
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಪರಿಸರದ ಸೂಕ್ಷ್ಮಗಳು ಎಲ್ಲಿಯೂ ಯಾರಿಗೂ ಅರ್ಥವಾಗಿಲ್ಲವೇನೋ…!!!
ಅರಣ್ಯವಾಸಿಗಳನ್ನು ಯಾವುದಾದರೂ ನೆಪದಲ್ಲಿ ಒಕ್ಕಲೆಬ್ಬಿಸಿ ಉದ್ದಿಮೆಗಳಿಗೆ ಕಾರ್ಮಿಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳೊಂದಿಗೆ ಕೈಜೋಡಿಸುತ್ತಿರುವ ಆಡಳಿತ ವ್ಯವಸ್ಥೆ ದಿಗ್ಭ್ರಮೆ ಮೂಡಿಸುತ್ತದೆ. ಸ್ಥಳೀಯ ಅಮಾಯಕ ಜನರಿಗೆ ಪರಿಹಾರ ಹಣದ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸಲು ಸರ್ಕಾರದ ಬಳಿ ಸಾಕಷ್ಟು ದಾರಿಗಳಿವೆ.
ಕೃಷಿ ಮಾಡುವುದು ನಷ್ಟದ ಬಾಬತ್ತೆಂದು ರೈತರಿಗೆ ಅನ್ನಿಸುವಂತೆ ಪರಿಸ್ಥಿತಿ ಸೃಷ್ಟಿಮಾಡಿ, ಪರಿಹಾರ ರೂಪದ ಹಣದಲ್ಲಾದರೂ ಜೀವನ ಮಾಡುವ ಎಂದು ನಗರಕ್ಕೆ ವಲಸೆ ಹೋಗುವಂತೆ ಮಾಡುವುದು, ನಗರದಲ್ಲಿ ಇರುವ ಅಧಿಕಾರಸ್ತರ ಉದ್ದಿಮೆಗಳಿಗೆ ಕೂಲಿ-ಕಾರ್ಮಿಕರನ್ನು ಪೂರೈಕೆ ಮಾಡುವುದು ಇದರ ಪರೋಕ್ಷ ಹುನ್ನಾರ.
ಇಲ್ಲಿ ರೈತರು ಮೂರುಕಾಸಿಗೆ ಮಾರಿದ ಭೂಮಿಯನ್ನು ತಾವೇ ಖರೀದಿಸಿ, ರೈತರನ್ನೇ ಕೂಲಿಗಿಟ್ಟುಕೊಳ್ಳುವ ವ್ಯವಸ್ಥಿತ ಲೂಟಿಯ ಭಾಗವೇ ಈ ಎಲ್ಲಾ ವಿದ್ಯಮಾನಗಳು. ಸರ್ಕಾರೀ ವರದಿಗಳು, ಯೋಜನೆಗಳು ಅಂಕಿ ಅಂಶಗಳ ಬದನೇಕಾಯಿ ಮಾತ್ರ ಆಗಿವೆ. ಪರಿಸರದ ಸೂಕ್ಷ್ಮಗಳು ಎಲ್ಲಿಯೂ ಯಾರಿಗೂ ಅರ್ಥವಾಗಿಲ್ಲವೇನೋ ಅನಿಸುತ್ತದೆ.
ನೀತಿ ನಿರೂಪಕರುಗಳಿಗೇ ಕಾಡಿನ ವಾಸ್ತವದ ಚಿತ್ರಣವಿಲ್ಲದಿದ್ದರೆ, ಇವರು ಯಾವ ನೆಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ? ಕಾಡಿನಲ್ಲಿ ಬದುಕೋದು ಅಥವಾ ಹೊರಗೆ ಬರೋ ಎಲ್ಲಾ ವಿವೇಚನೆ ಅಲ್ಲಿನ ಮೂಲನಿವಾಸಿಗಳದ್ದೇ ಆಗಿರಬೇಕು. ಬಲವಂತವಾಗಿ ಒಕ್ಕಲೆಬ್ಬಿಸುವುದು ಅಥವಾ ಮೂಲಸೌಕರ್ಯಗಳಿಂದ ವಂಚಿತರನ್ನಾಗಿ ಮಾಡಲು ನಾವ್ಯಾರು?
