ಹಾಸನ, ಏ.2: ಜಿಲ್ಲೆಯ ಸರ್ಕಾರಿ ಹಾಸ್ಟೆಲ್ಗಳು ವಿದ್ಯಾರ್ಥಿಗಳ ವಸತಿಗೃಹಗಳಾಗಬೇಕಾದರೆ, ಕೆಲವೆಡೆ ಅವು ಅಕ್ರಮ ಚಟುವಟಿಕೆಗಳಿಗೆ ಆಶ್ರಯವಾಗುತ್ತಿವೆಯೇ ಎಂಬ ಆತಂಕಕಾರಿ ಪ್ರಶ್ನೆ ಉದ್ಭವಿಸುವಂತಹ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ವರುಣ್ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಒಬ್ಬ ಆರೋಪಿ, ಸರ್ಕಾರಿ SC/ST ಹಾಸ್ಟೆಲ್ನಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮಾ.12ರಂದು ನಡೆದ ವರುಣ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಎ8 ಆರೋಪಿ ಪೃಥ್ವಿಕ್, ಕೊಲೆ ಕೃತ್ಯದ ಬಳಿಕ ಹಾಸನ ನಗರದ ಆಕಾಶವಾಣಿ ಹಿಂಭಾಗದಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಹಾಸ್ಟೆಲ್ನಲ್ಲೇ ಆಯುಧ, ರಕ್ತಸಿಕ್ತ ಬಟ್ಟೆ ಪತ್ತೆಯ ಶಂಕೆ
ಬೆಚ್ಚಿಬೀಳಿಸುವ ಸಂಗತಿಯೆಂದರೆ, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಆಯುಧಗಳು ಹಾಗೂ ರಕ್ತಸಿಕ್ತ ಬಟ್ಟೆಗಳನ್ನು ಹಾಸ್ಟೆಲ್ನಲ್ಲೇ ಇಟ್ಟುಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಹಾಸನದ ಬಡಾವಣೆ ಮತ್ತು ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಹಣದ ವಿಚಾರಕ್ಕೆ ಆರಂಭವಾದ ವೈಷಮ್ಯ
ಮೂಲಗಳ ಪ್ರಕಾರ, ಶಶಾಂಕ್ ಮತ್ತು ವರುಣ್ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆ ವರುಣ್ನನ್ನು ಅಪಹರಿಸಿ ಬಳಿಕ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮಾ.11ರಂದು ಅರಸಿಕೆರೆ ತಾಲೂಕಿನ ಗಂಡಸಿ ಹೋಬಳಿಯ ಚಂಡೇನಹಳ್ಳಿ ಗ್ರಾಮದಿಂದ ವರುಣ್ನನ್ನು ಅಪಹರಿಸಿ, ನಂತರ ಮಾ.12ರಂದು ಹಾಸನದ ಗುಂಡೇಗೌಡನ ಕೊಪ್ಪಲು ಪ್ರದೇಶದಲ್ಲಿ ಹತ್ಯೆ ಮಾಡಿ ಸುಟ್ಟುಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಶಶಾಂಕ್ ಸೇರಿ ಒಟ್ಟು ಎಂಟು ಯುವಕರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಆರೋಪಿಗಳ ವಯಸ್ಸು ಸುಮಾರು 20 ವರ್ಷ ಆಸುಪಾಸಿನದು ಎಂದು ತಿಳಿದುಬಂದಿದೆ.
ಕೊಲೆ ಬಳಿಕ ತಲೆಮರೆಸಿಕೊಂಡ ಆರೋಪಿಗಳು
ಕೊಲೆ ಪ್ರಕರಣದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದ ವೇಳೆ, ಅವರಲ್ಲಿ ಒಬ್ಬನಾದ ಪೃಥ್ವಿಕ್ ಸರ್ಕಾರಿ ಹಾಸ್ಟೆಲ್ನಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಹಾಸ್ಟೆಲ್ನಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಹಾಸ್ಟೆಲ್ಗಳ ಭದ್ರತೆ ಕುರಿತು ಗಂಭೀರ ಪ್ರಶ್ನೆ
ವಿದ್ಯಾರ್ಥಿಗಳ ವಸತಿಗಾಗಿ ನಿರ್ಮಿಸಲಾದ ಸರ್ಕಾರಿ ಹಾಸ್ಟೆಲ್ನಲ್ಲಿ ಹೊರಗಿನ ವ್ಯಕ್ತಿಯೊಬ್ಬ ಆಶ್ರಯ ಪಡೆದಿದ್ದಾನೆ ಎನ್ನುವ ವಿಚಾರ, ಹಾಸ್ಟೆಲ್ಗಳ ಭದ್ರತೆ ಹಾಗೂ ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
- ಹಾಸ್ಟೆಲ್ಗೆ ಹೊರಗಿನವರು ಹೇಗೆ ಪ್ರವೇಶಿಸಿದರು?
- ವಾರ್ಡನ್ ಮತ್ತು ಸಿಬ್ಬಂದಿಗೆ ಮಾಹಿತಿ ಇರಲಿಲ್ಲವೇ?
- ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ?
- ಹಾಸ್ಟೆಲ್ಗಳಲ್ಲಿ ಇತರೆ ಅಕ್ರಮ ಚಟುವಟಿಕೆಗಳೂ ನಡೆಯುತ್ತಿವೆಯೇ?
ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಸಮಗ್ರ ತನಿಖೆಗೆ ಸಾರ್ವಜನಿಕರ ಒತ್ತಾಯ
ಒಂದು ಕೊಲೆ ಪ್ರಕರಣದ ಆರೋಪಿ ಸರ್ಕಾರಿ ಹಾಸ್ಟೆಲ್ನಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಆರೋಪ ಹೊರಬಿದ್ದಿರುವ ಹಿನ್ನೆಲೆಯಲ್ಲಿ, ಹಾಸ್ಟೆಲ್ ನಿರ್ವಹಣೆ, ಭದ್ರತಾ ವ್ಯವಸ್ಥೆ, ಹಾಗೂ ಸಿಬ್ಬಂದಿಯ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
