
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಪರೀಕ್ಷೆ ಪ್ರಣಯ
ಭೋರ್ಗರೆಯುವ ಮಳೆ, ಸಿಡಿಲು, ಗುಡುಗು, ಕೋಲ್ಮಿಂಚುಗಳ ಬೆಳಕು, ಶಬ್ದಗಳ ಮನೋಹರ ಚಿತ್ತಾರ, ನಾಳೆ ಬೆಳಗ್ಗೆ ಟೆನ್ನಿಸ್ ಆಟ ಸಾಧ್ಯವಿಲ್ಲವೆಂದು ಬೇಜಾರಿನಲ್ಲೇ ಮಲಗಿದ್ದೆ.
ಬೆಳಗ್ಗೆ ನಿಶಬ್ದ ವಾತಾವರಣ, ಧೂಳು ತಟಸ್ಥ, ಎಲ್ಲೆಲ್ಲೂ ಹಸಿರಿನ ಮೇಲೆ ಇಬ್ಬನಿ ಸುರಿದಂತೆ ಕಂಗೊಳಿಸುತ್ತಿರುವ ಸಸ್ಯ ಸಂಕುಲ, ಚಿಲಿಪಿಲಿ ಎಂದು ಕಲರವ ಮಾಡುತ್ತಿರುವ ಪಕ್ಷಿಗಳು, ಇಡೀ ಭೂಮಿಯನ್ನೇ ಹೊನ್ನಿನ ಬಣ್ಣಕ್ಕೆ ತಿರುಗಿಸುತ್ತಿರುವ ಸೂರ್ಯ. ಇಂಥ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಉಬ್ಬು ತಗ್ಗಿನ ಬೀದಿಯಲ್ಲಿ ನನ್ನ ಸ್ನೇಹಿತರಾದ ಕವಿ ತಿಮ್ಮ ಅವರ ಮನೆಯ ಕಡೆ ಹೆಜ್ಜೆ ಹಾಕಿದೆ.
ಅರೆಬರೆ ಬಾಗಿಲು ತೆರೆದಿದ್ದ ಸಂದಿಯಿಂದ ಕವಿ ತಿಮ್ಮರು ಗೊಣಗುತ್ತಿದ್ದ ಸಾಹಿತ್ಯದ ಕಂಪು, ಸಾಧಾರಣವಾದ ರಾಗದಲ್ಲಿ ಹೊರ ಬರುತ್ತಿತ್ತು.
ಬಿಡು ಬಿಡು ಭಯವಾ ಮುಂದೆ
ಹೆದರದಿರು, ಪರೀಕ್ಷೆ ಒಂದೇ…
ಬಿಡಬೇಡ ನೀ ಪರೀಕ್ಷೆ
ಅದೇ ಎಂದೆಂದಿಗೂ ಶ್ರೀರಕ್ಷೆ
ಬಿಡು ಬಿಡು ಭಯವಾ ಮುಂದೆ…
ಎಂದು ಹಾಡುತ್ತಾ ಅವರ ತಂದೆಯ ಚಿತ್ರಕ್ಕೆ ನಮಿಸುತ್ತಿದ್ದರು. ನನ್ನನ್ನು ಕಂಡು, “ಅರರೇ, ಏನು ವೈದ್ಯ ಸಾಹೇಬ್ರು ಈ ಕಡೆ ಸವಾರಿ” ಅಂದ್ರು. ಆಟವಿಲ್ಲ, ರಾತ್ರಿಯಿಡೀ ಮಳೆ. ಆದ್ದರಿಂದ ಇಂದು ನನ್ನ ನಡೆ ನಿಮ್ಮ ಕಡೆ ಅಂದೆ. ಬನ್ನಿ ಟೀ ಕುಡಿಯೋಣ ಅಂದರು. ಅವರಿಗೆ ಗೊತ್ತು, ನಾನು ಛಾಯಾಪತಿ ಅಂತ. ಒಳಗೆ ಸುಲಭ ಆಸನದಲ್ಲಿ ಕುಳಿತು ಅವರೇ ತಯಾರಿಸಿದ ಟೀ ಹೀರುತ್ತಾ ಯಾವುದೋ ಒಳ್ಳೇ ಕವಿತೆ ಹಾಡುತ್ತಿದ್ದಿರಿ ಅಂದೆ.
ಅಂತಹದ್ದೇನೂ ಇಲ್ಲ, ವ್ಯಾಯಾಮ ಮಾಡುತ್ತಿರುವಾಗ, ನನಗೆ ಯಾಕೋ ಪರೀಕ್ಷೆಯ ನೆನಪಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಪರೀಕ್ಷೆ ಶುರುವಾಗುತ್ತವೆ. ನಿಮ್ಗೆ ಗೊತ್ತಲ್ಲಾ ಡಾಕ್ಟ್ರೇ ಪರೀಕ್ಷೆ ಅಂದಾಕ್ಷಣ ಮಕ್ಕಳಿಗೆ ಭಯ, ಆತಂಕ, ಚಡಪಡಿಕೆ, ನಿರುತ್ಸಾಹ, ಬೇಜಾರು, ನಿದ್ರಾಹೀನತೆ. ಎಲ್ಲಕ್ಕಿಂತ ಮಿಗಿಲಾಗಿ ಜೀವಹಾನಿ. ನನ್ನನ್ನು ಕಾಡುತ್ತಿರುವುದು ಈ ಆತ್ಮಹತ್ಯೆ. ನೋಡಿ? ಪರೀಕ್ಷೆ ಎಲ್ಲಿ, ಆತ್ಮಹತ್ಯೆ ಎಲ್ಲಿ, ಇದು ಎಂಥಾ ಸಂಬಂಧ! ಈ ನಷ್ಟವನ್ನು ತುಂಬುವುದು ಹೇಗೆ ಎಂಬುದನ್ನು ಚಿಂತಿಸುತ್ತಿರುವಾಗ ಒಂದು ಕ್ಷಣದಲ್ಲಿ ಈ ಕವಿತೆ ಸೃಷ್ಟಿಯಾಯಿತು ಅಂದರು.
