ಹಾಸನ, ಏ.4: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ರಾಜ್ಯಮಟ್ಟದ ಬೃಹತ್ ಜನಸಮಾವೇಶವನ್ನು ಏಪ್ರಿಲ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಹಾಸನ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಚೈತ್ರ, “ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯತ್ನ ನಡೆಯುತ್ತಿದೆ. ಇದಕ್ಕೆ ವಿರೋಧವಾಗಿ ಕಳೆದ ನಾಲ್ಕು ತಿಂಗಳಿಂದ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ” ಎಂದು ಆರೋಪಿಸಿದರು.
ಗ್ರಾಮೀಣ ಭಾಗಗಳಲ್ಲಿ ಪೋಷಕರು ಮತ್ತು ಸಾರ್ವಜನಿಕರು ‘ನಮ್ಮೂರ ಶಾಲೆ ಉಳಿಯಲಿ’ ಎಂಬ ಘೋಷದೊಂದಿಗೆ ಹೋರಾಟ ಸಮಿತಿಗಳನ್ನು ರಚಿಸಿಕೊಂಡಿದ್ದು, ಈ ಯೋಜನೆ ಬಡ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಈಗಾಗಲೇ ಶಾಲೆಗಳ ಮ್ಯಾಪಿಂಗ್ ಪ್ರಕ್ರಿಯೆ ನಡೆಸಿದ್ದು, ಯಾವ ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಗುರುತಿಸಿದೆ. ಅಧಿಕಾರಿಗಳು ಮ್ಯಾಗ್ನೆಟ್ ಶಾಲೆಗಳ ಸಮೀಕ್ಷೆ ನಡೆಸುತ್ತಿದ್ದು, ಮುಖ್ಯಶಿಕ್ಷಕರಿಗೆ ಮೌಖಿಕ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ, ಏಪ್ರಿಲ್ 8 ಮತ್ತು 9ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ ವಿದ್ಯಾರ್ಥಿಗಳನ್ನು ಕೆಪಿಎಸ್ ಶಾಲೆಗಳಿಗೆ ಸೇರಿಸಲು ಒತ್ತಾಯ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರು, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಈ ಹೋರಾಟವು ಕೇವಲ ಶಾಲೆಗಳ ಉಳಿವಿಗೆ ಮಾತ್ರ ಸೀಮಿತವಾಗದೆ, ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ಕಾಪಾಡುವ ಹೋರಾಟವಾಗಿದ್ದು, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಮ್ಯಾಗ್ನೆಟ್ ಯೋಜನೆ ಹಾನಿಕಾರಕ ಎಂಬ ಅಭಿಪ್ರಾಯವನ್ನು ಹಲವು ವಲಯಗಳು ವ್ಯಕ್ತಪಡಿಸಿವೆ.
‘ನಮ್ಮೂರ ಶಾಲೆ ಉಳಿಯಲಿ’ ಎಂಬ ಘೋಷದೊಂದಿಗೆ ಏಪ್ರಿಲ್ 10ರಂದು ನಡೆಯುವ ರಾಜ್ಯಮಟ್ಟದ ಜನಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳು ಸಾರ್ವಜನಿಕರಿಗೆ ಕರೆ ನೀಡಿವೆ.
