ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ, ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಸ್ಥಳೀಯ ವಿಶ್ವಪಥ ಚಾರಿಟಬಲ್ ಟ್ರಸ್ಟ್ ಕಲಾವಿದರು ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕವನ್ನು ಪ್ರದರ್ಶಿಸಿ ಅಚ್ಚರಿ ಮೂಡಿಸಿದರು.
ಇದು ಪಿ. ಲಂಕೇಶ್ ಅವರ ಜಟಿಲ ವಸ್ತುವಿಷಯ ಹೊಂದಿದ ಗಂಭೀರ ನಾಟಕ. ನಾಡಿನ ಹೆಸರಾಂತ ನಾಟಕಕಾರ ಸಂಸ ಅವರ ಕಡೆಯ ದಿನಗಳನ್ನು ಕುರಿತ ನಾಟಕವೆಂದು ಯದೀಶ್ ಮೊದಲಿಗೆ ಸೂಚ್ಯವಾಗಿ ತಿಳಿಸಿ, ಪ್ರೇಕ್ಷಕರಲ್ಲಿ ನಿಗೂಢ ಕುತೂಹಲ ಮೂಡಿಸುತ್ತಾರೆ.
ಇಡೀ ನಾಟಕದಲ್ಲಿ ಕಾಣಿಸಿಕೊಳ್ಳುವುದು ಬರೇ ಮೂರು ಪಾತ್ರಗಳು. ರುದ್ರಮೂರ್ತಿ ಒಬ್ಬ ಹೆಸರಾಂತ ನಾಟಕಕಾರ. ಬ್ರಹ್ಮಚಾರಿ ಕೂಡ. ಸಾಹಿತ್ಯ ಬರವಣಿಗೆಯಲ್ಲಿ ದೊರೆಯುವ ಅಲ್ಪಸ್ವಲ್ಪ ಗೌರವಧನವೇ ಅವನ ಜೀವನಾಧಾರ. ಆದರೆ, ಪೊಲೀಸರು ತನ್ನನ್ನು ಹಿಡಿಯಲು ಬರುತ್ತಾರೆ ಎಂಬ ಭ್ರಮೆಗೆ ಅವನು ಒಳಗಾಗಿದ್ದಾನೆ. ಯಾರೇ ಮನೆ ಬಾಗಿಲು ತಟ್ಟಿದರೂ, ಅವರು ಪೊಲೀಸರೆಂದು ಗುಮಾನಿ ಮಾಡಿಕೊಂಡು, ಕತ್ತಲೆಯ ಕೋಣೆಯಲ್ಲಿ ತನಗೆ ತಾನೇ ಬಂಧಿಯಾಗಿದ್ದಾನೆ.
ಇವನ ಸಾಹಿತ್ಯವನ್ನು ಮೆಚ್ಚಿರುವ ರಂಗಣ್ಣ, ಅವನನ್ನು ಭೇಟಿಯಾಗಲು ಬಂದು ಬಾಗಿಲು ತಟ್ಟುವಲ್ಲಿಂದ ನಾಟಕ ಆರಂಭವಾಗುತ್ತದೆ. ಅನುಮಾನದ ಹುತ್ತದೊಳಗೆ ಹಾವಿನಂತೆ ಹೊರಳಾಡುತ್ತಿರುವ ಮೂರ್ತಿಗೆ, ಬಾಗಿಲು ತೆರೆಯದೇ ಹಾಗೆಯೇ ಮಾತನಾಡಿಸಿ ಸಾಗಹಾಕುವ ಧಾವಂತವಿದೆ. ರಂಗಣ್ಣನ ಜೊತೆ ಮೂರ್ತಿಯ ಖಾಸ ಅಣ್ಣ ಚಂದ್ರಶೇಖರ್ ಸಹ ಬಂದಿದ್ದು, ಈ ಮೂವರ ಸಂಭಾಷಣೆಯಲ್ಲೇ ನಾಟಕ ಸಾಗುತ್ತದೆ.

