ಚನ್ನರಾಯಪಟ್ಟಣ, ಏಪ್ರಿಲ್ 8: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯ ಧ್ವನಿಯಾಗಿದ್ದು, ಕನ್ನಡ ಮನಸುಗಳನ್ನು ಸೆಳೆಯುವ ಸಂಘಟನಾ ಚಾತುರ್ಯ ಹಾಗೂ ಹೋರಾಟದ ಹಿನ್ನೆಲೆ ಹೊಂದಿರುವವರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದರೆ ಪರಿಷತ್ತು ನಿಂತ ನೀರಾಗದೆ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಮೇಟಿಕೇರಿ ಹಿರಿಯಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿರುವ ಸಾಮಾಜಿಕ ಹೋರಾಟಗಾರ ಕಾಳೇನಹಳ್ಳಿ ಆನಂದ್ ಅವರ ಹಿತೈಷಿಗಳಿಂದ ಆಯೋಜಿಸಲಾದ ಚಿಂತನಾಸಭೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗಳು ರಾಜಕೀಯ ಚುನಾವಣೆಗಳ ಮಾದರಿಯಲ್ಲಿ ಹಣದ ಹೊಳೆಯು ಹರಿಯುವ ಮಟ್ಟಕ್ಕೆ ಬಂದಿರುವುದು ವಿಷಾದನೀಯ ಬೆಳವಣಿಗೆ ಎಂದು ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸುವ ತುಡಿತ ಇರುವ ವ್ಯಕ್ತಿಯನ್ನು ಆಯ್ಕೆ ಮಾಡುವ ವೇದಿಕೆ. ಆದರೆ ಇಂದು ಉದ್ಯಮಿಗಳು ಹಾಗೂ ರಾಜಕೀಯ ಹಿನ್ನೆಲೆಯವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದರಿಂದ ನಿಜವಾದ ಕನ್ನಡಪರ ಕಟ್ಟಾಳುಗಳು ಹಿಮ್ಮುಖವಾಗುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾಳೇನಹಳ್ಳಿ ಆನಂದ್ ಚಿಕ್ಕಂದಿನಿಂದಲೂ ಸಂಘಟನಾ ಚಾತುರ್ಯ ಹೊಂದಿರುವ ವ್ಯಕ್ತಿಯಾಗಿದ್ದು, ಅವರಿಗೆ ಕನ್ನಡಕ್ಕಾಗಿ ಕೆಲಸ ಮಾಡುವ ಅವಕಾಶ ಸಿಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಕಾಳೇನಹಳ್ಳಿ ಆನಂದ್ ಕುಮಾರ್, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ.ಎನ್. ಪುಟ್ಟಸ್ವಾಮಿಗೌಡ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾದ ಮೆಡಿಕಲ್ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಕುಂಬಾರಹಳ್ಳಿ ರಮೇಶ್, ಮಾಜಿ ಉಪಾಧ್ಯಕ್ಷರಾದ ಸಿ.ಜೆ. ಜಗದೀಶ್, ಪುರಸಭಾ ಮಾಜಿ ಅಧ್ಯಕ್ಷರಾದ ಸಿ. ನಾಗರಾಜು, ಕೋಟೆ ಮೋಹನ್, ಹಿರಿಯ ಸಾಹಿತಿಗಳಾದ ಮೇಟಿಕೇರಿ ಹಿರಿಯಣ್ಣ, ಪ್ರೊ. ಸಿದ್ದೇಗೌಡ, ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಶ್ರೀಮತಿ ಜಯಂತಿ ಚಂದ್ರಶೇಖರ್, ಕಾಳೇನಹಳ್ಳಿ ಚಂದ್ರು, ಹರಿಕಥೆ ವಿದ್ವಾಂಸರಾದ ಲೋಕೇಶ್ ದಾಸ್, ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಿ.ಎನ್. ಅಶೋಕ್, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮುರಾಜಿ ಮಂಜಣ್ಣ, ಕಾರ್ಯದರ್ಶಿಗಳಾದ ಕೆಂಬಾಳು ಶರತ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ನಾಗರತ್ನ, ಉಪಾಧ್ಯಕ್ಷರಾದ ಪ್ರೇಮಮ್ಮ, ಸಮಾಜಸೇವಕರಾದ ಗಜಾನನ ಮನೋಹರ್, ಅಬ್ದುಲ್ ಅಝೀಮ್, ಮಹದೇವ್, ಸಿದ್ದೇಶ್, ಕನ್ನಡಪರ ಹೋರಾಟಗಾರರಾದ ಜನಿವಾರ ಶರತ್, ರಾಜಕುಮಾರ, ಉಪನ್ಯಾಸಕರಾದ ಎಂ.ಜೆ. ರತ್ನಾಕರ್, ಹನುಮಂತಪ್ಪ, ಯಶವಂತ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
