಗ್ರಾಮಸ್ಥರು ಇದೇ ರೀತಿಯ ಪ್ರೀತಿ ವಿಶ್ವಾಸದೊಂದಿಗೆ ಆಶೀರ್ವಾದ ಮಾಡಬೇಕು ಎಂದು ನಂಜುಂಡಸ್ವಾಮಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರು ಹಾಗೂ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಸೇರಿದಂತೆ ಶ್ರೀ ಚಾಮುಂಡೇಶ್ವರಿ ಮಹಿಳಾ ಮಂಡಳಿಯ ಸರ್ವ ಸದಸ್ಯರು ಹಾಗೂ ಶ್ರೀಮತಿ ಗೀತಾ ನಂಜುಂಡಸ್ವಾಮಿ, ನಮೃತಾ ಸೇರಿದಂತೆ ಗ್ರಾಮದ ಯುವ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
