
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ದುಡಿಯುವ ಹಂಬಲ
ನನಗೂ ಪ್ರೊ. ನಿರ್ವಾಣ್ ಅವರಿಗೂ ಬಾಲ್ಯ ಸ್ನೇಹಿತನೊಬ್ಬನಿದ್ದ. ಎಸ್.ಎಸ್.ಎಲ್.ಸಿ.ಯಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ನಪಾಸಾಗಿದ್ದರಿಂದ ಆತ ನಗರದ ಕಡೆ ದುಡಿಮೆಗಾಗಿ ಹೊರಟ. ಆತನ ತಂದೆಯ ಸ್ನೇಹಿತರೊಬ್ಬರು ಬೆಂಗಳೂರಿನ ಕಂಪನಿಯೊಂದರಲ್ಲಿ ಮೇಸ್ತ್ರೀ ಯಾಗಿದ್ದರಿಂದ ಅವರೊಟ್ಟಿಗೆ ಸೇರಿ ನಿಯತ್ತಾಗಿ ಕೆಲಸ ಮಾಡತೊಡಗಿದ್ದ.
ನಾನು ಅಲ್ಲಿ ಓದುತ್ತಿರುವ ವಿಷಯ ತಿಳಿದ ಅವನು ನನ್ನಲ್ಲಿಗೆ ಎರಡು ಬಾರಿ ಬಂದು ಭೇಟಿ ಮಾಡಿ ಹೋಗಿದ್ದ. ಓದು ಮುಗಿಸಿ ಚಿಕಿತ್ಸಾಲಯ ತೆರೆದ ಮೇಲೆ ಸದಾ ವೃತ್ತಿ ನಿರತನಾಗಿರುತ್ತಿದ್ದ ನಾನು ಆತನನ್ನು ಭೇಟಿಯಾಗಲು ಕಾಲ ಕೂಡಿ ಬರಲೇ ಇಲ್ಲ.
ಆರ್ಥಿಕವಾಗಿ ಚೆನ್ನಾಗಿ ಬೆಳೆಯುತ್ತಿದ್ದಾನೆ ಎಂಬುದನ್ನು ಸ್ನೇಹಿತರಿಂದ ತಿಳಿದಿದ್ದೆ. ಆತ ಶ್ರೀಮಂತನಾಗಿರುವುದರಿಂದ ನಮ್ಮನ್ನು ಆತ್ಮೀಯತೆಯಿಂದ ಕಾಣುವುದಿಲ್ಲ. ಅವನ ಸಂಬಂಧ ಮತ್ತು ಹಾವಭಾವಗಳೆಲ್ಲ ಬದಲಾಗಿರುತ್ತವೆ ಎಂಬೆಲ್ಲಾ ಪೂರ್ವಗ್ರಹ ಪೀಡಿತೆ ಯೋಚನೆಗಳೇ ನನ್ನಲ್ಲಿ ಮನೆ ಮಾಡಿದ್ದರಿಂದ ಆತನನ್ನು ಮರೆತಂತೆ ಆಗಿತ್ತು.
ನಾನು ವೈದ್ಯನಾಗಿ ಸುಮಾರು ಹದಿನೇಳು ವರ್ಷಗಳು ಕಳೆದವು. ನನ್ನ ಸಂಪರ್ಕದಲ್ಲಿದ್ದ ಸ್ನೇಹಿತರೊಂದಿಗೆ ಒಂದು ದಿನ ದಿಢೀರ್ ಹಾಜರಾದ. ರೋಗಿಗಳ ಸಲಹೆಯಲ್ಲಿ ನಿರತನಾಗಿದ್ದರಿಂದ ಸ್ವಲ್ಪ ಹೊತ್ತು ಕಾಯಲು ನನ್ನ ಸಹಾಯಕಳಿಗೆ ಸೂಚಿಸಿದೆ.
ಒಳಗೆ ಬರಹೇಳಿದಾಗ ಅವನನ್ನು ಕಂಡು ದಿಗ್ಭçಮೆಯಾಯಿತು. ದಪ್ಪವಾಗಿ ಬೆಳೆದಿದ್ದ. ಕೈಯಲ್ಲೊಂದು, ಜೇಬಿನಲ್ಲೊಂದು ಬೆಲೆ ಬಾಳುವ ವಿದೇಶಿ ಮೊಬೈಲ್ಗಳು, ಕೈಬೆರಳು, ಮಣಿಕಟ್ಟು, ಕುತ್ತಿಗೆಯಲ್ಲೆಲ್ಲ ಬಂಗಾರದ ತೂಕದ ಒಡವೆಗಳು, ಘಮಘಮಿಸುವ ಅತ್ತರ್ (Tendulkar scent) ಇವೆಲ್ಲವುಗಳಿಂದ ಆಕರ್ಷಿತವಾಗಿದ್ದಾತ ‘ನಾನು ಯಾರು ಗೊತ್ತಾಯ್ತ?’ ಅಂದ. ಅನುಮಾನದಿಂದಲೇ ಇಲ್ಲ ಎಂದು ತಲೆಯಾಡಿಸಿದೆ. ಪರಿಚಯವಾದ ನಂತರ ತಿಳಿಯಿತು.
