ರಾಮನಾಥಪುರ-; ಗ್ರಾಮೀಣ ಮಕ್ಕಳಿಗೆ ಕಾನ್ವೆಂಟ್ ಮಟ್ಟದ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿಯೇ ಒದಗಿಸುವ ಉದ್ದೇಶದಿಂದ ಪ್ರಾರಂಭವಾದ “ಮಕ್ಕಳ ಮನೆ (LKG/UKG)” ಯೋಜನೆ ಇಂದು ತಾಲೂಕಿನಾದ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪೋಷಕರಿಂದ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ.

ಪ್ರಸ್ತುತ ಈ ಯೋಜನೆ ಹನ್ಯಾಳು ಸೇರಿದಂತೆ 18 ಗ್ರಾಮ ಪಂಚಾಯತ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 450ಕ್ಕೂ ಹೆಚ್ಚು ಮಕ್ಕಳು LKG ಮತ್ತು UKG ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳಿಗೆ ಆಟದ ಮೂಲಕ ಕಲಿಕೆ, ಆಂಗ್ಲ ಭಾಷೆಯ ಪ್ರಾಥಮಿಕ ಪರಿಚಯ, ಕಥೆ ಮತ್ತು ಹಾಡುಗಳ ಮೂಲಕ ಬೋಧನೆ ಮುಂತಾದ ನವೀನ ವಿಧಾನಗಳನ್ನು ಅನುಸರಿಸಲಾಗುತ್ತಿದೆ.
ಈ ಯೋಜನೆಯ ವಿಶೇಷತೆ ಎಂದರೆ, ಖಾಸಗಿ ಕಾನ್ವೆಂಟ್ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳನ್ನು ಸಹ ಪೋಷಕರು ಸರ್ಕಾರಿ ಮಕ್ಕಳ ಮನೆ ಶಾಲೆಗಳಿಗೆ ದಾಖಲಾತಿ ಮಾಡಿಸುತ್ತಿರುವುದು. ವರ್ಷಾಂತ್ಯದಲ್ಲಿಯೂ ದಾಖಲಾತಿ ಹೆಚ್ಚಳವಾಗುತ್ತಿರುವುದು ಯೋಜನೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ.
“ಮಕ್ಕಳ ಮನೆ” ಯೋಜನೆಯು ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಪುನಃಸ್ಥಾಪಿಸುವುದರ ಜೊತೆಗೆ, ಗ್ರಾಮೀಣ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇಂತಹ ಮಾದರಿ ಯೋಜನೆಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಯೋಜನೆ ಅರಕಲಗೂಡು ತಾಲೂಕಿನ 18 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 450 ಮಕ್ಕಳಿಗೆ ಕಾನ್ವೆಂಟ್ ಶಿಕ್ಷಣ ನೀಡಲು ಈ ಕೆಳಕಂಡ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದೆ.
ಹನ್ಯಾಳು, ಲಕ್ಕೂರು, ಮಧುರನಹಳ್ಳಿ, ಕೇರಳಾಪುರ, ರಾಮನಾಥಪುರ, ಹಂಡ್ರಂಗಿ, ಹುಲಿಕಲ್, ಮಲ್ಲಿಪಟ್ಟಣ, ಕೋಟೆ ಅರಕಲಗೂಡು, ಬೈಚನಹಳ್ಳಿ, ಸಂತೆಮರೂರು, ಒಡನಹಳ್ಳಿ, ಬಿದರಕ್ಕ, ಶ್ರವಣೂರು, ಕಟ್ಟೇಪುರ, ದೊಡ್ಡಬೆಮ್ಮತ್ತಿ, ಕಾಳೇನಹಳ್ಳಿ, ಹೊನ್ನೇನಹಳ್ಳಿ.
ವರದಿ – ಎಂ.ಎ. ಕುಮಾರಸ್ವಾಮಿ, ರಾಮನಾಥಪುರ.