“ಮನುಷ್ಯನಾಗಿ ಬದುಕಬೇಕಾದರೆ ಎಲ್ಲರ ಸಂಗಡ ಇರಬೇಕಾಗುತ್ತದೆ. ನಮ್ಮ ಮನುಷ್ಯತ್ವ ಗೊತ್ತಾಗುವುದೇ ಆಗ…” ಎನ್ನುವ ರಂಗಣ್ಣನ ಮಾತಿಗೆ,
“ಮನುಷ್ಯತ್ವ ಗೊತ್ತಾಗುವುದು ಎಲ್ಲರ ಜೊತೆಗೆ ಇದ್ದಾಗ ಅಲ್ಲ; ಒಬ್ಬನೇ ಇದ್ದಾಗ…” ಎಂದು ರುದ್ರಮೂರ್ತಿ ಪ್ರತಿಕ್ರಿಯಿಸುತ್ತಾನೆ.
ಹೀಗೆ ಸಂಭಾಷಣೆ ಮುಂದುವರಿಯುವಲ್ಲಿ, ರುದ್ರಮೂರ್ತಿ ಸೈನ್ಯದಲ್ಲಿ ಸೇವೆ ಸಲ್ಲಿಸಿರುವುದು ತಿಳಿಯುತ್ತದೆ.
“ಸೈನ್ಯದಲ್ಲಿ ನಾನು ಸುರಿಸಿದಷ್ಟು ರಕ್ತ ನೀನು ಸುರಿಸಿಲ್ಲ. ನನ್ನ ಹೇಡಿತನ ನೀನು ಅನುಭವಿಸಿಲ್ಲ. ಎಲ್ಲರ ಜೊತೆಗೆ ಲಯಬದ್ಧವಾಗಿ ಕಾಲು ಹಾಕುತ್ತ ಯುದ್ಧರಂಗಕ್ಕೆ ಹೋಗಿ, ಶತ್ರು ಯಾರು, ಏನು ಎಂದು ಕೇಳಿಕೊಳ್ಳದೆ ಕೊಂದಿದ್ದೇನೆ. ಕೊಂದ ಮೇಲೆ ಒಬ್ಬನೇ ಇದ್ದಾಗ ಭಯಗೊಂಡಿದ್ದೇನೆ. ಸತ್ತವರ ಹೆಂಡತಿ–ಮಕ್ಕಳನ್ನು ನೆನೆದು ದಿಗ್ಭ್ರಮೆಗೊಂಡಿದ್ದೇನೆ. ಈ ದಿಗ್ಭ್ರಮೆ ನನ್ನನ್ನು ಓಡಿಸಿದೆ. ಹೋರಾಟದ ಸ್ಥಳದಿಂದ ಓಡಿ ಹೇಡಿಯಾಗುವಂತೆ ಮಾಡಿದೆ. ನನ್ನ ಬೆನ್ನುಹತ್ತಿದ್ದಾರೆ. ನನ್ನನ್ನು ಕೊಲ್ಲಲು ಸೈನಿಕರು, ಗೂಢಚಾರರು ಹುಡುಕುತ್ತಿದ್ದಾರೆ…” ಎಂದು ಮೂರ್ತಿ ಹೇಳುವಾಗ,
“ಅದು ನಿಮ್ಮ ಭ್ರಮೆ” ಎಂದು ರಂಗಣ್ಣ ಹೇಳುತ್ತಾನೆ.
ಮೂರ್ತಿಯ ಮನಸ್ಥಿತಿ ಇಬ್ಬರಲ್ಲೂ ಅನುಮಾನ ಮೂಡಿಸುತ್ತದೆ. ಆದರೆ ರುದ್ರಮೂರ್ತಿ ಆಗಲೇ ಸರಿದಾರಿಗೆ ತರಲಾಗದ ಮನೋದೌರ್ಬಲ್ಯಕ್ಕೆ ಒಳಗಾಗಿದ್ದಾನೆ. ತನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂದು ಸಿಟ್ಟುಗೊಂಡು ಚಂದ್ರಶೇಖರ್ ಹೊರಹೋಗುತ್ತಾನೆ.
