ಚನ್ನರಾಯಪಟ್ಟಣ, ಮಾ.20: ಪಟ್ಟಣದ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯಲ್ಲಿ ಕ್ರೀಡಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಕ್ಕೋ ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರ್ತಿ ಹಾಗೂ ಅಂತರಾಷ್ಟ್ರೀಯ ಕೊಕ್ಕೋ ಆಟಗಾರ್ತಿ ಬಿ. ಚೈತ್ರ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯನ್ನೂ ಸಮಾನವಾಗಿ ಪ್ರೋತ್ಸಾಹಿಸಬೇಕೆಂದು ಪೋಷಕರು ಹಾಗೂ ಶಿಕ್ಷಕರಿಗೆ ಕರೆ ನೀಡಿದರು.
ಮಾತನಾಡಿದ ಅವರು, ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸಿ, ಆ ಕ್ರೀಡೆಯಲ್ಲಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶಿಕ್ಷಣದ ಜೊತೆಗೆ ಕ್ರೀಡೆಯನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
90ರ ದಶಕದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಯನ್ನು ಕಡೆಗಣಿಸಿ ಓದಿನ ಮೇಲೆಯೇ ಹೆಚ್ಚು ಒತ್ತಡ ಹೇರುವ ಪ್ರವೃತ್ತಿ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸು ಮತ್ತು ದೇಹ ಉಲ್ಲಾಸಗೊಳ್ಳುತ್ತದೆ, ಏಕಾಗ್ರತೆ ವೃದ್ಧಿಸುತ್ತದೆ ಎಂದು ಹೇಳಿದರು.
ಕ್ರೀಡೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪೂರ್ಣ ಪ್ರಮಾಣದ ಪ್ರೋತ್ಸಾಹ ಹಾಗೂ ಸಹಕಾರ ದೊರೆತರೆ, ಅವರು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ ಎಂದು ಬಿ. ಚೈತ್ರ ಅಭಿಪ್ರಾಯಪಟ್ಟರು.
ಚನ್ನರಾಯಪಟ್ಟಣದ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ ಹಲವು ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂಬ ವಿಚಾರ ತಿಳಿದು ಸಂತೋಷವಾಗಿದೆ ಎಂದು ಹೇಳಿದ ಅವರು, ಆ ಎಲ್ಲಾ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಶ್ರೀಮತಿ ಗೀತಾ ದಿನೇಶ್, ಪ್ರಾಂಶುಪಾಲ ಇ. ಮಹದೇವ್, ಅಂತರಾಷ್ಟ್ರೀಯ ಕೊಕ್ಕೋ ಆಟಗಾರ್ತಿ ಬಿ. ಚೈತ್ರ, ಬೆಂಗಳೂರಿನ ಅಕುರನಾ ಲರ್ನಿಂಗ್ ಕೆಪೆ ಮುಖ್ಯಸ್ಥರು ಹಾಗೂ ಸಂಪನ್ಮೂಲ ವ್ಯಕ್ತಿ ಚನ್ನರಾಯಪಟ್ಟಣ ಕುಶಾಲ್, ದೈಹಿಕ ಶಿಕ್ಷಕ ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