ಸ್ನೇಹಿತರೇ, ನಿಜವಾಗಲೂ ಈ ಆತ್ಮಹತ್ಯೆ ಎಂಬುದು ಸಮಾಜದ ಒಂದು ದೊಡ್ಡ ಪಿಡುಗು ಎಂದೇ ಹೇಳಬಹುದು. ನಾವು ವಿಜ್ಞಾನದಲ್ಲಿ ಎಷ್ಟೇ ಮುನ್ನಡೆ ಸಾಧಿಸಿದ್ದರೂ ಈ ಆತ್ಮಹತ್ಯೆಯಂತಹ ಸೂಕ್ಷ್ಮ ವಿಷಯಗಳು ಇಳಿಮುಖವಾಗದಿರುವುದು ವಿಜ್ಞಾನಕ್ಕೆ ಸವಾಲೇ ಸರಿ.
ಈ ಸಮಸ್ಯೆ ಎಂತಹದ್ದು? ಇದರ ಮರ್ಮವೇನು? ಇದಕ್ಕೆ ಪರಿಹಾರವಿದೆಯೇ? ಬನ್ನಿ, ಪ್ರೊ. ನಿರ್ವಾಣ್ರವರು ಈ ಬಗ್ಗೆ ಏನು ಹೇಳುತ್ತಾರೆ ಕೇಳೋಣ.
ಪರೀಕ್ಷೆ ಅಂದರೆ ಕಷ್ಟ. ಪರಿಪರಿಯಾಗಿ ಕಾಡೋ ಕಷ್ಟಾವೇ ಈ ಪರೀಕ್ಷೆ. ಏಕೆ ಈ ಪರೀಕ್ಷೆ ಅನ್ನೋದು ಕಷ್ಟ? ಮಾಹಿತಿ ತಂತ್ರಜ್ಞಾನ , ಜೈವಿಕ ತಂತ್ರಜ್ಞಾನ, ವಿವಿಧ ಸ್ನಾತಕೋತ್ತರ , ವೈದ್ಯಕೀಯ ವಿಭಾಗಗಳ ಎಷ್ಟೋ ಮಹಾ ವಿದ್ಯಾಲಯ ಮತ್ತು ಸ್ನಾತಕೋತ್ತರ ವಿದ್ಯಾ ಸಂಸ್ಥೆಗಳು ಇದ್ದರೂ ಇದರ ಒಳಗೆ ನುಸುಳುವ ಪರೀಕ್ಷೆಗಳು ತೀರಾ ಕಷ್ಟವಾಗಿಬಿಟ್ಟಿವೆ. ಜನಸಾಮಾನ್ಯರಿಗೆ, ವಿದ್ಯಾಸಂಸ್ಥೆಗಳ ವ್ಯಾಪಾರೀಕರಣ, ಹಣ ಸಂಪಾದನೆಯ ವ್ಯಾಮೋಹ, ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣದ ಒಲವು. ವಿದ್ಯಾರ್ಥಿಗಳ ಪೈಪೋಟಿ, ವಿದ್ಯಾರ್ಥಿಗಳ ಮಾನಸಿಕ ಒತ್ತಡ, ಪೋಷಕರ ಅವೈಜ್ಞಾನಿಕ ಅತೀ ನಿರೀಕ್ಷೆ ಇವುಗಳೆಲ್ಲವೂ ಪರೀಕ್ಷೆ ಅನ್ನುವುದನ್ನು ಒಂದು ದೊಡ್ಡ ಮಾರಿಯನ್ನಾಗಿ ಮಾಡಿವೆ.
ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು, ಸರಕಾರ, ಕಾನೂನು, ಆರಕ್ಷಕರು ಎಲ್ಲರೂ ಹೊಣೆ ಹೊತ್ತು ಜವಾಬ್ದಾರಿಯಿಂದ ವ್ಯವಸ್ಥೆಯನ್ನು ಸರಿಪಡಿಸುವತ್ತ ಚಿಂತನೆ ಮಾಡಬೇಕಿದೆ. ನೀತಿ ಆದರ್ಶಗಳೆಲ್ಲವೂ ಬರಹ ಮತ್ತು ಪುಸ್ತಕಕ್ಕೆ ಮಾತ್ರ ಸೀಮಿತವಾಗುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಒತ್ತಡ, ಮನೋ ನ್ಯೂನತೆ ಮತ್ತು ಮನೋ ವ್ಯಾಕುಲತೆಗಳು ಹೆಚ್ಚುತ್ತಿರುವುದನ್ನು ಕಾಣುತ್ತೇವೆ.