ಮೂರ್ತಿಯ ಬಳಿ ಇದ್ದ ಹಸ್ತಪ್ರತಿಯನ್ನು, ತನ್ನ ಬಳಿ ಇದ್ದ ೨೦ ರೂಪಾಯಿ ನೀಡಿ ರಂಗಣ್ಣ ತೆಗೆದುಕೊಂಡು ಹೋಗುತ್ತಾನೆ. ಎರಡನೇ ಬಾರಿಗೆ ರಂಗದ ಮೇಲೆ ಬಂದಾಗ, ಪೊಲೀಸ್ ಠಾಣೆಗೆ ಹೋಗಿಬಂದ ವಿಚಾರವನ್ನು ಹೇಳಿ, ರುದ್ರಮೂರ್ತಿಯನ್ನು ಮತ್ತಷ್ಟು ಭಯ–ಅನುಮಾನದ ಕೂಪಕ್ಕೆ ದೂಡುತ್ತಾನೆ.

ರಂಗಣ್ಣ:
“ಹೌದು, ಹೋಗಿದ್ದೆ. ನಿಮ್ಮ ವಿಚಾರ ಹೇಳಿದೆ. ದೊಡ್ಡದಾಗಿ ನಕ್ಕರು. ನಿಮ್ಮ ಪುಸ್ತಕ ಎಲ್ಲ ಅವರು ಓದಿದ್ದಾರೆ. ಅದರಲ್ಲಿ ಸರ್ಕಾರ, ಸಮಾಜಕ್ಕೆ ವಿರುದ್ಧವಾದದ್ದು ಏನೂ ಇಲ್ಲವಂತೆ. ಹಾಗಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. (ಮತ್ತೆ ದನಿಯೆತ್ತರಿಸಿ) ಎಲ್ಲ ನಿಮ್ಮ ಭ್ರಮೆ. ಪೊಲೀಸ್ ಭ್ರಮೆ. ಎಲ್ಲಾ ರೀತಿಯ ಕಟ್ಟು ನಿಮಗೆ ಕೋಳದ ಹಾಗೆ ಕಾಣುತ್ತವೆ. ಎಲ್ಲರ ವಿಶ್ವಾಸವೂ ಬಲೆಯ ಹಾಗೆ ಕಾಣುತ್ತದೆ. ತಂದೆ, ಸರ್ಕಾರ, ಸಂಸಾರ, ಸ್ನೇಹಿತರು — ಎಲ್ಲರೂ ದೊಡ್ಡ ಗೋಡೆಯಾಗುತ್ತಾರೆ. ಜೈಲಾಗುತ್ತಾರೆ. ದಯವಿಟ್ಟು ನೆನಪಿಟ್ಟುಕೊಳ್ಳಿ… ಸಂಪೂರ್ಣ ಸ್ವಾತಂತ್ರ್ಯ ಎಂದರೆ ಅರ್ಧ ಮರಣ…”
ಈ ಮಾತುಗಳ ಬಳಿಕ,
“ಅದಕ್ಕಿನ್ನೂ ಐದು ನಿಮಿಷ…” ಎಂದು ಮೂರ್ತಿ ಹೇಳುತ್ತಾನೆ.
ರಂಗಣ್ಣನ ಆಗಮನಕ್ಕೂ ಮೊದಲೇ ಮೂರ್ತಿ ವಿಷ ಕುಡಿದಿರುವುದು ಇಲ್ಲಿ ಗೊತ್ತಾಗುತ್ತದೆ.
ಗಾಬರಿಯಾಗುವ ರಂಗಣ್ಣ, “ಚಂದ್ರಶೇಖರ್, ಬನ್ನಿ…” ಎಂದು ಕೂಗುತ್ತಾನೆ. ಆದರೆ ಆ ಪಾತ್ರ ಮತ್ತೆ ರಂಗಕ್ಕೆ ಬಾರದು. ಇತ್ತ ಮೂರ್ತಿಯನ್ನು ಉಳಿಸಲಾಗದೆ, ರಂಗಣ್ಣ ವಿಲವಿಲ ಒದ್ದಾಡುತ್ತಾನೆ. ತನ್ನ ಕಣ್ಣೆದುರೇ ಸಾವು ಘಟಿಸುವುದನ್ನು ಕಂಡು, ರಂಗಣ್ಣನ ಮಾನಸಿಕ ಸ್ಥಿತಿಯೂ ಹದಗೆಡುತ್ತದೆ. ಕೊನೆಯಲ್ಲಿ “ಲೆಫ್ಟ್ ರೈಟ್… ಲೆಫ್ಟ್ ರೈಟ್…” ಎಂಬ ಸೈನಿಕ ಹೆಜ್ಜೆಯ ಶಬ್ದದೊಂದಿಗೆ ಲೈಟ್ ಆಫ್ ಆಗುತ್ತದೆ. ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ.
