ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘ(ರಿ), ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ಕಲಾ ಸಂಘಗಳ ಸಹಯೋಗದಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ರಂಗಗೀತೆ ಗಾಯನ ಕಾರ್ಯಕ್ರಮವನ್ನು ಕಲಾವಿದ ಗ್ಯಾರಂಟಿ ರಾಮಣ್ಣ ಉದ್ಟಾಟಿಸಿ ರಂಗಭೂಮಿ ಎಂದರೆ ಭೂಮಿಯ ಎಲ್ಲಿಯಾದರೂ ಅದು ಬೆಟ್ಟವಾಗಿರಲಿ, ಬೀದಿಯಾಗಿರಲಿ ರಂಗದ ಮೇಲಾಗಲಿ ಒಟ್ಟಾರೆ ಭೂಮಿಯಲ್ಲಿ ಕಲೆ ಪ್ರದರ್ಶಿಸುವುದೇ ಆಗಿದೆ ಎಂದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ 1948ರಲ್ಲಿ ವಿಶ್ವ ಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ಯುನೆಸ್ಕೋ ಒಂದು ಸ್ವಾಯತ್ತ ವೃತ್ತಿಪರವಾದ ಅಂತರಾಷ್ಟ್ರೀಯ ರಂಗ ಸಂಸ್ಥೆ ಪ್ರಾರಂಭಿಸಿ ಇದನ್ನು ಇಂಟರ್ ನ್ಯಾಷನಲ್ ಥಿಯೇಟರ್ ಇನ್ ಸ್ಟಿಟೂಟ್ ಎಂದು ಕರೆಯಲಾಗುತ್ತದೆ.
1961 ರಲ್ಲಿ ಹಲ್ಸಂಕಿಯಲ್ಲಿ ನಡೆದ ಅಂತರಾಷ್ಟ್ರೀಯ ಥೇಟರ್ ಕಾಂಗ್ರೆಸ್ ಸಮ್ಮೇಳನದಲ್ಲಿ ವಿಶ್ವ ರಂಗಭೂಮಿ ದಿನಾಚಾರಣೆ ಆಚರಿಸುವ ವಿಷಯ ಪ್ರಸ್ತಾಪವಾಗಿ ಈ ಪ್ರಸ್ತಾವನೆಗೆ ವ್ಯಾಪಕ ಬೆಂಬಲ ದೊರಕಿ 1962ರಿಂದ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಿಕೊಂಡು ಬರಲಾಗಿದೆ.

ಪ್ರಾಚೀನ ಕಲೆ ರಂಗಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ಪ್ರಪಂಚದಾದ್ಯಂತ ರಂಗಭೂಮಿ ಕಲೆ ಹಾಗೂ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಈ ದಿನದ ಮಹತ್ವ. ಪ್ರತಿ ವರ್ಷ ಒಬ್ಬ ನಾಟಕಕಾರ, ರಂಗಕರ್ಮಿ ಸಂದೇಶ ಕಳುಹಿಸುತ್ತಾನೆ. ಈ ವರೆಗೆ 60ಕ್ಕೂ ಹೆಚ್ಚು ವಿಶ್ವದ ಶ್ರೇಷ್ಠ ನಾಟಕಕಾರರು, ರಂಗಕರ್ಮಿ ಗಳು ಸಂದೇಶ ಕಳಿಸಿದ್ದು ಇವರಲ್ಲಿ ಭಾರತೀಯರಾದ 2002ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರರು ಡಾ.ಗಿರೀಶ್ ಕಾರ್ನಾಡ್ ಮತ್ತು 2018ರಲ್ಲಿ ರಾಷ್ಟ್ರೀಯ ನಾಟಕ ಶಾಲೆ ನವದೆಹಲಿಯ ನಿರ್ದೇಶಕರು ರಾಮ್ ಗೋಪಾಲ್ ಬಜಾಜ್ ಇವರುಗಳಿಗೆ ಈ ಸಂದೇಶ ಕಳಿಸುವ ಗೌರವ ದೊರಕಿದೆ.
ಇದು ವಿಶ್ವದ 50 ಕ್ಕೂ ಹೆಚ್ಚು ಭಾಷೆಗೆ ತರ್ಜುಮೆ ಆಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರು ಡಾ. ಹೆಚ್.ಎಲ್. ಮಲ್ಲೇಶ್ ಗೌಡರು ಮಾತನಾಡಿ ರಂಗದ ಪಾತ್ರಗಳಿಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿ ತರಬೇತಿಗೊಳಿಸಿ ರಂಗದ ಮೇಲೆ ತಂದು ಮೆರೆಸುವ ನಿರ್ದೇಶಕರು, ಹಾರ್ಮೋನಿಯಂ ಮಾಸ್ತರ ಪಾತ್ರವನ್ನು ನಾವು ಕಲಾವಿದರು ಎಂದೂ ಮರೆಯಬಾರದು.ಅವರನ್ನು ಗುರು ಸ್ಥಾನದಲ್ಲಿ ಗೌರವಿಸಬೇಕು. ಆಗಲೇ ಕಲೆಗೆ ಬೆಲೆ ಎಂದರು. ಕಲಾವಿದರು ನಿವೃತ್ತ ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಾಮಘಟ್ಟ ಜಗದೀಶ್, ನಟರಾದ ಹೆಚ್. ಎಂ.ಪ್ರಭಾಕರ್, ಆಡುವಳ್ಳಿ ಸುನೀಲ್, ಕಾರ್ಲೆ ಗೋವಿಂದೇಗೌಡರು, ಪ್ರದೀಪ್ ಗವೇನಹಳ್ಳಿ ಮೊದಲಾದವರು ಇದ್ದರು.

50ಕ್ಕೂ ಹೆಚ್ಚು ಕಲಾವಿದರು ಮಹಿಳೆಯರು ಒಳಗೊಂಡು ಯಶಸ್ವಿ ರಂಗಗೀತೆ ಗಾಯನ ನಡೆಸಿದರು. ಬೆಳ್ಳೂರು ಕ್ರಾಸ್ ನಿಂದ ಆಗಮಿಸಿದ್ದ ಡಿ.ಸಿ. ಮಂಜುನಾಥ್ ಹಾರ್ಮೋನಿಯಂ, ಅಶ್ವಥ್ ಕುಮಾರ್ ಕೀ ಬೋರ್ಡ್ ಸಹಕಾರ ನೀಡಿದರು. ಇದೇ ವೇಳೆ 50 ಮಂದಿ ರಂಗ ಕಲಾವಿದರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌ.ಕಾರ್ಯದರ್ಶಿ ಬೊಮ್ಮೇಗೌಡರು ಕಾರ್ಯಕ್ರಮ ನಿರೂಪಿಸಿದರು.
