ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಬಗ್ಗುಬಡಿದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದೆ. ರೋಚಕ ಪಂದ್ಯದಲ್ಲಿ ಕಿವೀಸ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಆ ಮೂಲಕ 25 ವರ್ಷಗಳ ಹಿಂದಿನ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಕಿವೀಸ್ ಬಳಗ ಮೊದಲು ಬ್ಯಾಟಿಂಗ್ ಮಾಡಿತು. ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತು. ಈ ಗುರಿಯನ್ನು ಭಾರತ ಇನ್ನು 6 ಎಸೆತಗಳು ಬಾಕಿ ಇರುವಂತೆ 254 ರನ್ ಬಾರಿ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಆರಂಭಿಸಿರುವ ಕಿವೀಸ್ ಪಡೆ ಭರ್ಜರಿ ಆರಂಭ ಪಡೆಯಿತು. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ (37 ರನ್) ಮತ್ತು ವಿಲ್ ಯಂಗ್ (15 ರನ್) ಜೋಡಿ ಮೊದಲ ವಿಕೆಟ್ ಗೆ 57 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಆದರೆ ಈ ಹಂತದಲ್ಲಿ ದಾಳಿಗಿಳಿದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ವಿಲ್ ಯಂಗ್ ರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ಮುನ್ನಡೆ ತಂದಿತ್ತರು. ಬಳಿಕ 37 ರನ್ ಗಳಿಸಿ ಅಪಾಯಕಾರಿಯಾಗುತ್ತಿದ್ದ ರಚಿನ್ ರವೀಂದ್ರ ಕುಲದೀಪ್ ಯಾದವ್ ರ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಬಳಿಕ ಕೇನ್ ವಿಲಿಯಮ್ಸನ್ ಕೂಡ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕ್ರೀಸ್ ಗೆ ಬಂದ ಡರಿಲ್ ಮೆಚೆಲ್ ಕಿವೀಸ್ ಬ್ಯಾಟಿಂಗ್ ಗೆ ಬಲ ತುಂಬಿದರು. 101 ಎಸೆತಗಳನ್ನು ಎದುರಿಸಿದ ಮಿಚೆಲ್ 3 ಬೌಂಡರಿ ಸಹಿತ 63 ರನ್ ಕಲೆಹಾಕಿದರು. ಅವರಿಗೆ ಟಾಮ್ ಲಾಥಮ್ (14 ರನ್) ಮತ್ತು ಗ್ಲೆನ್ ಫಿಲಿಪ್ಸ್ (34 ರನ್) ಉತ್ತಮ ಸಾಥ್ ನೀಡಿದರು. ಬಳಿಕ ಕ್ರೀಸ್ ಗೆ ಬಂದ ಬ್ರೇಸ್ ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕಿವೀಸ್ 250ರ ಗಡಿ ದಾಟುವಂತೆ ನೋಡಿಕೊಂಡರು. ಬ್ರೇಸ್ ವೆಲ್ ಕೇವಲ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ ಅಜೇಯ 53 ರನ್ ಗಳಿಸಿದರು.
ಅಂತಿಮವಾಗಿ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251ರನ್ ಕಲೆಹಾಕಿ ಭಾರತಕ್ಕೆ ಗೆಲಲ್ಲು 252ರನ್ ಗಳ ಸವಾಲಿನ ಗುರಿ ನೀಡಿತು. ಇನ್ನು ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಶಮಿ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

