ಸಕಲೇಶಪುರ, ಮಾ.14: ತಾಲ್ಲೂಕಿನ ಪ್ರಸಿದ್ಧ ಟ್ರೆಕ್ಕಿಂಗ್ ತಾಣವಾದ ಪಟ್ಲ ಬೆಟ್ಟದಲ್ಲಿ ಕಳೆದ ನಾಲ್ಕು ದಿನಗಳಿಂದ ಸುಮಾರು 10 ಕಾಡಾನೆಗಳ ಗುಂಪು ಬೀಡು ಬಿಟ್ಟಿರುವ ಹಿನ್ನೆಲೆ, ಸಾರ್ವಜನಿಕರ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಯಸಳೂರು ವಲಯಾರಣ್ಯಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.
ಕಾಡಾನೆಗಳ ಸಂಚರಣೆ ಹೆಚ್ಚಿರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಟ್ರೆಕ್ಕಿಂಗ್ ಪ್ರಿಯರು ಇಲಾಖೆಗೆ ಸಹಕರಿಸಿ ನಿಷೇಧಾವಧಿಯಲ್ಲಿ ಪಟ್ಲ ಬೆಟ್ಟದ ಕಡೆಗೆ ತೆರಳಬಾರದು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಪ್ರಸ್ತುತ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ನಿರಂತರ ನಿಗಾವಹಿಸಿದ್ದು, ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಲ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ಸುರಕ್ಷತೆಯ ದೃಷ್ಟಿಯಿಂದ ಇಲಾಖೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