ಅಧಿಕಾರಸ್ಥರು, ಭೂಮಾಲೀಕರು, ಬಂಡವಾಳಶಾಹಿಗಳು ನಮ್ಮ ರಾಜಕಾರಣ ವ್ಯವಸ್ಥೆಯನ್ನು ಬಳಸಿಕೊಂಡು ಹೇಗೆ ಡೆಮಾಕ್ರಟಿಕ್ ವಾತಾವರಣವನ್ನು ಫ್ಯೂಡಲಿಸ್ಟಿಕ್ ಆಗಿ ಪರಿವರ್ತಿಸುತಿದ್ದಾರೆ ಎಂಬುದನ್ನು ಸಾಕೇತ್ ರಾಜನ್ ತನ್ನ “ಬಿಟ್ಟರ್ ಕಾಫಿ’’ಯಲ್ಲಿ ಪ್ರಸ್ತಾಪ ಮಾಡಿದ್ದನ್ನು ನಾನು ಉಲ್ಲೇಖಿಸಿದಾಗ `ಆ ವಿಷಯಗಳು ಎಗ್ಸಾಗರೇಷನ್ ಕಣಯ್ಯಾ’ ಎಂದಿದ್ದರು ತೇಜಸ್ವಿ.
ನಕ್ಸಲರ ಅತಿರೇಕಗಳಿಗೆ ಆಘಾತಗೊಂಡು, ಪ್ರಜಾಪ್ರಭುತ್ವದ ಗೊಂದಲಗಳಿಗೆ ವಿಚಲಿತಗೊಂಡು, ಬಹುಸಂಖ್ಯಾತರ ಟೀಕೆಗೆ ಹಾಗೂ ಅಸಮಾಧಾನಕ್ಕೆ ಕಾರಣವಾಗಬೇಕಾದೀತೆಂದು ಮೌನವಾಗಿದ್ದರೋ ಎಂಬ ಜಿಜ್ಞಾಸೆ ಮೂಡುತ್ತದೆ.
ಹೃದಯಹೀನ ನಕ್ಸಲರ ಆಕ್ರೋಶಕ್ಕೆ ಗುರಿಯಾಗಿ ರಾಜಕಾರಣಿಗಳು, ಬಂಡವಾಳಿಗರು, ಜಮೀನ್ದಾರರು ಬರ್ಬರವಾಗಿ ಬಲಿಯಾಗುತ್ತಾರೆ ಎಂದರೆ, ವ್ಯವಸ್ಥೆಯಿಂದ ಯಾವ ಮಟ್ಟಿಗಿನ ಅಸಡ್ಡೆ, ತೊಂದರೆ, ಶೋಷಣೆಗೆ ಒಳಪಟ್ಟು ಅನುಭವಿಸಿ ಜಿಗುಪ್ಸೆಯಿಂದ ಅ ಆರೋಪಿಗಳು ಸಿಡಿದೆದ್ದಿರಬಹುದು.
ಅಮೇರಿಕಾ- ಇಂಗ್ಲೆಂಡ್ನ ಸಾಮ್ರಾಜ್ಯಶಾಹಿ ದೋರಣೆಯನ್ನು, ವರ್ಣಭೇಧನೀತಿಯನ್ನು ಗಂಟಲು ಹರಿಯುವಂತೆ ಬೊಬ್ಬಿರಿದು ಖಂಡಿಸುವ ನಮ್ಮ ನಡುವಿನ ನಾಜೂಕಪ್ಪಗಳು ನಮ್ಮೊಳಗೇ ಇರುವ ಫ್ಯೂಡೆಲಿಸ್ಟ್ ಗಳನ್ನು ಮತ್ತು ಜಾತಿವಾದಿಗಳನ್ನು ಯಾವ ಆಧಾರದಲ್ಲಿ ಸಮರ್ಥಿಸುತ್ತಾರೆ.
ತಮ್ಮವರ, ತಮ್ಮ ಜಾತಿ ಜನಾಂಗದ ಅನಾಚಾರಗಳನ್ನು ಸಹಿಸುತ್ತಾ ಅದರಿಂದ ತಾವೂ ಬೆನಿಫಿಟ್ ಪಡೆಯುತ್ತಾ ತಮ್ಮಿಂದ ಸರಿಪಡಿಸಲಾಗದ, ತಮ್ಮ ಯೋಗ್ಯತೆಯನ್ನು ಮೀರಿದ ಸಮಸ್ಯೆಯನ್ನು ಜನರ ಮುಂದಿರಿಸುತ್ತಾ ಸ್ವಯಂಘೋಷಿತ ಬುದ್ಧಿಜೀವಿಗಳಂತೆ ಪೋಸು ಕೊಡುತ್ತಾ ಅತ್ತ ಗಂಡಸೂ ಅಲ್ಲದ ಇತ್ತ ಹೆಂಗಸೂ ಅಲ್ಲದ ಸಮಯಸಾಧಕ ಜೀವನವನ್ನು ಕಳೆಯುತಿದ್ದಾರೆ. ಯಾವುದೇ ಘಟನೆ ನಡೆದರೆ ಅದರಲ್ಲಿ ಯಾರು ಇನ್ವಾಲ್ವ್ ಆಗಿದ್ದಾರೆ ಎಂದು ತಿಳಿದುಕೊಂಡು ಪರಿಸ್ಥಿತಿಗೆ ತಕ್ಕಂತೆ ಇವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸೋಗಲಾಡಿಗಳನ್ನು ಕಂಡರೆ ಎತ್ತಲಿಂದ ನಗಬೇಕೆಂದು ತಿಳಿಯದೇ ಗೊಂದಲವಾಗುತ್ತದೆ.