ಎಲ್ಲಕ್ಕಿಂತ ಮಿಗಿಲಾಗಿ ಆಗಲೇ ಹೇಳಿದ ಹಾಗೆ ಆತ್ಮಹತ್ಯೆ. ಹೆತ್ತ ಕರುಳ ಕುಡಿಯನ್ನು ಕಳೆದುಕೊಂಡ ಅಪ್ಪ ಅಮ್ಮನ ಸಂಕಟವನ್ನು ಊಹಿಸಿಕೊಳ್ಳಿ. ಇದಕ್ಕೆಲ್ಲಾ ನನ್ನ ಕಡೆಯಿಂದ ಒಂದು ಪರಿಹಾರ ಅನಿಸುವುದು ‘ಮುಕ್ತ ಚರ್ಚೆ’. ಈ ಪಿಡುಗನ್ನು ತೊಲಗಿಸಲು ಕುಟುಂಬದವರೆಲ್ಲಾ ಸೇರಿ ಪ್ರತಿಯೊಂದು ವಿಷಯವನ್ನು ಯಾವುದೇ ನಾಚಿಕೆ, ಭಯ, ಆತಂಕಗಳಿಲ್ಲದೆ ಪರಸ್ಪರ ಹಂಚಿಕೊಳ್ಳುವುದು ಒಳಿತೆನಿಸುತ್ತದೆ.
ಒಮ್ಮೆ ಈ ಪರೀಕ್ಷೆಯನ್ನು ಆಂಗ್ಲ ಭಾಷೆಯಲ್ಲಿ ಬಿಡಿಸಿ ಹೇಳಿದ್ದೀರಿ ಸರ್. ದಯವಿಟ್ಟು ಅದನ್ನು ಮತ್ತೊಮ್ಮೆ ವಿವರಿಸಿ ಅಂದೆ.
ವೆರಿ ಇಂಟರೆಸ್ಟಿಂಗ್. ಅಂದು, ಏನ್ ಡಾಕ್ಟ್ರೇ ನೀವು ಹೀಗೆ ಮರೆತುಬಿಟ್ರೆ ‘ನಿಮ್ಮ ರೋಗಿಗಳ ಸ್ಥಿತಿ ಅಧೋಗತಿ’ ಅಂತ ಹಾಸ್ಯ ಚಟಾಕಿ ಹಾರಿಸಿ ಪರೀಕ್ಷೆ ಅಂದರೆ ಇಂಗ್ಲಿಷ್ನಲ್ಲಿ Examination ಎಂಬುದು.
ಇದನ್ನು ನೀವು ಕಲ್ಪನಾ ಸಿದ್ಧಾಂತದಿಂದ (Hypothetical) ನೋಡಿದಾಗ ನನಗೆ ಅನಿಸಿದ್ದು ಹೀಗೆ: Examination = Exit-Mission-Emotion ಎಂದು. ಹೇಗೆಂದರೆ Examination is nothing but exit from the mission which has emotion ಎಂದು ಬಿಡಿಸಿದರು.
ನೋಡಿ, ಪರೀಕ್ಷೆ ಎಷ್ಟು ಸರಳ? Examination ಅನ್ನುವುದು ಒಂದು ಸಿನಿಮಾ ಇದ್ದಂತೆ. ನಾವು ಚಿತ್ರಮಂದಿರದ ಒಳಗೆ ಗಮನಿಸಿದರೆ ‘In’ ’ ಮತ್ತು ‘Exit’ ಎಂಬ ಬರಹಗಳಿರುತ್ತವೆ. In ಅಂದರೆ ಒಳಗೆ ಮತ್ತು Exit ಅಂದರೆ ಹೊರಗೆ ಅಲ್ಲವೇ?
“ಮಾಯಾ ಬಜಾರ್’’ ಎಂಬ ಚಲನಚಿತ್ರ ನೋಡುವುದು ಒಂದು mission. ನೋಡಿ ಹೊರ ಬಂದ ನಮಗೆ ಸಂತೋಷವಾದ ಹಾಗೆ ಈ ಪರೀಕ್ಷೆಯನ್ನು ಸಹ ನಾವು ಹಾಗೆಯೇ ಕಾಣಬೇಕು.

ಪರೀಕ್ಷೆ ಎಂಬುದು ಜಾಮೂನಿನಂತೆ ಇರಬೇಕು. ಖುಷಿ ಮತ್ತು ಆನಂದವನ್ನು ನಿರ್ಮಾಣ ಮಾಡಬೇಕು. ಪರೀಕ್ಷೆ ಎಂಬ ಭಾರವನ್ನು ಅಥವಾ ಭೂತವನ್ನು ವಿದ್ಯಾರ್ಥಿಯು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದನ್ನು ಹೇಳ್ತಿನಿ ಕೇಳಿ ಡಾಕ್ಟ್ರೇ ಅಂದರು. ಅವರ ವಿಚಾರಧಾರೆ ನನ್ನ ಕುತೂಹಲವನ್ನು ಇನ್ನೂ ಹೆಚ್ಚಿಸಿತು. ನಾನು ಛಾಯಾ-ಪತಿಯಾದ್ದರಿಂದ ಒಂದೊಂದು ಕಪ್ ಟೀ ಕುಡಿದು ಬರೋಣ ಬನ್ನಿ ಸಾರ್ ಅಂದೆ. ಗೋಣು ಆಡಿಸುತ್ತಾ ಹೊರ ಬಂದರು. ಪ್ರಶಾಂತವಾದ ವಾತಾವರಣ ಹಿತವೆನಿಸಿತು. ಆಸನಾರೂಢರಾಗಿ ಅಂದಿನ ಪತ್ರಿಕೆಗಳ ವಿಷಯಗಳನ್ನೆಲ್ಲ ತಿರುವಿ ಹಾಕಿದ ನಾವು ಸ್ವಲ್ಪ ಸಮಯದ ನಂತರ ನಮ್ಮ ಮೂಲ ವಿಷಯಕ್ಕೆ ಬಂದೆವು.
