ಹಾಸನ/ಬೆಂಗಳೂರು, ಮಾ.21: ಖ್ಯಾತ ಕನ್ನಡ ನಟ ರಿಷಬ್ ಶೆಟ್ಟಿ ಅವರನ್ನು ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಅಕ್ಕ (AKKA) ವಿಶ್ವ ಕನ್ನಡ ಸಮ್ಮೇಳನ–2026 ರ ಸಾಂಸ್ಕೃತಿಕ ರಾಯಭಾರಿಯಾಗಿ ನೇಮಿಸಲಾಗಿದೆ.
ಅಮೆರಿಕಾದ ಕನ್ನಡ ಕೂಟಗಳ ಸಂಘಟನೆಯಾದ ‘ಅಕ್ಕ’ (Association of Kannada Kootas of America) ತನ್ನ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಈ ಮಹತ್ವದ ಘೋಷಣೆ ಮಾಡಿದೆ.
ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಲೆಗಳನ್ನು ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ಬಲವಾಗಿ ಪ್ರತಿನಿಧಿಸುವ ಉದ್ದೇಶದಿಂದ, ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ದೇಶಕರಾದ ರಿಷಬ್ ಶೆಟ್ಟಿಯನ್ನು ಈ ಗೌರವಾನ್ವಿತ ಜವಾಬ್ದಾರಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
‘ಕಾಂತಾರ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಹೆಮ್ಮೆ ಹೆಚ್ಚಿಸಿದ ರಿಷಬ್ ಶೆಟ್ಟಿ, ಇದೀಗ ವಿಶ್ವದ ಕನ್ನಡಿಗರನ್ನು ಒಗ್ಗೂಡಿಸುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ–2026ರ ಸಾಂಸ್ಕೃತಿಕ ಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಕ್ಕ ಸಂಸ್ಥೆಯ 25ನೇ ವರ್ಷದ ವಿಶೇಷ ಸಂಭ್ರಮದ ಅಂಗವಾಗಿ ನಡೆಯಲಿರುವ ಈ ಸಮ್ಮೇಳನವು, ಅಮೆರಿಕಾದಲ್ಲಿರುವ ಕನ್ನಡಿಗರ ಅತಿ ದೊಡ್ಡ ಸಾಂಸ್ಕೃತಿಕ ಸಮಾಗಮಗಳಲ್ಲಿ ಒಂದಾಗಿದ್ದು, ವಿಶ್ವದ ವಿವಿಧ ಭಾಗಗಳ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮಹತ್ವದ ಕಾರ್ಯಕ್ರಮವಾಗಿರಲಿದೆ.