ಸಂದರ್ಭದ ಲಾಭ ಪಡೆಯುವಲ್ಲಿ, ಇತರರ ಅಮಾಯಕತೆಯ ಮೌಢ್ಯದಿಂದ ಮೈಲೇಜ್ ಪಡೆಯಲು ಸದಾ ಕಾಯುತ್ತಿರುವವರ ಇಬ್ಬಂಧಿತನ ಮರುಕವನ್ನುಂಟುಮಾಡುತ್ತದೆ. ನೈತಿಕತೆಯ ಹಿನ್ನೆಲೆಯಿಲ್ಲದೇ ಗುಂಪು ಯಾವ ಕಡೆಗೆ ಜಾಸ್ತಿಯಿದೆ, ಎತ್ತ ಗುರುತಿಸಿಕೊಂಡರೆ ತನಗೆ, ತನ್ನ ಕಡೆಯವರಿಗೆ ಲಾಭ ಎಂದು ಯೋಜಿಸುವ ಮಸಲ್-ಮನಿ ಲೆಕ್ಕಾಚಾರದವರಿಂದ ಈ ಸಮಾಜ ಬದಲಾಗುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನ.
ರಾಜಕೀಯವಾಗಿ ಜಾಗೃತರಾಗಿರದ ಮೂಲಸ್ಥರದ ಜನತೆ, ಅವರ ಅಮಾಯಕತೆ ಮತ್ತು ನಿಷ್ಕ್ರೀಯತೆಯನ್ನು ಬಂಡವಾಳ ಮಾಡಿಕೊಂಡಿರುವ ವೃತ್ತಿಪರ ರಾಜಕಾರಣಿಗಳು, ಆ ರಾಜಕಾರಣಿಗಳ ಮುಖಾಂತರ ತಮ್ಮ ಗುಪ್ತ ಅಜೆಂಡಾವನ್ನು ಸರ್ಕಾರದ ನೀತಿ-ನಿಯಮವನ್ನಾಗಿಸುವ ಬಂಡವಾಳಶಾಹಿಗಳು ಮತ್ತು ಭೂಮಾಲೀಕರುಗಳು, ಯಾರೇ ಆಡಳಿತ ನಡೆಸಿದರೂ ಆರಕ್ಕೇರದೇ, ಮೂರಕ್ಕಿಳಿಯದೇ ಅತಂತ್ರ ಸ್ಥಿತಿಯಲ್ಲಿರುವ ಅಗಾಧ ಜನಸಮೂಹವನ್ನು ಕಂಡ ತೇಜಸ್ವಿ` ಜನರಿಗಾಗಿಯೇ ಆಡಳಿತ ನಡೆಸುವವರು ಅದೇ ಜನರ ಆಕ್ರಂದನಕ್ಕೆ ಕಾರಣವಾಗಿ ಆಕ್ರೋಶಕ್ಕೆ ತುತ್ತಾಗುತ್ತಾರೆ ಎಂದರೆ ನಮ್ಮ ರಾಜಕಾರಣ ವ್ಯವಸ್ಥೆಯಲ್ಲಿ ಗುರುತರವಾದ ಬದಲಾವಣೆ ಅಗತ್ಯವೆಂದೇ ಅರ್ಥ. ಈ ದೇಶ ದೇವರ ದಯೆಯಿಂದ ನಡೀತಿದೆ ಕಣಯ್ಯಾ, ಯಾರು ಅಧಿಕಾರಕ್ಕೆ ಬಂದರೂ ನಡೆಯೋ ದೇಶ ಇದು ‘ಎಂದು ಅಭಿಪ್ರಾಯಿಸಿದ್ದರು.
ಚೀನಾದ ತಿಯಾನ್ಮನ್ ಚೌಕದಲ್ಲಿ ನಡೆದ ವಿಧ್ಯಾರ್ಥಿ ಹೋರಾಟವನ್ನು ಉದಾಹರಿಸಿದ್ದ ತೇಜಸ್ವಿ, ಪ್ರತೀ ದೇಶದಲ್ಲೂ ಈ ತುಮುಲ ಒಂದಲ್ಲಾ ಒಂದು ಹಂತದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅದೊಂದು ಅಗಾಧ ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ತಮ್ಮ ಕಿರಗೂರಿನ ಗೈಯ್ಯಾಳಿಗಳು ಕಥೆಯಲ್ಲಿ ಸೂಚ್ಯವಾಗಿ ಪ್ರಕಟಗೊಳ್ಳುವಂತೆ ಮಾಡುತ್ತಾರೆ. ಅನೇಕ ಬಗೆಯ ಸಂಘಟನೆಗಳ ಹತ್ತಾರ ವರ್ಷಗಳ ಹೋರಾಟದಿಂದ ಸಾಧ್ಯವಾಗದೇ ಇದ್ದದ್ದು ಕಿರಗೂರಿನ ಗೈಯ್ಯಾಳಿಗಳ ಒಂದೇ ಒಂದು ಸಹಜವಾದ ಸ್ಪೋಟದಿಂದ ಸಾಧ್ಯವಾದದ್ದು ಸ್ತ್ರೀ ಸಾಧ್ಯತೆಯ ನಿದರ್ಶನ.