“ಹಾ, ನಾನು ಏನೋ ಹೇಳಬೇಕು ಅಂತಿದ್ದೆ” ಅಂದರು ಪ್ರೊ. ನಿರ್ವಾಣ್. ಹೌದು, ಒಬ್ಬ ವಿದ್ಯಾರ್ಥಿಯು ಪರೀಕ್ಷೆಗೆ ಮುಂಚೆ ಹೇಗೆ ಅನುವು ಮಾಡಿಕೊಳ್ಳಬೇಕು ಎಂಬುದನ್ನು ಹೇಳುತ್ತಿದ್ದಿರಿ.
ನೋಡಿ, ಗಮನವನ್ನು ಬೇರೆಡೆ ಹರಿಹಾಯಬಿಟ್ಟರೆ ಪ್ರಸ್ತಾಪಿಸಬೇಕಾದ ವಿಷಯವನ್ನು ಹೇಗೆ ಮರೆತು ಬಿಡುತ್ತೀವಿ?
ಡಾಕ್ಟ್ರೇ, ನೀವು ಆಟವಾಡುತ್ತೀರಿ ಅಲ್ಲವೇ?
“ಹೌದು, ಟೆನ್ನಿಸ್ ನನ್ನ ನೆಚ್ಚಿನ ಆಟ” ಅಂದೆ.
“ನೀವು ಆಡುವ ಅಂಕಣ ಮಣ್ಣಿನದ್ದಲ್ಲವೆ? ನೀವು ಆಡುವ ಮುಂಚೆ ಅಂಕಣವನ್ನು ನೀರು ಹಾಕಿ, ಸಾರಿಸಿ, ಗೆರೆ ಎಳೆದು ರೆಡಿ ಮಾಡಬೇಕಲ್ಲವೇ? ಅಕಸ್ಮಾತ್ ನಿಮ್ಮ ಕ್ಲಬ್ನವರು ಈ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡದಿದ್ದರೆ ನಿಮಗೆ ಆಟವಾಡಲು ಮನಸ್ಸು ಬರುತ್ತದೆಯೇ? ಇಲ್ಲ ಅಲ್ಲವೇ? ಹಾಗೆಯೇ ಒಬ್ಬ ವಿದ್ಯಾರ್ಥಿಯು ಪರೀಕ್ಷೆಗೆ ಮುನ್ನ ಅವನ ಸ್ವಯಮಾನುಸಾರ ಅಭ್ಯಾಸದ ಜಾಗವನ್ನು ಅನುವು ಮಾಡಿಕೊಳ್ಳಬೇಕು.
ಆಡುವುದಕ್ಕೆ ಬರೀ ಅಂಕಣವೊಂದಿದ್ದರೆ ಸಾಲದು, ಶುಭ್ರವಾದ ವಸ್ತ್ರ , ಒಳ್ಳೆಯ ರಾಕೆಟ್, ಪುಟಿದೇಳುವ ಚೆಂಡು, ಎಲ್ಲಕ್ಕಿಂತ ಮಿಗಿಲಾಗಿ ನಿಮಗೆ ಸರಿಸಮನಾದ ಎದುರಾಳಿ ಅಥವಾ ಹುರಿಯಾಳು ಇದ್ದರೆ ಮಾತ್ರ ಆಟಕ್ಕೆ ಆಸಕ್ತಿ ಇರುತ್ತದೆಯಲ್ಲವೆ? ಹಾಗೆಯೇ ಪರೀಕ್ಷೆ ಅಥವಾ ಅಧ್ಯಯನ ಎಂಬುದೂ ಆಟದ ಮೈದಾನ ಅಥವಾ ಅಂಕಣವಿದ್ದಂತೆ.
ಇಲ್ಲಿ ಅವಶ್ಯಕವಾದ ಖುರ್ಚಿ, ಗಾಳಿ-ಬೆಳಕು ಸಂಚರಿಸಬಲ್ಲ ನಿಶ್ಯಬ್ಧ ವಾತಾವರಣವುಳ್ಳ ಕೊಠಡಿಯನ್ನು ನಿರ್ಮಿಸಿಕೊಂಡು, ಅಲ್ಲಿಗೆ ಬೇಕಾದ ಲೇಖನ ಸಾಮಗ್ರಿಗಳು, ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳು ಎಲ್ಲವು ಕುಳಿತಲ್ಲಿಗೆ ಸಿಗುವಂತೆ ಮಾಡಿಕೊಂಡು ಅಧ್ಯಯನ ಅಥವಾ ಅಭ್ಯಾಸವನ್ನು ಮಾಡಬೇಕು. ಶ್ರಮಪಟ್ಟು ಓದುವವನಿಗೆ ಇವೆಲ್ಲಾ ಇರಲೇಬೇಕೆಂದೇನೂ ಇಲ್ಲ.
ಸರ್ ಎಂ. ವಿಶ್ವೇಶ್ವರಯ್ಯನವರು ಬೀದಿ ದೀಪದ ಬೆಳಕಿನಲ್ಲಿ ಕುಳಿತು ಓದಿ ದೊಡ್ಡ ವಿಜ್ಞಾನಿಯಾದರು. ಇಂತಹ ಉದಾಹರಣೆಗಳು ಭಾರತದಲ್ಲಿ ಬೇಕಾದಷ್ಟಿವೆ. ಈಗ ಪರಿಸ್ಥಿತಿಯೂ ಸುಧಾರಿಸಿರುವುದರಿಂದ ಅಷ್ಟು ಕಷ್ಟಪಡುವ ಅವಶ್ಯಕತೆ ಇಲ್ಲ ಹಾಗೂ ಚೆನ್ನಾಗಿ ಓದಲು ಈಗ ಎಲ್ಲರಿಗು ಅವಕಾಶಗಳಿವೆ.
