ಶ್ರೀನಗರ, ಮಾ.27: ಜಮ್ಮು-ಕಾಶ್ಮೀರದ ಜೋಜಿಲಾ ಪಾಸ್ನ ಝೀರೋ ಪಾಯಿಂಟ್ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಹಿಮಪಾತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಇನ್ನೂ ಹಿಮದಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಶ್ರೀನಗರದಿಂದ ಕಾರ್ಗಿಲ್ ಕಡೆಗೆ ಸಾಗುತ್ತಿದ್ದ ವಾಹನಗಳ ಸರಣಿ ಮೇಲೆ ಏಕಾಏಕಿ ಮತ್ತು ತೀವ್ರವಾಗಿ ಹಿಮಪಾತ ಸಂಭವಿಸಿದ್ದು, ಐದು ವಾಹನಗಳು ಭಾರೀ ಹಿಮದಡಿ ಹೂತುಹೋಗಿವೆ. ಈ ದುರ್ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಳಿಕ ಚಿಕಿತ್ಸೆ ವೇಳೆ ಮತ್ತೊಬ್ಬರು ಸಾವನ್ನಪ್ಪಿದ ಹಿನ್ನೆಲೆ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ವೈದ್ಯಕೀಯ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಒಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದು, ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಗ್ಯಾಂಡರ್ಬಾಲ್ ಪೊಲೀಸರು, ವಿಪತ್ತು ನಿರ್ವಹಣಾ ತಂಡಗಳು ಹಾಗೂ ಇತರೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಿಮದಡಿ ಸಿಲುಕಿರುವವರನ್ನು ಹೊರತೆಗೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
ಜೋಜಿಲಾ ಪಾಸ್ನ ಹವಾಮಾನ ವೈಪರೀತ್ಯದಿಂದ ಈ ಭಾಗದಲ್ಲಿ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದ್ದು, ಪ್ರಯಾಣಿಕರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.
