ಚನ್ನರಾಯಪಟ್ಟಣ, ಮಾ.21: “ಮನುಷ್ಯ ಹುಟ್ಟಿದ ಮೇಲೆ ಬಾಳಿನಲ್ಲಿ ಸಾರ್ಥಕವಾಗಲು ಪ್ರೀತಿ ಮತ್ತು ಮಾನವೀಯತೆ ಮುಖ್ಯ. ಬದುಕಿನ ನಿಜವಾದ ಅರ್ಥವನ್ನು ತಿಳಿಸಬೇಕೆಂದರೆ ಅದನ್ನು ಪುನೀತ್ ರಾಜ್ಕುಮಾರ್ ಅವರ ಬದುಕಿನಿಂದಲೇ ಕಲಿಯಬಹುದು. ಅನೇಕ ಜನರ ಬಾಳನ್ನು ಬೆಳಗಿಸಿದ ಅವರು ನಂದಾದೀಪದಂತೆ ಸದಾ ಸ್ಮರಣೀಯರು” ಎಂದು ಡಿವೈಎಸ್ಪಿ ಕುಮಾರ್ ಹೇಳಿದರು.
ಪಟ್ಟಣದಲ್ಲಿ ಕನ್ನಡದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ಅಭಿಮಾನಿ ಬಳಗಗಳು ಅತ್ಯಂತ ಅರ್ಥಪೂರ್ಣವಾಗಿ, ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಆಚರಿಸಿತು.
ಹಳೇ ಬಸ್ ನಿಲ್ದಾಣದಲ್ಲಿ ವಿಶೇಷ ಕಾರ್ಯಕ್ರಮ
ಪಟ್ಟಣದ ಹಳೇ ಬಸ್ ನಿಲ್ದಾಣದ ಡಾ. ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಸ್ಪಿ ಕುಮಾರ್,
“ಆಟೋ ಚಾಲಕರು ಕಾನೂನಿಗೆ ಗೌರವ ನೀಡಿ ಸಮವಸ್ತ್ರ ಧರಿಸಬೇಕು. ಡಿಎಲ್, ಲೈಫ್ ಇನ್ಸೂರೆನ್ಸ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಆಟೋ ಚಾಲಕರಿಗೆ ಲೈಫ್ ಇನ್ಸೂರೆನ್ಸ್ – ಚಿದಾನಂದ್ ಭರವಸೆ
ಈ ವೇಳೆ ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಮಾತನಾಡಿ,
“ಆಟೋ ಚಾಲಕರಿಗೆ ಲೈಫ್ ಇನ್ಸೂರೆನ್ಸ್ನ್ನು ಹಂತ ಹಂತವಾಗಿ ಮಾಡಿಸಿಕೊಡಲಾಗುತ್ತಿದೆ. ಅಪ್ಪು ಅಭಿಮಾನಿಗಳು ಇಂದು ನೇತ್ರ ತಪಾಸಣೆ, ರಕ್ತದಾನ, ಆರೋಗ್ಯ ತಪಾಸಣೆ, ಅನ್ನಸಂತರ್ಪಣೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಬೋರ್ಡ್ ಹಾಗೂ ಲೇಖನ ಸಾಮಗ್ರಿ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು ಅಭಿನಂದನಾರ್ಹ” ಎಂದರು.

ಅವರು ಮುಂದುವರಿದು, “ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಸಂಚರಿಸಬೇಕು. ಸಂಚಾರಿ ಪೊಲೀಸರು ಜನಜಾಗೃತಿ ಕಾರ್ಯಕ್ರಮ ಆಯೋಜಿಸಿದರೆ ನೂರಾರು ಹೆಲ್ಮೆಟ್ಗಳನ್ನು ಉಚಿತವಾಗಿ ವಿತರಿಸಲಾಗುವುದು” ಎಂದು ಘೋಷಿಸಿದರು.
ಸಂಚಾರಿ ಜಾಗೃತಿ ಕಾರ್ಯಕ್ರಮ ಶೀಘ್ರ
ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಚರಣ್ಗೌಡ ಮಾತನಾಡಿ,
“ಜೀವ ರಕ್ಷಣೆಗೆ ರಸ್ತೆ ಸುರಕ್ಷತಾ ಜಾಗೃತಿ ಹಾಗೂ ಸಂಚಾರ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಸಾರ್ವಜನಿಕವಾಗಿ ಆಯೋಜಿಸಲಾಗುವುದು” ಎಂದರು.
25ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ಆಟೋ ನಿಲ್ದಾಣದ ಆವರಣದಲ್ಲೇ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 25ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದರು.
ಇದಲ್ಲದೆ, ಪಟ್ಟಣದ ಸರಕಾರಿ ಆಸ್ಪತ್ರೆಯ ಸಹಕಾರದಲ್ಲಿ ಉಚಿತ ನೇತ್ರ ತಪಾಸಣೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಸಂಘದ ವತಿಯಿಂದ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಅದೇ ರೀತಿ, ಸಾರ್ವಜನಿಕರಿಗೆ
- ರಕ್ತಪರೀಕ್ಷೆ
- ರಕ್ತದೊತ್ತಡ ಪರೀಕ್ಷೆ
- ಸಕ್ಕರೆ ಕಾಯಿಲೆ ತಪಾಸಣೆ
ಉಚಿತವಾಗಿ ನಡೆಸಲಾಯಿತು.
120ಕ್ಕೂ ಹೆಚ್ಚು ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ
ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ
ಗೂರನಹಳ್ಳಿ, ಆಲಗೊಂಡನಹಳ್ಳಿ, ಬರಗೂರು, ಬರಗೂರು ಕೊಪ್ಪಲು, ಬೀರೂರು, ದೊಡ್ಡಮತಿಘಟ್ಟ ಮತ್ತು ಉಗ್ರನಕೊಪ್ಪಲು ಗ್ರಾಮದ 1ರಿಂದ 7ನೇ ತರಗತಿ ಓದುತ್ತಿರುವ ಸುಮಾರು 120 ಸರ್ಕಾರಿ ಶಾಲಾ ಮಕ್ಕಳಿಗೆ
- ಪರೀಕ್ಷೆ ಪ್ಯಾಡ್
- ಲೇಖನಿ
- ನೋಟ್ ಪುಸ್ತಕ
ವಿತರಿಸಲಾಯಿತು.
ಅನ್ನಸಂತರ್ಪಣೆ – ಭಾವಚಿತ್ರಕ್ಕೆ ಪುಷ್ಪನಮನ
ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಅನ್ನದಾನ ನೆರವೇರಿಸಲಾಯಿತು.
ಪಟ್ಟಣದ ಬಿ.ಎಂ. ರಸ್ತೆಯ ವಿವಿಧ ಕಡೆಗಳಲ್ಲಿ ಶಾಮಿಯಾನ ಹಾಕಿ, ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಚಿತ್ರಗಳ ಹಾಡುಗಳನ್ನು ಹಾಕಿಕೊಂಡು ಅಭಿಮಾನಿಗಳು ಸಂಭ್ರಮಿಸಿದರು. ಬೆಳಗ್ಗಿನಿಂದ ಸಂಜೆವರೆಗೆ ಜನಸಂದಣಿ ಕಂಡುಬಂತು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಪುರಿಮಂಜಣ್ಣ, ಸಮಾಜ ಸೇವಕ ಗಜಾನನ ಮನೋಹರ್, ರೈತಸಂಘದ ತಾಲೂಕು ಅಧ್ಯಕ್ಷ ಸಿ.ಜಿ. ರವಿ, ಪ್ರೇಮಮ್ಮ, ಮಾಜಿ ಪುರಸಭಾ ಸದಸ್ಯ ಶರವಣಕುಮಾರ್, ವಿನಾಯಕ ಆಟೋ ಚಾಲಕರ ಸಂಘದ ಅಧ್ಯಕ್ಷ ರಾಮಣ್ಣ, ಮಂಜಣ್ಣ, ಬಾಬಣ್ಣ, ರುದ್ರೇಶ್, ತೀರ್ಥಾಚಾರಿ, ಜಾವಿದ್, ಶ್ರೀನಿವಾಸ್, ಗಂಗಣ್ಣ, ಪ್ರಸನ್ನ, ರಾಮಚಂದ್ರು, ಮಹೇಶ್, ದಿನೇಶ್ ಸೇರಿದಂತೆ ಹಲವರು ಭಾಗವಹಿಸಿ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
– ಮಂಜುನಾಥವ ಐ.ಕೆ