ವಿದ್ಯಾರ್ಥಿಯಾದವನು ದಿನವಿಡೀ ಓದುತ್ತಿರಬಾರದು. ದಿನದ ಕೆಲ ಸಮಯವನ್ನು ಕ್ರೀಡೆ ಹಾಗೂ ಮನರಂಜನೆಗೆ ಮೀಸಲಿಡಬೇಕು. ಗೆಳೆಯರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಒಳ್ಳೆಯದು. ಮನಸ್ಸು ಏಕಾಗ್ರತೆಯಿಂದಿದ್ದಾಗ ಕಷ್ಟದ ವಿಷಯಗಳನ್ನು, ಅಲ್ಪ ಗಮನವಿದ್ದಾಗ ಸುಲಭದ ವಿಷಯಗಳನ್ನು ಆರಿಸಿಕೊಳ್ಳಬೇಕು.
ಅದು ಅವರವರ ಇಚ್ಛೆಗೆ ಬಿಟ್ಟಿದ್ದು. ಬರೀ ಓದಿದರೆ ಸಾಲದು, ವಿದ್ಯಾರ್ಥಿಯು ಅರಿವು ಉಳ್ಳವನಾಗಿರಬೇಕು. ಅರಿವಿದ್ದರೆ ಗಮನ, ಗಮನದಲ್ಲಿ ವಿಷಯಗಳ ಮನನ, ಮನನದೊಂದಿಗೆ ಅರ್ಥಗಳ ಆರೋಹಣ, ಅರ್ಥಗಳು ಕ್ಷೀಣಿಸಿದರೆ ಪುನರಾವರ್ತನೆ, ಓದಿದ್ದನ್ನು ಬರೆದು ಬರೆದು ಮೆಲುಕು ಹಾಕುತ್ತಿದ್ದರೆ ಅಂತಹ ವಿದ್ಯಾರ್ಥಿಯು ಮೇರು ಅಂಕಗಳನ್ನು ಪಡೆಯುವಲ್ಲಿ ಸಂದೇಹವಿಲ್ಲ.
ಇದರ ಜೊತೆಗೆ ಸಹಪಾಠಿಗಳ ಜೊತೆ ಪಠ್ಯದ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಹೇಗೆ? ಏಕೆ? ಹೌದ? ಎಂಬ ವಿಷಯ ದಾಹದ ನಡೆ, ಜೊತೆಗೆ ಶಿಕ್ಷಕರು ತಿಳಿಸಿದ ವಿಷಯಗಳತ್ತ ಪ್ರಾಮುಖ್ಯತೆ ಕೊಡಬೇಕು ಹಾಗೂ ಪೋಷಕರ ಸಹಾಯ ಪ್ರೋತ್ಸಾಹವಿದ್ದರೆ ಪ್ರಾಯಶಃ ಮೊದಲನೇ ಹತ್ತರಲ್ಲಿ ಉತ್ತೀರ್ಣನಾಗುವುದರಲ್ಲಿ ಎರಡು ಮಾತಿಲ್ಲ ಎಂದರು ಪ್ರೊ. ನಿರ್ವಾಣ್.
“ಹಾಗಾದರೆ ಎಲ್ಲಾ ವಿದ್ಯಾರ್ಥಿಗಳು ನೀವು ಹೆಳಿದಂತೆ ನಡೆದುಕೊಂಡರೆ ಎಲ್ಲರಿಗೂ ಮೊದಲನೇ ರ್ಯಾಂಕ್ ಕೊಡಬೇಕಾಗುತ್ತದೆ. ಮೊದಲನೆಯವರು ಯಾರು? ಕೊನೆಯವರು ಯಾರು ಎಂದು ಗುರುತಿಸಲು ಸಾಧ್ಯವೇ?” ಅಂದೆ.
“ವಿದ್ಯಾರ್ಥಿಗಳ ಮತ್ತು ಪೋಷಕರ ಮನದಲ್ಲಿ ಕಾಡುವಂತಹ ಪ್ರಶ್ನೆಯನ್ನೇ ಕೇಳಿದಿರಿ” ಅಂದರು.
ನಿಮಗೆ ಹಿಂದೆಯೇ ತಿಳಿಸಿದಂತೆ ಸೃಷ್ಟಿಕರ್ತನು ಗ್ರಹಿಕೆಯ ಶಕ್ತಿಯನ್ನು ಎಲ್ಲರಿಗೂ ಸರಿಸಮಾನವಾಗಿ ಕೊಟ್ಟಿರುತ್ತಾನೆ. ಆದರೆ ಹಲವಾರು ಕಾರಣಗಳಿಂದ ಮೊದಲನೆ ಮತ್ತು ಕೊನೆ ಎಂಬ ಬಿರುದುಗಳು ವಿದ್ಯಾರ್ಥಿಗಳಿಗೆ ಬಂದುಬಿಡುತ್ತವೆ. ನಿಮ್ಮ ಮಾಸ್ಟರ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಮೊದಲನೆ ಎಂಟು ಬಡ್ತಿ ಹೊಂದಿರುವ ಆಟಗಾರರು ಸೆಣೆಯಲು ಮುಂದಾಗುವರು. ಆ ಆಟಗಾರರ ಮನಸ್ಥಿತಿ ಅಂದರೆ ಗಾಬರಿ, ಆತಂಕ ಗಮನ ಮತ್ತು ಏಕಾಗ್ರತೆಗಳ ಆಟಗಾರರ ಒಂದು ಅಥವಾ ಎಂಟು ಎಂಬ ಬಡ್ತಿ ಅವಲಂಬಿಸಿರುತ್ತದೆ. ಎಲ್ಲರೂ ಸಮಾನರಾದ ಆಟಗಾರರೆ.
