ಹರಪ್ಪನಹಳ್ಳಿ : ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಕೊಡುಗೆ ಅನನ್ಯ ಮತ್ತು ಅಮೋಘ. ಅಕ್ಕಮಹಾದೇವಿಯಿಂದ ಹಿಡಿದು ಇಂದಿನ ತಲೆಮಾರಿನವರೆಗೂ ಕಾವ್ಯ, ಕಾದಂಬರಿ, ಕಥೆ, ಮತ್ತು ವಿಮರ್ಶೆ ಕ್ಷೇತ್ರಗಳಲ್ಲಿ ಮಹಿಳಾ ಸಾಹಿತಿಗಳು ಹೊಸ ಸಂವೇದನೆಗಳನ್ನು ಪರಿಚಯಿಸಿದ್ದಾರೆ ಎಂದು ಹರಪ್ಪನಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು.
ಹರಪ್ಪನಹಳ್ಳಿ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯ ಮಹಿಳಾ ಘಟಕ ರಚನೆ. ಕವಿಗೋಷ್ಟಿ ಹಾಗೂ ಕರೋಕೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ಶೋಷಣೆಯ ವಿರುದ್ಧ ಸಿಡಿದೇಳಲು ಸಂಘಟಿತರಾಗಿ ಹೋರಾಡುವುದು ಅನಿವಾರ್ಯವಾಗಿದೆ. ಭಾರತದ ಸ್ವಾತಂತ್ರ್ಯದ ನಂತರ ಎಲ್ಲರಿಗೂ ವಿದ್ಯೆಯ ಅವಕಾಶ ದೊರೆಯಿತು. ಹಾಗಾಗಿ ಮಹಿಳೆಯರ ಸಾಹಿತ್ಯಕ್ಕೆ ಅವಕಾಶ ಸಿಕ್ಕಿತು. ಅಲ್ಲಿಂದ ಈಚೆಗೆ ಅನೇಕರು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಂತೂ ಅಸಂಖ್ಯಾತ ಕವಯಿತ್ರಿಯರು ಕಥೆಗಾರ್ತಿಯರು ಕಾದಂಬರಿಗಾರ್ತಿಯರು, ಸಂಶೋಧಕಿಯರು, ವಿಜ್ಞಾನ ಸಾಹಿತಿಗಳು ಮಹಿಳಾ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರು ಹೋರಾಟದ ಮೂಲಕವೇ ಮತದಾನದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಸಂಘಟನೆಯಿಲ್ಲದೇ ಹೋದರೆ ನಿಮಗೆ ಯಾವುದೇ ಹಕ್ಕುಗಳು ಸಿಗುವುದಿಲ್ಲ. ದೇವಸ್ಥಾನಗಳಿಗೆ ಹೋಗಿ ಹರಕೆ ಹೊತ್ತರೆ, ಪ್ರಾರ್ಥಿಸಿದರೆ ನಮ್ಮ ಬದುಕು ಬದಲಾಗುವುದಿಲ್ಲ. ಮಹಿಳೆಯರು ವಾಸ್ತವವನ್ನು ಅರಿತು, ಹಕ್ಕುಗಳಿಗಾಗಿ ಬೀದಿಗಿಳಿದು ದನಿ ಎತ್ತಬೇಕು ಎಂದು ಹೇಳಿದರು.
ಬರಹಗಾರರ ಸಂಘದ ರಾಜ್ಯ ಅಧ್ಯಕ್ಷ ಮಧುನಾಯ್ಕ ಮಾತನಾಡಿ ಮಹಿಳೆಯರ ಸಬಲೀಕರಣ, ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಕೈಗೊಳ್ಳುವ ಪ್ರಮುಖ ಹೆಜ್ಜೆಯಾಗಿದೆ. ಈಗಾಗಲೇ ಬರಹಗಾರರ ಸಂಘ ಅತ್ಯಂತ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದು ಮಹಿಳಾ ಘಟಕವನ್ನು ರಚಿಸುವುದರ ಮೂಲಕ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಬರಹಗಾರರ ಸಂಘ ಮಾಡುತ್ತಿದೆ. ಮಹಿಳಾ ಸಾಧಕಿಯರ ಕೃತಿಗಳು ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನವನ್ನು ಸುಧಾರಿಸಲು ಮತ್ತು ಸಮಾನತೆಯ ಹಾದಿಯಲ್ಲಿ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ. ಅವರು ತಮ್ಮ ಸಾಹಿತ್ಯದ ಮೂಲಕ ಸ್ತ್ರೀಯರ ಸ್ವಾತಂತ್ರ್ಯ, ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆಗಳ ಅಗತ್ಯತೆಯನ್ನು ಹೋರಾಟ ಮಾಡಿದರು. ಈ ರೀತಿಯ ಸಾಹಿತ್ಯವು ಆಧುನಿಕ ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ ಎಂದರು.