ಆಗಿನ ಶಾಲಾ ಗೆಳೆಯ. ಅಂದು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಈಗ ನಗರದಲ್ಲಿ Real Estate ಉದ್ಯಮದಲ್ಲಿ ಯಶಸ್ವಿಯಾಗಿರುವಾತ. ಪಟ್ಟಣದಲ್ಲಿ ಅನೇಕ ಕಟ್ಟಡಗಳು ಮತ್ತು ನಿವೇಶನಗಳನ್ನು ಹೊಂದಿರುವನು. ಹಲವು ಕಾರುಗಳ ಒಡೆಯ. ಹೀಗೆಲ್ಲಾ ಇದ್ದಾತ ಯಾವುದೋ ಪಕ್ಷದ ರಾಜಕಾರಣಿಯಂತೆ ಕಂಡ.

ಹಳೆಯ ಸ್ನೇಹಿತ ಹಲವು ದಿನಗಳ ನಂತರ ಸಿಕ್ಕ ಖುಷಿಯಲ್ಲಿ ರಾತ್ರಿ ಊಟಕ್ಕೆ ಆಮಂತ್ರಿಸಿದರೂ ಸಮಯವಿಲ್ಲದೆ ಕಾರಣ ಹೇಳಿ Visiting card ಕೈಗಿಟ್ಟು ವಾಪಸಾದ.
ಪ್ರೊ. ನಿರ್ವಾಣ್ ಜೊತೆ ಈ ವಿಷಯವನ್ನೆಲ್ಲಾ ಪ್ರಸ್ತಾಪಿಸಿದೆ. ಅವರೂ ಆತನನ್ನು ನಾವು ಬೆಂಗಳೂರಿಗೆ ಹೋದಾಗ ಒಮ್ಮೆ ಭೇಟಿ ಮಾಡುವ ಅಂದರು. ನಮಗೆ ಬೇರೆ ಕೆಲಸವೂ ಇದ್ದುದರಿಂದ ಅವನ್ನೆಲ್ಲಾ ಮುಗಿಸಿ, ಆತನಿಗೆ ಮೊದಲೇ ತಿಳಿಸಿದಂತೆ ಕರೆ ಮಾಡಿದೆವು. ಒಂದು ನಿಗದಿತ ಸ್ಥಳದಲ್ಲಿ ಕಾಯುತ್ತಾ ಕುಳಿತೆವು. ಹೇಳಿದ್ದಕ್ಕಿಂತ ಸರಿಯಾಗಿ ಒಂದೂ ಕಾಲು ಗಂಟೆ ತಡವಾಗಿ ‘‘Sorry, meeting ನಲ್ಲಿದ್ದೆ’ ಅಂದ.
ಆತನ ಆಹ್ವಾನದಂತೆ ಅವನ ಪಾಶ್ಚಾತ್ಯ ದೇಶದ ಕಾರಿನಲ್ಲಿ ಕುಳಿತು ಸುಮಾರು ಅರ್ಧ ತಾಸು ಪಯಣಿಸಿ ನಗರದ ಪ್ರತಿಷ್ಠಿತ ರೆಸ್ಟೋರೆಂಟ್ ಒಂದರಲ್ಲಿ ಸೇರಿದೆವು. ಆ ಹವಾನಿಯಂತ್ರಿತ ಕೊಠಡಿ ನಮ್ಮ ದಣಿವನ್ನು ಕೊಂಚ ನಿವಾರಿಸಿತು. ಆತನ ಸಹಜತೆ ಎಂಬಂತೆ ವಿದೇಶಿ Scotch ನ್ನು ತರಿಸಿದ.ಆತ ಮೂರು ಪೆಗ್, ನಾವು ತಲಾ ಒಂದೊಂದು ಪೆಗ್ಗ್ಗೆ ಸುಮ್ಮನಾದೆವು.
