ಧಾರವಾಡ: ಕವಿಗಳು ಕೇವಲ ಕಾವ್ಯ ಪರಂಪರೆಯ ಅರಿವಿನಲ್ಲೇ ಸೀಮಿತಗೊಳ್ಳದೆ, ಹಿರಿಯ ತಲೆಮಾರಿನ ಕವಿಗಳ ಸಾಹಿತ್ಯದ ತಿರುಳನ್ನೂ ಅರ್ಥೈಸಿಕೊಂಡು, ಸಮಾಜದ ಕಟ್ಟಕಡೆಯ ಬದುಕಿನ ತಲ್ಲಣಗಳಿಗೆ ಸ್ಪಂದಿಸುವ ಕಾವ್ಯ ರಚಿಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಧಾರವಾಡ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧಾರವಾಡ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ತಳಸಮುದಾಯದ ಬದುಕಿಗೆ ಬಲ ತುಂಬಿದ ಅನುಭಾವ ಪರಂಪರೆಗಳನ್ನು ಕಟ್ಟಿಕೊಟ್ಟಿವೆ. ಇಂದಿನ ಕಾವ್ಯವೂ ಆ ದಾರಿಯಲ್ಲೇ ಸಮಾಜದ ನಾಡಿಯೊಡನೆ ಮೇಳೈಸಿ ಬದುಕಿನ ನೋವು-ನಲಿವುಗಳಿಗೆ ಪ್ರತಿಧ್ವನಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ ಸ್ಥಿತಿಗತಿಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕನ್ನಡ ಅಸ್ಮಿತೆಯ ಪ್ರತಿನಿಧಿಕ ಸಂಸ್ಥೆಯಾಗಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತು ಬಹುತೇಕ ನಿದ್ರಾವಸ್ಥೆಯಲ್ಲಿದ್ದು, ಅದರ ಆಶಯಗಳು ಮಂಕಾಗಿರುವುದು ದುಃಖಕರ ಸಂಗತಿ ಎಂದರು. ಇಂತಹ ಸಂದರ್ಭದಲ್ಲಿ ನೂರಾರು ಕನ್ನಡಪರ ಸಂಘಟನೆಗಳು ರಾಜ್ಯದಾದ್ಯಂತ ಕಾರ್ಯೋನ್ಮುಖವಾಗಿರುವುದರಿಂದ ಕನ್ನಡ ಸಾಹಿತ್ಯ ಕ್ಷೇತ್ರ ಜೀವಂತವಾಗಿದೆ ಎಂದು ಹೇಳಿದರು.

ಬಸವಣ್ಣ ಮತ್ತು ಕುವೆಂಪು ಅವರ ವಿಚಾರಧಾರೆಗಳ ಅಡಿಯಲ್ಲಿ ಸಮಸಮಾಜದ ಕನಸಿನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸುವುದರ ಜೊತೆಗೆ ಯುವಜನರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದರು.
ಯುದ್ಧದ ಭೀಕರತೆಯ ಅಂತಿಮ ಸಂದೇಶ ಶಾಂತಿ: ರಂಜಾನ್ ದರ್ಗಾ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಗೌರವಾಧ್ಯಕ್ಷ ಹಾಗೂ ಹಿರಿಯ ಶರಣ ಸಾಹಿತಿ ರಂಜಾನ್ ದರ್ಗಾ, ರಾಜಕಾರಣಿಗಳು ಮತ್ತು ಕಾರ್ಪೋರೇಟ್ ಶಕ್ತಿಗಳು ತಮ್ಮ ವೈಯಕ್ತಿಕ ವರ್ಚಸ್ಸಿಗಾಗಿ ಧರ್ಮಾಂಧತೆಯನ್ನು ಹೊತ್ತೊಯ್ಯುತ್ತಾ ಯುದ್ಧಗಳನ್ನು ಪ್ರೋತ್ಸಾಹಿಸುವುದು ದುರಂತಕರ ಬೆಳವಣಿಗೆ ಎಂದು ವಿಷಾದಿಸಿದರು.

ಜಗತ್ತಿನ ಎಲ್ಲ ಮಹಾಕಾವ್ಯಗಳೂ ಯುದ್ಧದ ಭೀಕರತೆಯನ್ನು ಚಿತ್ರಿಸಿದರೂ, ಅಂತಿಮವಾಗಿ ಶಾಂತಿ, ಮಾನವೀಯತೆ ಮತ್ತು ಸಮಸಮಾಜದ ಸಂದೇಶವನ್ನೇ ಸಾರಿವೆ. ಬರಹಗಾರರು ವರ್ತಮಾನದ ತಲ್ಲಣಗಳ ಮೇಲೆ ಬೆಳಕು ಚೆಲ್ಲಿ, ಬಸವಾದಿ ಶಿವಶರಣರ ಜಾತ್ಯಾತೀತ, ಧರ್ಮಾತೀತ, ಲಿಂಗಾತೀತ ವಿಶ್ವಮಾನವ ಮೌಲ್ಯಗಳನ್ನು ಇಂದಿನ ಸಮಾಜಕ್ಕೆ ಮರುಪರಿಚಯಿಸಬೇಕು ಎಂದು ಹೇಳಿದರು.