ಹಾಗೆಯೇ ವಿದ್ಯಾರ್ಥಿಗಳ ಒಳ ಮತ್ತು ಹೊರ ಒತ್ತಡಗಳು ಅವರವರ ಹಣೆಬರಹವನ್ನು ಹೇಳುತ್ತವೆ. ಈ ಒತ್ತಡವನ್ನು ಸುಲಭವಾಗಿ ಹೇಳುವುದಾದರೆ ‘ಆತಂಕ ಅಥವಾ ಗಾಬರಿ’ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ಹತ್ತರಿಂದ ಇಪ್ಪತ್ತರಷ್ಟು ವಿದ್ಯಾರ್ಥಿಗಳು ಒಂದೇ ಸಮನಾಗಿರುತ್ತಾರೆ. ಗಾಬರಿಯಂತಹ ಅನೇಕ ಕಾರಣಗಳು ಅವರ ಭವಿಷ್ಯವನ್ನು ಬದಲಿಸುತ್ತವೆ. ಇದನ್ನು ಪೋಷಕರು, ವಿದ್ಯಾರ್ಥಿಗಳು ಮತ್ತು ಗುರುಗಳು ಅರಿಯಬೇಕಾದ ವಿಷಯವಾಗಿರುತ್ತದೆ.
ಈ ಕಾರಣಗಳಿಂದಾಗಿ ನನ್ನ ವಿದ್ಯಾರ್ಥಿಗಳಿಗೆ ಹೇಳುವುದೆಂದರೆ, ‘ಆರಾಮ್’. ಆರಾಮಾಗಿದ್ದರೆ ಕೊನೆಯವರು ಮೊದಲನೆಯವರಾಗಬಹುದು. ಆರಾಮವಾಗಿರದಿದ್ದರೆ ಮೊದಲನೆಯವರು ಕೊನೆಯವನಾಗುತ್ತಾನೆ. ಪ್ರೊಫೆಸರರಿಗೆ ಧನ್ಯವಾದ ಅರ್ಪಿಸಿ ಹೊರಟೆ.
ಸ್ನೇಹಿತರೆ, ಪರೀಕ್ಷೆ ಎಂಬುದನ್ನು ಆಟವೆಂಬಂತೆ ಅಂದುಕೊಂಡರೆ ಮತ್ತು ಯಾವುದೇ ವಿದ್ಯಾರ್ಥಿ ಯಾವುದೇ ಸಮಯದಲ್ಲಿ ಆತಂಕವನ್ನು ದೂರ ಮಾಡುವುದರಲ್ಲಿ ಯಶಸ್ಸನ್ನು ಕಂಡುಕೊಂಡರೆ ಅವನು ಮೊದಲಿಗನಾಗುವುದರಲ್ಲಿ ಸಂಶಯವಿಲ್ಲ.
ವಿದ್ಯಾರ್ಥಿಗಳ ಆತಂಕ ಅಥವಾ ಗಾಬರಿ, ಪರೀಕ್ಷೆಗೆ ಸಂಬಂಧಿಸಿದ ಮತ್ತು ಕಲಿಕೆ ನ್ಯೂನತೆಗಳ ಬಗ್ಗೆ ನಮಗೆ ದೊಡ್ಡ ಪಟ್ಟಿಯೇ ದೊರೆಯುತ್ತದೆ.
ಮನೋ ವಿಜ್ಞಾನ, ಮನೋಶಾಸ್ತ್ರ ಹಾಗೂ ಮನೋ ವೈದ್ಯಕ್ಕೆ ಸಂಬಂಧಿಸಿದಂತೆ ಗ್ರಂಥ ಅಥವಾ ಪಠ್ಯ ಪುಸ್ತಕಗಳಲ್ಲಿ ದೊರೆಯುವವು. ಅವುಗಳ ಉಲ್ಲೇಖ ಸಾಂಕೇತಿಕವಾಗಿರುವುದರಿಂದ ಜನಸಾಮಾನ್ಯರಿಗೆ ಅವು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಆದ್ದರಿಂದ ನನ್ನ 24 ವರ್ಷಗಳ ಮನೋವೈದ್ಯ ವೃತ್ತಿಯ ಅನುಭವದಲ್ಲಿ ಕಂಡ, ಅರಿತ ಮತ್ತು ಸರಿಪಡಿಸಿದ ಕೆಲವು ಮಾದರಿ ಮನೋ ನ್ಯೂನತೆಗಳು ಹಾಗೂ ಅದರೊಳಗೆ ಅಡಗಿರುವ ಸಾರವನ್ನು ತಿಳಿಸುವೆನು.