Alcohal ಅದರ ಕೆಲಸ ಪ್ರಾರಂಭಿಸಿತೋ ಏನೋ, ಆತ ಶಾಲಾ ದಿನಗಳು, ಸ್ನೇಹಿತರು, ಉದ್ಯೋಗ ಮತ್ತು ಆತನ ಆರ್ಥಿಕ ಸ್ಥಿತಿ, ಅವನ್ನು ಗಳಿಸಿದ ಬಗೆ ಎಲ್ಲವನ್ನೂ ಅಡೆತಡೆಯಿಲ್ಲದೆ ನಿರರ್ಗಳವಾಗಿ ಹೇಳತೊಡಗಿದ. ನಾವು ಏನೂ ಮಾತನಾಡಬಾರದು, ಮಾತನಾಡಿದರೆ ಆತ ಇನ್ನೂ ಹೆಚ್ಚು ಮಾಡುತ್ತಾನೆ ಎಂದು ಪ್ರೊಫೆಸರ್ಗೆ ಸನ್ನೆ ಮಾಡಿ ಹೇಳಿದೆ. ಆದರೂ ‘ಏನಾಯ್ಯಾ, ನೀನು ಕಟ್ಟಿಸಿದ ಕಟ್ಟಡಗಳು ಅಷ್ಟೊಂದು ಗಟ್ಟಿನಾ?’ ಅಂತ ಕೇಳಿಯೇ ಬಿಟ್ಟರು.
ಹೊಟ್ಟೆಯಲ್ಲಿದ್ದ Alcohal ಒಮ್ಮೆಯೇ ಮೆದುಳಿಗೇರಿದಂತೆ ‘ಏನ್ ಅಂದ್ಕೊಡಿದ್ದೀರಿ ಪ್ರೊಫೆಸರೇ, ಬನ್ನಿ, ನಾನು ಕಟ್ಟಿಸಿದ ಮನೆಗಳಿಗೆ ನೂರು ವರ್ಷ ಆಯಸ್ಸು ಹಾಗೂ ಗಟ್ಟಿ ಇದೆ ಅನ್ನೋದನ್ನ ತೋರಿಸ್ತೀನಿ’ ಅಂದ. ಅಲ್ಲಿಂದ ಶುರುವಾಗಿದ್ದು ರಾತ್ರಿ ಹನ್ನೊಂದರವರೆಗೆ ವಾಗ್ ಯುದ್ಧವೇ ನಡೆಯಿತು. ಇಂತಹ ಸಮಯದಲ್ಲಿ ಆತನು ಸುಮ್ಮನಿದ್ದಾನೆಯೇ? ಜೋರು ಧ್ವನಿಯಲ್ಲಿ ಸೂರು ಅಂದರೆ ಸಿಮೆಂಟ್, ಕಲ್ಲು, ಮರಳು ಮತ್ತು ನೀರು ಎಂದು ಭಾಷಣವನ್ನೇ ಶುರು ಮಾಡಿದ. ಆತನ ಮಾತು ಅರ್ಥ ಕಳೆದುಕೊಳ್ಳುತ್ತಿವೆ ಎಂದು ತಿಳಿದು ಸಮಾಧಾನಪಡಿಸಿ ಡ್ರೈವರ್ನೊಂದಿಗೆ ಮನೆಗೆ ಕಳುಹಿಸಿಕೊಟ್ಟು, ನಾವು ತಂಗಿದ್ದ ಹೋಟೆಲ್ಗೆ ಹಿಂತಿರುಗಿದೆವು.
