ಬೇಲೂರು : ತಾಲ್ಲೂಕಿನ ರಾಜನಶಿರಿಯೂರು, ಬಂಡಿಲಕ್ಕನಕೊಪ್ಪಲು, ಕಲ್ಲು ಶೆಟ್ಟಿಹಳ್ಳಿ (ಕೇರೆಕೋಡಿ) ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಚಿಕ್ಕ ಅಂಗಡಿಗಳು ಹಾಗೂ ಶಾಲೆಗಳ ಸುತ್ತಮುತ್ತ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಗ್ರಾಮೀಣ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ರಾಜನಶಿರಿಯೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರಾಜನಶಿರಿಯೂರು ಗ್ರಾಮಸ್ಥೆ ಗೀತಾ ಮಾತನಾಡಿ, ಮದ್ಯದ ದುಷ್ಪರಿಣಾಮದಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮನೆಮನೆಗಳಲ್ಲಿ ಕಲಹಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಮದ್ಯ ಸೇವನೆಯಿಂದ ಅನೇಕರು ಆರೋಗ್ಯ ಕಳೆದುಕೊಂಡು, ಕೆಲವುt ಸಂದರ್ಭಗಳಲ್ಲಿ ಜೀವವನ್ನೇ ಕಳೆದುಕೊಳ್ಳುವ ದುಃಖದ ಘಟನೆಗಳೂ ಸಂಭವಿಸುತ್ತಿವೆ. ಕುಡಿತದ ದಾಸರಾಗಿರುವ ಪುರುಷರಿಂದ ಮನೆಯ ನೆಮ್ಮದಿ ಹಾಳಾಗುತ್ತಿದೆ. ಮನೆಯಲ್ಲಿ ಸಣ್ಣಪುಟ್ಟ ಖರ್ಚುಗಳಿಗೆಂದು ತೆಗೆದಿಟ್ಟಿರುವ ಹಣವನ್ನು ತೆಗೆದುಕೊಂಡು ಹೋಗಿ ಕುಡಿಯುವುದಕ್ಕೆ ಬಳಸುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾದರೆ ಮದ್ಯ ಮಾರಾಟವನ್ನು ಮೊದಲು ನಿಯಂತ್ರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯ ಮುಂದೆ ಉಗ್ರವಾಗಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ರಾಜನಶಿರಿಯೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಜಯಶಂಕರ್ ಮಾತನಾಡಿ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಈ ಕುರಿತು ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಒಂದೆರಡು ಪ್ರಕರಣವು ದಾಖಲಿಸಿ ಕೈ ಚೆಲ್ಲುತ್ತಿದ್ದಾರೆ. ಈ ಬಗ್ಗೆ ಸೂಕ್ತವಾದ ತನಿಖೆ ಕೈಗೊಂಡು ಇದು ಎಲ್ಲಿಂದ ಸರಬರಾಜು ಆಗುತ್ತಿದೆ, ಮದ್ಯದ ಪೌಚ್ಗಳಲ್ಲಿ ಇರುವ ನಂಬರ್ ನಿಂದ ಇದು ಎಲ್ಲಿಂದ ಸರಬರಾಜಾಗಿತ್ತು ಎಂಬುದನ್ನು ನಿಖರವಾಗಿ ತಿಳಿಯುವ ಸಾಧ್ಯತೆ ಇದ್ದರೂ ಈ ಕೆಲಸ ನಡೆಯುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಕುಡುಕರು ಹೆಚ್ಚಾಗಲು ಇಲಾಖೆಯವರೇ ಕಾರಣವಾಗಿದ್ದಾರೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಮೇಲಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜನಶಿರಿಯೂರು ಗ್ರಾಮಸ್ಥರಾದ ನಿಂಗೇಗೌಡ, ಲತೇಶ್ ಆರ್ ಆರ್, ಗಂಗಾಧರ, ರಾಮನಹಳ್ಳಿ ಯೋಗೇಶ,ರಾಮನಹಳ್ಳಿ ಜಗದೀಶ್, ಮೋಹನಕುಮಾರ, ಸುಧಾಕರ, ಪರಮೇಶ್, ಮಣಿ, ರೂಪ, ಮೀನಾಕ್ಷಿ, ಸುಜಾತಾ, ನೀಲಾವತಿ, ಶಾರದಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.
– ದಿನೇಶ್ ಬೆಳ್ಳವಾರ
