ಕೆ.ಆರ್.ಪೇಟೆ,ಮಾ.28: ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಬಳಿಕ ಮಾತನಾಡಿದ ಎ.ಬಿ.ಕುಮಾರ್ ನಮ್ಮ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷಿö್ಮ, ಗೃಹಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳು ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿವೆ. ಬಡವರ ಬದುಕು ಬದಲಾಯಿಸಲು ಕಾರಣವಾಗಿವೆ. ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿವೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡಿದ ಕಾರಣ ನಮ್ಮ ಸರ್ಕಾರವು ಬೆಲೆ ಏರಿಕೆಯಲ್ಲಿ ಬಡವರು ನಿತ್ಯ ಜೀವನ ನಡೆಸಲು ಬೇಕಾದ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಿಕೊಡುವ ಮೂಲಕ ಬಡವರ ನೆಮ್ಮದಿಗೆ ಕಾರಣವಾಗಿದೆ ಎಂದು ಎ.ಬಿ.ಕುಮಾರ್ ತಿಳಿಸಿದರು. ಇದೂವರೆವುಗೂ ನಮ್ಮ ಸರ್ಕಾರವು 1.5ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿರುತ್ತದೆ.
ಅದೆಷ್ಟೋ ಕುಟುಂಬಗಳು ತಮ್ಮ ಮನೆಯ ವಿದ್ಯುತ್ ಪಾವತಿಸಲು ಪರದಾಡುತ್ತಿದ್ದವು. ಈಗ ವಿದ್ಯುತ್ ಬಿಲ್ ಪಾವತಿಸುವ ಪ್ರಮೇಯವಿಲ್ಲದೇ ನೆಮ್ಮದಿಯಿಂದ ಮನೆಯಲ್ಲಿ ವಾಸ ಮಾಡುತ್ತಿವೆ. ತಿಂಗಳಿಗೊಮ್ಮೆ ಅನ್ನಭಾಗ್ಯ ಯೋಜನೆ ಮೂಲಕ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ನಿರುದ್ಯೋಗಿಗಳು ಉದ್ಯೋಗ ಸಿಗುವತನಕ ನಿರುದ್ಯೋಗ ಭತ್ಯೆ ಪಡೆದು ಉದ್ಯೋಗ ಹುಡುಕಲು ಸಾಧ್ಯವಾಗಿದೆ. ಶಕ್ತಿ ಯೋಜನೆಯು ಮಹಿಳೆಯರು ರಾಜ್ಯಾದ್ಯಂತ ಪ್ರವಾಸಿ ತಾಣಗಳು, ದೇವಾಲಯಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳಲು ಅವಕಾಶವಾಗಿದೆ ಎಂದು ಎ.ಬಿ.ಕುಮಾರ್ ತಿಳಿಸಿದರು.
ಆಹಾರ ಇಲಾಖೆಯ ಶಿರಸ್ತೇದಾರ್ ನಟರಾಜ್ ಮಾತನಾಡಿ ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದಿಲ್ಲ. ಆದರೆ ಅನಾರೋಗ್ಯಕ್ಕೆ ಒಳಗಾದ ಬಡವರಿಗೆ ಚಿಕಿತ್ಸೆಗೆ ನೆರವಿಗಾಗಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ಹಾಗಾಗಿ ಪಡಿತರ ಚೀಟಿ ಇಲ್ಲದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ ಮಾತನಾಡಿ ಬಾಡಿಗೆ ಮನೆಯನ್ನು ಬದಲಾಯಿಸಿದಾಗ ಹೊಸ ಮನೆಯ ಬಾಡಿಗೆ ಕರಾರು ಪತ್ರ ಹಾಗೂ ಸಿ.ಆರ್.ವಿದ್ಯುತ್ ಬಿಲ್ ನೀಡಿ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಅವಕಾಶ ಇರುತ್ತದೆ. ಅಲ್ಲದೆ ರೈತರ ತಮ್ಮ ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕೆ ಸಬ್ಸಿಡಿ ದರದ ಶುಲ್ಕವನ್ನು ವಿಧಿಸಲಾಗುತ್ತದೆ. ಹಾಗಾಗಿ ರೈತರು ತಮ್ಮ ಅಕ್ರಮ ಪಂಸ್ಸೆಟ್ಗಳನ್ನು ಸಕ್ರಮಗೊಳಿಸಿಕೊಂಡರೆ ರೈತರಿಗೆ ತಕ್ಕಂತೆ ಟಿಸಿಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಡಲಾಗುವುದು ಆಗ ರೈತರ ಟಿ.ಸಿ.ಗಳು ಸುಟ್ಟು ಹೋಗುವುದು ತಪ್ಪಲಿದೆ ಹಾಗಾಗಿ ರೈತರು ಈ ಸಬ್ಸಿಡಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ನಟರಾಜ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ವಿದ್ಯಾವತಿ, ಜಿಲ್ಲಾ ಉದ್ಯೋಗಾಧಿಕಾರಿ ವಿ.ನವೀನ್ಕುಮಾರ್, ಡಿಪೋ ಟ್ರಾಪಿಕ್ ಇನ್ಸ್ ಪೆಕ್ಟರ್ ಗವಿಸಿದ್ದಪ್ಪ ಅವರು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸುಷ್ಮಾ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ವಳಗೆರೆಮೆಣಸ ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾಚಂದ್ರಶೇಖರ್, ಬೊಮ್ಮೇನಹಳ್ಳಿ ಲತಾಹರೀಶ್, ಕನಕದಾಸನಗರ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಹಾಫೀಜ್ಉಲ್ಲಾ, ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ.ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