ನಿದ್ರೆ ಬಾರದಿದ್ದಾಗ ಪ್ರೊ. ನಮ್ಮ ದೇಶದ ಸೂರಿನ ಬಗ್ಗೆ ಮಾತನಾಡತೊಡಗಿದರು. ಇಷ್ಟೆಲ್ಲಾ ಮಾತನಾಡುವ ಇವನು ಅಲ್ಪಸಮಯದಲ್ಲಿ ಅಷ್ಟು ದುಡ್ಡು ಮಾಡಿದ ಇವನು, ನನಗೇ ಪಾಠ ಹೇಳ್ತಾನಲ್ಲಾ! ಇವನ ಯೋಗ್ಯತೆ ನಂಗೊತ್ತಿಲ್ವಾ, ನನ್ನ ಪಿಹೆಚ್ಡಿ ಯಾರಿಗೆ ಬೇಕು? ಇವತ್ತಿನ ದೇಶದ ಸೂರು ಕಟ್ಟುವವರು ಯಾರು? ಇವನೊ ನಾನೋ? ಸೂರಿನ ಉದ್ದೇಶ ಗೊತ್ತಿದೆಯಾ ಇವ್ನಿಗೆ? ಪ್ರತಿದಿನ ವಿದ್ಯಾರ್ಥಿಗಳಿಗೆ, ಯುವಕರಿಗೆ ಯೋಚನೆ ಎಂಬ ಸಿಮೆಂಟ್, ಭಾವನೆಯೆಂಬ ನೀರು, ಇಚ್ಛೆ ಎಂಬ ಮರಳು, ಕ್ರಿಯೆ ಎಂಬ ಕಲ್ಲಿನಿಂದ ಸೂರು ಕಟ್ಟುವ, ದೇಶವನ್ನು ಭದ್ರಗೊಳಿಸುವ, ಯುವ ಜನತೆಯ ಉಜ್ವಲ ಭವಿಷ್ಯವನ್ನು ವೃದ್ಧಿಗೊಳಿಸುವ ಶ್ರಮ ವಹಿಸುವವರು ನಾವು. ಅವನ ಸೂರಿಗೆ ಬೆಲೆ ಇದೆಯೇ’ ಎಂದು ಕೋಪದಲ್ಲಿ ನುಡಿಯುತ್ತಿದ್ದವರಿಗೆ ಸಮಾಧಾನ ಹೇಳಿದೆ.
ನನ್ನ ಚಿಂತನಾ ಲಹರಿಗೆ ಪ್ರೊಫೆಸರ್ ಮಾತುಗಳು ಹೌದಲ್ಲವೇ ಎನಿಸಿತ್ತು. ಒಂದು ದೇಶದ ಆರ್ಥಿಕ ಭದ್ರ ಬುನಾದಿಗೆ ಗುರುಗಳ ಜ್ಞಾನದ ಸಿಮೆಂಟ್, ನೀರೆಂಬ ಗ್ರಹಣಾಶಕ್ತಿ, ಮರಳೆಂಬ ಗಮನ, ಏಕಾಗ್ರತೆಯೆಂಬ ಹುಡಿಕಲ್ಲು ಇವೆಲ್ಲಾ ಅತ್ಯಾವಶ್ಯಕ ಸಾಮಗ್ರಿಗಳು ಅನಿಸಿತು.
ಶತಮಾನದ ಹಿಂದೆಯೇ ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ದೇಶಗಳ ಪ್ರವಾಸದಲ್ಲಿ ‘ಯುವಕರೇ ದೇಶದ ಆಧಾರ ಸ್ಥಂಭ’ ಎಂಬುದನ್ನು ಸ್ಪಷ್ಟವಾಗಿ ಸಾರಿದ್ದಾರೆ. ನಮ್ಮ ದೇಶದ ಬಡತನ ಅಳಿಸಿ ಸ್ವಚ್ಛವಾದ ಜೀವನ, ಸಂಪತ್ತನ್ನು ಭರಿಸಿ. ವ್ಯವಸ್ಥಿತವಾಗಿ ಸಮೃದ್ಧಿಯ ಪಥದಲ್ಲಿ ಸಾಗಬೇಕಾದರೆ ಸಮಾಜದಲ್ಲಿ ಒಡಕಿರಬಾರದು.
ಒಡಕುಂಟಾದರೆ ಅದು ದೇಶದ ಆರ್ಥಿಕ ವ್ಯವಸ್ಥೆಯನ್ನು ಮುಳುಗಿಸಿಬಿಡುತ್ತದೆ. ಆರ್ಥಿಕ ವ್ಯವಸ್ಥೆಗೆ ಯುವಕರ ಮನಸ್ಸು ಮತ್ತು ಸಮಾಜದ ದೃಷ್ಟಿ ಚೆನ್ನಾಗಿರಬೇಕು. ಒಂದು ದೇಶದ ಸಂಪತ್ತು ವೃದ್ಧಿಗೊಳ್ಳಲು ಯುವಕರ ದುಡಿಮೆ ಮತ್ತು ಶ್ರಮದಿಂದ ಮಾತ್ರ ಸಾಧ್ಯ. ಹಾಗಾಗಿ ಅವರ ಏಳಿಗೆ ಮತ್ತು ಮನೋಲ್ಲಾಸ ಪ್ರಗತಿಗೆ ನಾಂದಿಯಾಗುತ್ತದೆ. ಯುವಕರ ಮನಸ್ಸು, ಶಕ್ತಿ, ಅತ್ಯಮೂಲ್ಯವಾದ ಮಾನವ ಸಂಪತ್ತು. ಆದ್ದರಿಂದ ಆ ಶಕ್ತಿಗೆ, ಯುಕ್ತಿಗೆ ಯಾವುದೇ ರೀತಿಯಲ್ಲಿ ಕುಂದು ಬಾರದಂತೆ ಕಾಪಾಡಬೇಕಾದದ್ದು ನಾಯಕರೆನಿಸಿಕೊಂಡವರ ಸರ್ಕಾರದ ಹಿರಿಯರ ಹೊಣೆಯಾಗಿದೆ.