ಬರಹಗಾರರ ಸಂಘದ ಹರಪನಹಳ್ಳಿ ತಾಲೂಕು ಅಧ್ಯಕ್ಷ ಕೆ.ಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕ ಸಾಹಿತ್ಯದಲ್ಲಿ ಮಹಿಳಾ ಸಾಧಕಿಯರು ಕೇವಲ ಸಾಹಿತ್ಯದ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಮಾಜದಲ್ಲಿ ಸ್ತ್ರೀಯರ ಹಕ್ಕುಗಳ ಮತ್ತು ಸ್ವಾತಂತ್ರ್ಯದ ಪ್ರತೀಕಗಳಾಗಿ ಪರಿಣಮಿಸಿದ್ದಾರೆ. ಅವರ ಕೃತಿಗಳು ಮುಂದಿನ ತಲೆಮಾರಿಗೆ ಪ್ರೇರಣೆಯಾಗಿ ಉಳಿಯುತ್ತವೆ. ಮಹಿಳಾ ಘಟಕವು ಅತ್ಯಂತ ಯಶಸ್ವಿಯಾಗಿ ಉತ್ತಮ ಕೆಲಸ ಮಾಡಲಿ. ಸಂಘದಲ್ಲಿ ಸಾಹಿತ್ಯ. ಕಲೆ. ಸಂಘಟನೆ ಬಹು ಮುಖ್ಯವಾಗಿದ್ದು ಕನ್ನಡವನ್ನು ಉಳಿಸಿ ಬೆಳಸುವ ಕೆಲಸ ಮಾಡುವ ಹಾಗೂ ಹೊಸ ಪ್ರತಿಬೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿ ಕೊಡುವ ಮೂಲಕ ಪುರುಷರಷ್ಟೆ ಮಹಿಳೆಯರಿಗೂ ಕೂಡ ಸಮಾನತೆ ಕಲ್ಪಿಸಲಾಗವುದು. ಗ್ರಾಮೀಣ ಭಾಗದಲ್ಲಿ ಸೂಕ್ತ ಮಹಿಳಾ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಬರಹಗಾರರ ರಾಜ್ಯ ಮಟ್ಟದ ಮಹಿಳಾ ಘಟಕವನ್ನು ರಚಿಸಲಾಗುವುದು ಎಂದರು.
ಇದೇ ವೇಳೆ ಬರಹಗಾರರ ಸಂಘದ ರಾಜ್ಯ ಮಹಿಳಾ ಅಧ್ಯಕ್ಷರನ್ನಾಗಿ ಶುಭಾ ಕುಸ್ಕೂರವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಬರಹಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಬರಹಗಾರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಪ್ರಶಾಂತ ಕುಲಕರ್ಣಿ, ಪ್ರವೀಣ, ಶಿಕ್ಷಕಿಯರಾದ ಮಲ್ಲಮ್ಮ ವಡ್ಡರ, ಡಿ.ಶಶಿಕಲಾ ನಾಗಭೂಷಣ, ಶೈಲಜಾ, ಶುಭಾ ಕುಸ್ಕೂರು, ಕಾಂಚನ ವಿಜಯಕುಮಾರ್, ಪೂಜ ಕುಲಕರ್ಣಿ, ಪ್ರಜ್ಞಾ ಕುಲಕರ್ಣಿ, ಮಂಜುಳಾ, ಭಾಗ್ಯ ನಾಗರಾಜ, ಸಂಗೀತಾ, ಲಕ್ಷ್ಮೀ ಲಮಾಣಿ, ಸೇರಿದಂತೆ ಇತರರು ಇದ್ದರು.
ವರದಿ : ಗೊರೂರು, ಅನಂತರಾಜು