ಮೊದಲನೆ ಘಟನೆ : ‘ಅಂಗಿ ಒಳಗೆ ಚೇಳು ಬಿಟ್ಟುಕೊಂಡಂತ’ ಪ್ರಸಂಗವೊಂದನ್ನು ನಿಮಗೆ ತಿಳಿಸಬೇಕು. ದ್ವಿತೀಯ ಪದವಿಪೂರ್ವ ಶಿಕ್ಷಣವನ್ನು ಕಲಿಯುತ್ತಿದ್ದ ವಿದ್ಯಾರ್ಥಿಯೊಬ್ಬ ತಾಯಿಯೊಂದಿಗೆ ಸಲಹೆಗೆಂದು ಬಂದ. ಆತನ ತಾಯಿಯ ಅಳಲೇನೆಂದರೆ ‘ಪರೀಕ್ಷೆ ಹತ್ತಿರ ಬರುತ್ತಿದೆ. ಅವನಿಗೆ ಏಕಾಗ್ರತೆ ಇಲ್ಲ, ಹೆದರುತ್ತಿದ್ದಾನೆ, ನಿದ್ರೆ ಮಾಡುತ್ತಿಲ್ಲ, ಭಯಭೀತನಾಗಿದ್ದಾನೆ ಮತ್ತು ಜೀವನವೇ ಬೇಡ ಎನ್ನುತ್ತಿದ್ದಾನೆ. ಏನು ಮಾಡುವುದು ಡಾಕ್ಟ್ರೇ’ ಎಂದು ಆತಂಕ ವ್ಯಕ್ತಪಡಿಸಿದರು.
ಆತನನ್ನು cross sectional mental examination ಗೆ ಅಳವಡಿಸಿದ ನಾನು ಆತನಲ್ಲಿ ಒಂದು ಮನೋನ್ಯೂನತೆ ಇರುವುದನ್ನು ಕಂಡುಕೊಂಡೆ.
ಈ ಸ್ಥಿತಿಗೆ ಮನೋವೈದ್ಯ ಶಾಸ್ತ್ರದಲ್ಲಿ ‘ಹೊಂದಾಣಿಕೆ ಭಾವ ನ್ಯೂನತೆ’Adjustment mood disorder ಎಂದು ಕರೆಯುತ್ತಾರೆ. ಮನೆ ಮತ್ತು ಶಾಲೆಯಲ್ಲಿ ಆತನು ಯಾರೊಂದಿಗು ಹೊಂದಿಕೊಳ್ಳುತ್ತಿರಲಿಲ್ಲ. ಅವನೊಬ್ಬನನ್ನೇ ನನ್ನ ಆಪ್ತ ಸಲಹಾ ಕೊಠಡಿಗೆ ಕರೆದು, ಸಲಹೆ ಮತ್ತು ಉಪದೇಶವನ್ನು ((counselling) ಕೊಡಲು ಮುಂದಾದೆ.
ಆಗತಾನೇ ನಾನು ಉಪನಿಷತ್ ಮತ್ತು ಪತಂಜಲಿಯನ್ನು ಓದಿದ್ದೆನಾದ್ದರಿಂದ ಜೀವ ಎಂದರೇನು? ಜೀವನ ಉದ್ದೇಶವೇನು? ಜೀವದ ಉಗಮ ಹಾಗೂ ಜೀವ ನಿರ್ವಹಣೆ ಹೇಗೆ ಇತ್ಯಾದಿಗಳಲ್ಲದೆ ವಿರಾಟ್ ವಿಶ್ವವು ಅಂದರೆ ವ್ಯಕ್ತ ಮತ್ತು ಅವ್ಯಕ್ತ ಎರಡನ್ನೂ ಹೊಂದಿರುವ ಅಗೋಬ್ರಹ್ಮನ ಕುರಿತು, ಈ ಬ್ರಹ್ಮಾಂಡ ಜೀವಕ್ಕೆ ಹೇಗೆ ಪೂರಕ? ಎಂಬಿತ್ಯಾದಿ ಆಧ್ಯಾತ್ಮದ ವಿಷಯವೂ ಸೇರಿದಂತೆ ನನಗೆ ಎಲ್ಲವೂ ಗೊತ್ತಿರುವ ಹಾಗೆ ದೊಡ್ಡ ಉಪನ್ಯಾಸವನ್ನೇ ನೀಡಿದೆ.
ವಾಸ್ತವವಾಗಿ, ನಾನು ತಿಳಿದುಕೊಂಡಿರುವುದು ಕೂಡ ಒಂದು ಅಣುತುಣಿಕಿನಷ್ಟು ಮಾತ್ರ. ಆ ವಿದ್ಯಾರ್ಥಿ ನಾನು ಹೇಳಿದ್ದನ್ನೆಲ್ಲಾ ಬಾಯಿ ಬಿಟ್ಟುಕೊಂಡು ಕೇಳಿದ ಮತ್ತು ಕತ್ತು ಆಡಿಸಿದ. ನಂತರ ಆತನ ತಾಯಿಯನ್ನು ಕರೆದು ಅವನ ಕುರಿತ ನನ್ನ ಅಭಿಪ್ರಾಯವನ್ನು ತಿಳಿಸಿ, ಕಿನ್ನತೆಗೆ ಸಂಬಂಧಿಸಿದ ಔಷಧಿಗಳನ್ನು ಬರೆದು ಕೊಟ್ಟೆ. ಇಬ್ಬರೂ ನನಗೆ ಕೈಮುಗಿದು ಕೃತಜ್ಞತೆ ತಿಳಿಸಿ ಹೊರಟರು.
ಮೂರು ದಿನಗಳ ನಂತರ ಬಂದ ಅವನ ತಾಯಿ ‘ಡಾಕ್ಟ್ರೇ, ನಿಮಗೆ ಕೊಟ್ಟಿದ್ದ ಸಲಹಾ ಶುಲ್ಕವನ್ನು ವಾಪಸು ಕೊಡಿ’ ಅಂದರು.
ನಾನು ಗಾಬರಿಯಿಂದ `ಏಕೆ’ ಅಂದೆ.