ಅಗೋಚರವಾದದ್ದೇನೋ ತನ್ನ ಸುತ್ತಲಿನ ವ್ಯವಸ್ಥೆ ತನ್ನ ಬಗ್ಗೆ ತಳೆಯುವ ಧೋರಣೆ, ವ್ಯಕ್ತಪಡಿಸುವ ಪ್ರತಿಕ್ರಿಯೆಗೆ ಸೂಕ್ತ ಉತ್ತರ ನೀಡಲು ಸಂದರ್ಭಕ್ಕೆ ಕಾಯುತ್ತಾ ತವಕಿಸುತ್ತಿರುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ತಿರುಗಿಬಿದ್ದು ತನ್ನ ಅಂತಶ್ಶಕ್ತಿಯ ವಿರಾಟ್ರೂಪವನ್ನು ಪ್ರಕಟಿಸುವುದನ್ನು ಎಲ್ಲಾ ಜೀವಿಗಳಲ್ಲೂ ನಾವು ಕಾಣುತ್ತೇವೆ.
“ ರಾಜಕಾರಣಿಗಳು ನಮ್ಮ ಭರವಸೆಯೆಂಬ ಬಾಲನ್ನು ತಮ್ಮ ಅವಿವೇಕದ ಬ್ಯಾಟಿನಿಂದ ಹೊಡೆಯುತ್ತಾ ಕ್ರಿಕೆಟ್ ಆಡುವುದನ್ನು ಮೂರ್ಖರಂತೆ ನೋಡುತ್ತಾ ಕೂರುವುದನ್ನು ಬಿಡಬೇಕು. ಜನರೇ ಆಯ್ಕೆ ಮಾಡಿದ ಸರ್ಕಾರದ ವಿರುದ್ಧ ಜನರೇ ಪ್ರತಿಭಟನೆ ಮಾಡೋದಿದೆ ನೋಡಿ ಅದೊಂದು ದುರಂತ. ಸಮಸ್ಯೆಯ ಪರಿಹಾರಕ್ಕೆ ಯಾರೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ. ಸಮಸ್ಯೆಗಳನ್ನು ಜೀವಂತವಾಗಿಟ್ಟುಕೊಂಡು ತಾವು ಲೈಮ್ಲೈಟ್ನಲ್ಲಿರಲು ಹುನ್ನಾರ, ಮತ್ತದೇ ಬಂಡವಾಳ.
ಪ್ರತಿಯೊಂದು ಕ್ರಾಂತಿಯೂ ಇನ್ನೊಂದು ರೀತಿಯ ಶೋಷಣೆಗೆ ಕಾರಣವಾಗುತ್ತಾ ಹೋಯಿತು. ಕಮ್ಯೂನಿಸ್ಟರು ಹೇಳುವಂತೆ ಬಡತನ, ಅನ್ಯಾಯ, ರೋಗರುಜಿನ ಹೆಚ್ಚಾದಂತೆ ಕ್ರಾಂತಿ ಸಂಭವಿಸುತ್ತದೆ, ಹಾಗೆಯೇ ಮೂಲಭೂತವಾದಿಗಳು ಹೇಳುವಂತೆ ಪಾಪದಕೊಡ ತುಂಬಿ ಯುಗಪುರುಷ ಅವತಾರವೆತ್ತುತ್ತಾನೆ. ಹೊರನೋಟಕ್ಕೆ ಇವೆರಡೂ ಬೇರೆ-ಬೇರೆ. ಆದರೆ ಚಿಂತನಾಕ್ರಮ ಎಲ್ಲೋ ಒಂದು ಕಡೆ ಒಂದಕ್ಕೊಂದು ಪೂರಕವಾಗಿರುವ ಹಾಗೆ ಕಾಣುತ್ತೆ ಎಂದು’’ ನಾಸ್ತಿಕ ಹಾಗೂ ಆಸ್ತಿಕನ ಮನೋಭೂಮಿಕೆಯನ್ನು ವಿಮರ್ಶಿಸುತ್ತಾರೆ ತೇಜಸ್ವಿ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