ತಮ್ಮ ನಾಟಕದ ಬಗ್ಗೆ ಲಂಕೇಶ್ ಹೀಗೆ ಹೇಳುತ್ತಾರೆ:
“ನಮ್ಮ ಉತ್ತಮ ನಾಟಕಕಾರರಲ್ಲಿ ಒಬ್ಬರಾದ ಸಂಸ ಅವರ ಬದುಕು ವಿಚಿತ್ರವಾದದ್ದು. ಅವರಿಗೆ ಇತ್ತೆಂದು ಹೇಳುವ ‘Persecution Complex’ (ಪರ್ಸಿಕ್ಯೂಷನ್ ಕಾಂಪ್ಲೆಕ್ಸ್)ನ ಒಂದು ರೀತಿಯ ಶೋಧನೆ ಈ ನಾಟಕದ್ದು. ಆದರೆ ವಸ್ತು ಪೂರ್ಣ ಪ್ರಮಾಣದ ನಾಟಕವನ್ನು ತುಂಬಿ ಹೊರಚೆಲ್ಲುವಷ್ಟು ದೊಡ್ಡದು. ಅವರ ಕೊನೆಯ ದಿನಗಳ ಬಗ್ಗೆ ಮಾತ್ರ ಯೋಚಿಸಲು, ಇದು ಸಂಸ ಅವರ ಮನಃಸ್ಥಿತಿ ಎಂಬುದಕ್ಕೆ ಮಾತ್ರ ನನ್ನ ಕುತೂಹಲವಲ್ಲ; ಎಲ್ಲರ ಆಳದ ನೋವು ಎಂಬ ಕಾರಣಕ್ಕೆ ಆಶ್ಚರ್ಯ…”
ರುದ್ರಮೂರ್ತಿ ಪಾತ್ರದಲ್ಲಿ ಪ್ರದೀಪ್ ಜಿ.ಟಿ. ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ನಾಟಕದ ನಿರ್ದೇಶನವೂ ಇವರದೇ. ಯದೀಶ್, ರಂಗಣ್ಣನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಟ ಅಣ್ಣಾಜಿಗೌಡರು, ಚಂದ್ರಶೇಖರ್ ಪಾತ್ರದಲ್ಲಿ, ಈ ಎರಡು ಪಾತ್ರಗಳ ಪರಾಕಾಷ್ಠೆಯ ನಡುವೆ ಸ್ವಲ್ಪ ಮಂಕಾಗುತ್ತಾರೆ.
ಗುರು ತಲಕಾಡು ಅವರ ಬೆಳಕು ವಿನ್ಯಾಸ ಸಮರ್ಪಕವಾಗಿದೆ. ಬಲೆಯ ರಂಗಸಜ್ಜಿಕೆ, ಹಿನ್ನೆಲೆಯ ಜೇಡರಬಲೆಯ ಮೂಲಕ, ನಾಟಕದ ಕೇಂದ್ರ ಪಾತ್ರ ಅದರಲ್ಲಿ ಸಿಲುಕಿದಂತೆ; ಅದನ್ನು ಹಿಡಿಯಲು ಬಂದ ಪತಂಗ ತಾನೇ ಸಿಕ್ಕಿ ಒದ್ದಾಡಿದಂತೆ ಸಾಂಕೇತಿಕವಾಗಿ ಮೂಡಿಬಂದಿದೆ.

– ಗೊರೂರು ಅನಂತರಾಜು,
ಹಾಸನ
