ರಾಮನಾಥಪುರ, ಮಾ.21 (RNP): ರಾಮನಾಥಪುರದ ಕಾವೇರಿ ನದಿ ದಂಡೆಯ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸುಮಾರು 3 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿಯವರು ಶಾಸಕರ ಧರ್ಮಪತ್ನಿ ತಾರಾ ಮಂಜು ಅವರಿಗೆ ಸಲ್ಲಿಸಿದರು.
ಶಾಸಕರ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ ಕಾವೇರಿ ನದಿ ಸಮಿತಿಯವರು ಭೇಟಿ ನೀಡಿ, ರಾಮನಾಥಪುರದ ಶ್ರೀ ಅಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಕಾವೇರಿ ನದಿ ದಂಡೆಯ ಬದಿಯಲ್ಲಿ ನೀರಿನ ಹರಿವು ಹೆಚ್ಚಾದಾಗ ನೀರು ನುಗ್ಗುವ ಸಂಭವ ಇರುವ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಾಣ ಅಗತ್ಯವಿದೆ ಎಂದು ತಿಳಿಸಿದರು.
ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ಅವರ ಸೂಚನೆ ಮೇರೆಗೆ, ಜಲಸಂಪನ್ಮೂಲ ಇಲಾಖೆಯ 2023-24ನೇ ಸಾಲಿನ ಏಕರೂಪ ದರಸೂಚಿ ಅನ್ವಯ 300 ಲಕ್ಷ ರೂ. ಮೊತ್ತಕ್ಕೆ ತಡೆಗೋಡೆ ನಿರ್ಮಾಣದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಕಾಮಗಾರಿಗೆ ಅನುದಾನ, ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿ ಕೋರಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ತಯಾರಿಸಲಾಗಿದ್ದು, ಅದನ್ನು ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರು ತಾರಾ ಮಂಜು ಅವರಿಗೆ ಹಸ್ತಾಂತರಿಸಿದರು.
ಈ ಕುರಿತು ಮಾತನಾಡಿದ ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ ಹೋಬಳಿಯಲ್ಲಿರುವ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಅತ್ಯಂತ ಪ್ರಾಚೀನವಾಗಿದ್ದು, ಕಾವೇರಿ ನದಿ ದಂಡೆಯ ಮೇಲಿರುವ ಈ ಪುಣ್ಯಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇದರ ಜೊತೆಗೆ ಸುತ್ತಮುತ್ತಲಿನ ಇತರೆ ಹತ್ತಾರು ದೇವಾಲಯಗಳಿಗೂ ಜಾತ್ರೆ ಹಾಗೂ ಶುಭ ಸಂದರ್ಭಗಳಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಮೂಲಭೂತ ಸೌಕರ್ಯಗಳ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.
ದೇವಾಲಯದ ಬಳಿಯಲ್ಲಿ ಸಾರ್ವಜನಿಕ ಬಳಕೆಯ ಶೌಚಾಲಯಗಳ ಕೊರತೆ ಇರುವುದರಿಂದ ಹಾಗೂ ಪುಣ್ಯ ಸ್ನಾನಕ್ಕೆ ಬರುವ ಭಕ್ತಾಧಿಗಳಿಗೆ ಬಟ್ಟೆ ಬದಲಿಸಿಕೊಳ್ಳಲು ಕೊಠಡಿಗಳ ಅಗತ್ಯವಿರುವ ಕಾರಣ, ದೇವಾಲಯದ ಮೆಟ್ಟಿಲುಗಳ ಬಳಿಯ ಖಾಲಿ ಜಾಗವನ್ನು ಬಳಸಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸ್ಥಳದ ಸುರಕ್ಷತೆ ದೃಷ್ಟಿಯಿಂದ 150ರಿಂದ 200 ಮೀಟರ್ ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಿಸಲು ಅಂದಾಜು ಪಟ್ಟಿ ನೀಡಲಾಗಿದೆ ಎಂದು ವಿವರಿಸಿದರು.
ಈ ವೇಳೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್, ಐ.ಬಿ. ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾರಾ ಮಂಜು ಮಾತನಾಡಿ, ಈ ವಿಷಯವನ್ನು ಶಾಸಕರ ಗಮನಕ್ಕೆ ತಂದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವಂತೆ ಸಹಕರಿಸುವುದಾಗಿ ಭರವಸೆ ನೀಡಿದರು.
– ಕುಮಾರಸ್ವಾಮಿ