ಇತ್ತೀಚೆಗೆ ವಿದ್ಯಮಾನಗಳನ್ನು ಅವಲೋಕಿಸಿದಾಗ ವಿದ್ಯಾರ್ಥಿಯ ಮತ್ತು ಯುವಕರ ಬಲಾಢ್ಯ ದೃಷ್ಟಿಕೋನಗಳು ಕ್ಷೀಣಿಸುತ್ತಿವೆಯೇನೋ ಎಂಬ ಭಯ ಕಾಡತೊಡಗಿದೆ. ಇದಕ್ಕೆ ಪೂರಕವೆಂಬಂತೆ ಪಾಶ್ಚಾತ್ಯ ಗ್ರಹಣ, ಮಾಧ್ಯಮಗಳ ಪ್ರೇರಣೆ, ಪ್ರಗತಿಪರರ ಪೊಳ್ಳು ಪ್ರತಿಪಾದನೆ, ಸ್ವಾರ್ಥ ಮನೋಭಾವನೆಯ ವಿಚಾರವಾದಿಗಳು, ರಾಜಕಾರಣಿಗಳ ಢೋಂಗಿತನ, ಆರಕ್ಷಕರ ಜಾಣ ಕುರುಡು, ಪೋಷಕರ ಅಸಹಾಯಕತೆ, ಶಿಕ್ಷಕರಲ್ಲಿ ಸಮಗ್ರ ಜ್ಞಾನದ ಕೊರತೆ ಇವುಗಳೆಲ್ಲವೂ ವಿದ್ಯಾರ್ಥಿಗಳು ಮತ್ತು ಯುವ ಸಮೂಹವನ್ನು ದಾರಿ ತಪ್ಪಿಸುತ್ತಿವೆ.
ಇಂತಹ ಸ್ಥಿತಿಯಲ್ಲಿ ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿ, ಬೇಸರವನ್ನು ಅಥವಾ ದುಃಖವನ್ನು ಹೋಗಲಾಡಿಸಲು ಮಾದಕ ದ್ರವ್ಯಗಳಿಗೆ ದಾಸರಾಗುತ್ತಿದ್ದಾರೆ. ಅಲ್ಲದೇ ವ್ಯಕ್ತಿತ್ವದ ನ್ಯೂನತೆ, ಅಸಹಜ ನಡವಳಿಕೆ, ಅಸಮಾನತೆ, ಕ್ರೌರ್ಯ, ಹಿಂಸಾಚಾರ, ಮೌಢ್ಯಗಳ ಆಸರೆ, ಮೋಸ, ದಗಾ, ವಂಚನೆ, ದಿಢೀರ್ ಹಣ ಸಂಪಾದನೆಯ ವ್ಯಾಮೋಹ, ಹತ್ಯೆ, ಆತ್ಮಹತ್ಯೆ, ಅಸಹಜ ಲೈಂಗಿಕ ಕ್ರಿಯೆ ಮತ್ತು ಮನೋ ವಿಕಲ್ಪಗಳನ್ನು ಕಾಣುತ್ತೇವೆ.
ಹೀಗಿರುವಾಗ ದೇಶವನ್ನು ಕಟ್ಟುವುದಾದರೂ ಹೇಗೆ ? ದೇಶದ ಸೂರು ಬಲಗೊಳ್ಳುವ ಕನಸನ್ನು ಕಾಣುವುದಾದರೂ ಹೇಗೆ ? ದೇಶವು ಸ್ಥಿರತೆ ಕಂಡುಕೊಳ್ಳುವುದೇ ? ದೇಶದ ಆರ್ಥಿಕ ವ್ಯವಸ್ಥೆ ಸಬಲಗೊಳ್ಳುವುದೇ ? ಇವನ್ನೆಲ್ಲಾ ಹಿರಿಯರಾದವರು, ದೊಡ್ಡವರೆನಿಸಿ ಕೊಂಡವರು ಯೋಚಿಸಬೇಕಲ್ಲವೇ.
ಏಳಿ ಯುವಕರೇ, ಎದ್ದೇಳಿ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