ಇಂದಿನ ಕವಿಗೋಷ್ಠಿಯಲ್ಲಿ ಯುವಕರು ಮತ್ತು ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ಅತ್ಯಂತ ಆಶಾದಾಯಕ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯ ಗಟ್ಟಿತನ ಹೆಚ್ಚಿಸಬೇಕಿದೆ: ಶಾಲಿನಿ ರುದ್ರಮುನಿ
ರಾಜ್ಯ ಉಪಾಧ್ಯಕ್ಷೆ ಶಾಲಿನಿ ಆರ್. ರುದ್ರಮುನಿ ತಾಲ್ಲೂಕು ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಕನ್ನಡ ಸಾಹಿತ್ಯದ ಮೌಲ್ಯಗಳನ್ನು ಪಸರಿಸುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ವೇದಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಯುವಜನರಲ್ಲಿ ಸಾಹಿತ್ಯಾಸಕ್ತಿ ಕ್ಷೀಣಿಸುತ್ತಿದೆ: ಎ.ಎ. ದರ್ಗಾ
ಜಿಲ್ಲಾಧ್ಯಕ್ಷ ಎ.ಎ. ದರ್ಗಾ ಪ್ರಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಉನ್ನತ ಸ್ಥಾನದಲ್ಲಿದ್ದ ಧಾರವಾಡ ಇಂದು ನಿರಾಸಕ್ತಿಯತ್ತ ಸಾಗುತ್ತಿರುವುದು ದುರಂತ ಎಂದರು. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಯುವಜನರ ತೊಡಗಿಸಿಕೊಳ್ಳುವಿಕೆ ಕ್ಷೀಣಿಸುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಸಂಗತಿ. ಸಾಹಿತ್ಯ ಸಂಘಟನೆಗಳು ಯುವ ಪ್ರತಿಭೆಗಳಿಗೆ ಸ್ಫೂರ್ತಿ ತುಂಬಿ, ಸಾಂಸ್ಕೃತಿಕ ಆಸಕ್ತಿ ಬೆಳೆಸುವ ಕೆಲಸವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾಮಟ್ಟದ ಕವಿಗೋಷ್ಠಿ ಯಶಸ್ವಿ
ನಂತರ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಯುದ್ಧ ಮತ್ತು ಯುಗಾದಿ ವಿಷಯಗಳಡಿ ಅನೇಕ ಕವಿಗಳು ಕವನ ವಾಚಿಸಿದರು. ಸುಹಾಸಿನಿ ಕುಕ್ಕಡೊಳ್ಳಿ, ಸುಲೋಚನಾ ಮಾಲಿ ಪಾಟೀಲ, ಮಂಜುನಾಥ ಮದ್ನೂರು, ಎಸ್.ಎಂ. ಮುಲ್ಲಾ, ಶ್ರೀನಿವಾಸ ಪಾಟೀಲ, ಪರ್ವೀನ್ ದರ್ಗಾ, ಡಾ. ರೇಣುಕಾತಾಯಿ ಎಂ. ಸಂತಬಾ, ಜ್ಯೋತಿ ಎಂ. ಚಿನಗುಂಡಿ, ದೀಪಾ ಜವಳಿ, ಭಾರತಿ ಬಡಿಗೇರ, ಗಣೇಶ ಏಸುಗಡೆ, ಸಂತೋಷ ಕರೆಮಳ್ಳನವರ, ಶಾಂತ ಕೆ. ಹೊಂಬಳ, ಪ್ರಿಯಾಂಕ ಮಾವಿನಕರ, ಮಲ್ಲಮ್ಮ ಯಾತಗಲ್ಲ, ಪದ್ಮಾ ಕಲೆಗಾರ, ಗಿರಿಜಾ ಸಂಗೊಳ್ಳಿ, ಪಾರ್ವತಿ ಹಮ್ಮಿಗೆ, ಮೇಘಾ ಹುಕ್ಕೇರಿ, ಸಂಗನಗೌಡ ಯಾಳಗಿ, ರಾಹುಲ ಉಪ್ಪಾರ್, ಪಾರಕ್ಕ ದಾನನ್ನವರ್, ರಾಜೇಶ್ವರಿ ಕೋಲಕಾರ, ದೀಪಶ್ರೀ ನಾಯಕ, ಅಶೋಕ ಮುತ್ತಗಿ, ಪದ್ಮಜಾ ಉಮರ್ಜಿ, ಮಂಗಳಾ ನಾಡಿಗೇರ, ಸುಮಾ ಜೋಷಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಎಸ್.ಆರ್. ಆಶಿ, ಎಂ.ಡಿ. ಒಕ್ಕುಂದ, ಶಿವು ಎಂ. ಖನ್ನೂರ, ಸಂಧ್ಯಾ ಧೀಕ್ಷಿತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
