ತುಮಕೂರು– ಸಂಸತ್ತಿನಲ್ಲೂ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ರಾಜೀವಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ಸ್ಥಾನಮಾನಗಳನ್ನು ಕೊಡುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅವಕಾಶಗಳನ್ನು ನೀಡಲಾಯಿತು. ಅದರಿಂದ ಇದೀಗ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿ ಪ್ರಾಧಾನ್ಯತೆ ಸಿಕ್ಕಿದೆ ಎಂದರು.
ನಂತರ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಇದ್ದಾಗ ಸಂಸತ್ತಿನಲ್ಲೂ ಶೇ.50 ಅವಕಾಶ ಕಲ್ಪಿಸುವ ಮಹಿಳಾ ಮಸೂದೆಯನ್ನು ಮಂಡಿಸಲಾಯಿತು. ಆ ದಿನಗಳಲ್ಲಿ ರಾಜ್ಯಸಭೆಯಲ್ಲಿ ಅದು ಅನುಮೋದನೆ ಆಗಲಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಈ ಮಸೂದೆಯನ್ನು ಅನುಮೋದಿಸಿ ಮಹಿಳೆಗೆ ಶಕ್ತಿ ನೀಡಬೇಕು ಎಂದರು.
ಇಡೀ ವಿಶ್ವದಲ್ಲಿ ಭಾರತದಲ್ಲಿಯೇ ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿ ಸಬಲೀಕರಣಗೊಳಿಸಲಾಗಿದೆ. ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲೂ ಪುರುಷರನ್ನು ಹಿಂದಿಕ್ಕಿ ಸಾಧನೆ ಮಾಡುತ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಯಾರೂ ಅವಕಾಶಗಳನ್ನು ಕಾದು ಕೂರುವುದು ಸರಿಯಲ್ಲ. ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು. ವಿಶೇಷವಾಗಿ ಮಹಿಳೆಯವರು ಅತಿದೊಡ್ಡ ಜವಾಬ್ದಾರಿ ಹೊಂದಿರುತ್ತಾರೆ. ಮನೆಯ ಒಳಗೆ ಮತ್ತು ಹೊರಗೆ ದುಡಿಯಬೇಕಾಗುತ್ತದೆ. ಈ ನಡುವೆ ತಮ್ಮ ಆರೋಗ್ಯವನ್ನೂ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನಿಸರವರು ಮಾತನಾಡಿ,ಮಹಿಳೆ ಪುರುಷರಿಗೆ ಸ್ಪರ್ಧಿಯಾಗುವುದು ಬೇಡ, ಮಹಿಳೆಯೇ ತಮ್ಮ ಆತ್ಮ ಸಂತೋಷಕ್ಕಾಗಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ ಎಂದರು.ಇಂದಿನ ದಿನಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಿದ್ದಾರೆ, ಆದರೆ ಆರ್ಥಿಕ ಸ್ವಾಲಂಭನೆಯನ್ನು ಅನುಭವಿಸುವ ಹಕ್ಕನ್ನು ಜಯಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ಬಿ.ವಿ.ಅಶ್ವಿಜ, ಎಸ್.ಪಿ.ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಶುಭ.ಸಿ., ಶಾರದಮ್ಮ, ಸೌಮ್ಯ, ಡಾ.ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
