ಚನ್ನರಾಯಪಟ್ಟಣ, ಮಾ.30: ಪಟ್ಟಣದ ನವೋದಯ ವಿದ್ಯಾಸಂಸ್ಥೆಯ ಹಿಂಭಾಗದಲ್ಲಿ ನವೀಕರಣಗೊಳಿಸಿರುವ ಎ-1 ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಇನ್ಸ್ಟಿಟ್ಯೂಷನ್ ಮತ್ತು ಬೇಸಿಗೆ ಕ್ರಿಕೆಟ್ ಶಿಬಿರಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಕ್ರೀಡಾ ಪ್ರೋತ್ಸಾಹದ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಉತ್ತಮ ತರಬೇತಿಯೊಂದಿಗೆ ಕ್ರಿಕೆಟ್ ಜಗತ್ತಿಗೆ ಪರಿಚಯಿಸುವುದೇ ಎ-1 ಅಕಾಡೆಮಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ತಾಲ್ಲೂಕಿನ ಕ್ರೀಡಾಸಕ್ತರು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ಅಕಾಡೆಮಿಯ ಕ್ರಿಕೆಟ್ ತರಬೇತಿದಾರರು ಮಾತನಾಡಿ, ಬೇಸಿಗೆಯ ರಜೆ ಹಿನ್ನೆಲೆ 2 ತಿಂಗಳ ಕಾಲ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಪ್ರತಿದಿನ ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 6.30ರವರೆಗೆ ಕ್ರಿಕೆಟ್ ತರಬೇತಿ ನೀಡಲಾಗುತ್ತದೆ ಎಂದರು.

ಇದೇ ವೇಳೆ, ಮೈಸೂರು ಹಾಗೂ ಬೆಂಗಳೂರಿನ ನುರಿತ ಮತ್ತು ಅನುಭವಿ ತರಬೇತುದಾರರಿಂದ ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 2 ತಿಂಗಳ ಶಿಬಿರಕ್ಕೆ ಒಟ್ಟು ₹6,000 ಸೇವಾ ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ಬೇಸಿಗೆ ಶಿಬಿರದ ಬಳಿಕವೂ ಅಕಾಡೆಮಿಯಲ್ಲಿ ನಿಯಮಿತವಾಗಿ ತರಬೇತಿ ತರಗತಿಗಳು ಮುಂದುವರಿಯಲಿದ್ದು, ಸಮಯ ಹಾಗೂ ನಿಯಮಾವಳಿಗಳ ಅನುಸಾರ ಪ್ರತಿದಿನ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಟಿ.ಎ.ಪಿ.ಸಿ.ಎಂ.ಎಸ್ನ ಮಾಜಿ ಅಧ್ಯಕ್ಷ ಅನಿಲ್ ಮರಗೂರು, ಎ-1 ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯಸ್ಥ ರಂಗನಾಥ್, ಮಾಜಿ ಪುರಸಭಾ ಸದಸ್ಯ ಸಿ.ವೈ. ಸತ್ಯನಾರಾಯಣ, ರವೀಶ್, ಸಬ್ ರಿಜಿಸ್ಟರ್ ದೇವರಾಜ್, ಆರೋಗ್ಯ ನಿರೀಕ್ಷಕ ರಾಜು, ನವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆಂಬಾಳು ಶರತ್ ಸೇರಿದಂತೆ ಅನೇಕರು ಹಾಜರಿದ್ದರು.
– ಮಂಜುನಾಥ್ ಐ.ಕೆ