`ಅಲ್ಲಾ ಡಾಕ್ಟ್ರೇ, ನೀವೇನೋ ಭೂ ಮಂಡಲವ ಕುರಿತು ಮತ್ತು ಜೀವನದ ವಿವಿಧೋದ್ದೇಶವನ್ನು ಬೋಧಿಸಿದರಿ. ಮನೆಗೆ ಹೋದ ದಿನವೇ ವಿದ್ಯಾಭ್ಯಾಸದ ಶೈಕ್ಷಣಿಕ ಪುಸ್ತಕಗಳನ್ನೆಲ್ಲ ಒಂದೆಡೆ ಪೇರಿಸಿ. ಪುಸ್ತಕದಂಗಡಿಯಿಂದ ಕಾರ್ಲ್ ಸಾಗನ್ ಬರೆದಿರುವ ಖಗೋಳ ಶಾಸ್ತç ಕುರಿತು ಪುಸ್ತಕಗಳನ್ನು ಖರೀದಿ ಮಾಡಿ ತಂದಿರುವನು’ ಎಂದು ನೊಂದು ನುಡಿದರು.
ಇದಲ್ಲವೇ ಅಂಗಿ ಒಳಗೆ ಚೇಳು ಬಿಟ್ಟುಕೊಳ್ಳುವುದು ಅಂದರೆ? ಇಂಥ ಪರಿಸ್ಥಿತಿ ಮನೋವೈದ್ಯರಿಗಲ್ಲದೇ ಇತರೆ ರಂಗಗಳಲ್ಲಿಯೂ ಆಗಿರಬಹುದು. ಇದೊಂದು ಸ್ವ-ಅನುಭವವಷ್ಟೆ.
ಮತ್ತೊಂದು ಘಟನೆಯನ್ನು ಹೇಳುತ್ತೇನೆ ಕೇಳಿ.
ಪ್ರತಿಷ್ಠಿತ ಕಾನ್ವೆಂಟ್ ಒಂದರಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಯನ್ನು ಗಾಬರಿಗೊಂಡ ತಂದೆ ಮತ್ತು ಖಿನ್ನತೆಗೆ ಒಳಗಾದ ತಾಯಿ ನನ್ನಲ್ಲಿಗೆ ಕರೆದುಕೊಂಡು ಬಂದರು. ಒಬ್ಬನೇ ಮಗ, ಆ ಒಬ್ಬ ಮಗನಿಗಾಗಿ ಮೂರು ಹೆಣ್ಣು ಮಕ್ಕಳು ಇಷ್ಟವಿಲ್ಲದಿದ್ದರೂ ಹುಟ್ಟಿದ್ದರು. ಗಂಡು ಮಗನನ್ನು ಅತಿ ಪ್ರೀತಿ ಮತ್ತು ಮುದ್ದಿನಿಂದ ಸಾಕಿದ್ದರು.
ಬಹಳ ಜೋಪಾನವಾಗಿ, ಕಣ್ಣಲ್ಲಿ ಕಣ್ಣಿಟ್ಟು, ಸ್ವಲ್ಪವೂ ನೋವಾಗದ ಹಾಗೆ ನೋಡಿಕೊಳ್ಳುವುದು, ಕಷ್ಟವಾದರೂ ಕೇಳಿದ್ದನ್ನೆಲ್ಲಾ ಕೊಡಿಸುವುದು, ಕೊಡಿಸದಿದ್ದರೆ ಆ ಹುಡುಗ ಕೋಪಗೊಳ್ಳುವುದು, ಚಂಡಿ ಹಿಡಿಯುವುದು, ಬಹು ಬೇಗ ಅಳುವುದು, ಯಾವುದೇ ಕಾರಣದಿಂದ ಮನಸ್ಸಿಗೆ ಬೇಸರವಾದರೆ ತಂದೆ ತಾಯಿಯರನ್ನು ಹೈರಾಣಾಗಿಸುವನು. ಅಂದರೆ ನಾನು ಶಾಲೆಗೆ ಹೋಗಲ್ಲ ಎಂದು ಹೆದರಿಸುವುದು. ಎಷ್ಟೋ ವೇಳೆ ಆತ ತಪ್ಪು ಮಾಡಿದರೂ ಹೆತ್ತವರು ಬುದ್ಧಿ ಹೇಳುವುದಕ್ಕೆ ಭಯ ಮತ್ತು ಹಿಂಜರಿತವಾಗುವಂತೆ ಆ ಹುಡುಗನ ನಡವಳಿಕೆಯಾಗಿತ್ತು.
ಮೂರು ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ಮದುವೆಯಾಗಿ ದೂರದ ಊರುಗಳಲ್ಲಿರುವುದರಿಂದ ದಿನವೂ ಅವರಿಂದ ದೂರವಾಣಿ ಮೂಲಕವೇ ಬುದ್ಧಿ ಮಾತು ಹೇಳಿಸುವುದು. ತಂದೆ ಸದಾ ವಟವಟ ಎನ್ನುತ್ತಾ ಯಾವಾಗಲೂ ಬೇರೆ ಮಕ್ಕಳೊಂದಿಗೆ ಹೋಲಿಸಿ ಬೈಯ್ಯುವುದು. ತಾಯಿಯದು ಆತಂಕದ ಸ್ವಭಾವ. ಜೋಪಾನದಲ್ಲಿ ಶಾಲೆಗೆ ಕರೆದುಕೊಂಡು ಹೋಗುವುದು, ಕರೆತರುವುದು, ಶಿಕ್ಷಕರಿಗೆ ‘ಚೆನ್ನಾಗಿ ಓದಿಸಿ’ ಇವನ ಕಡೆ ಹೆಚ್ಚು ಗಮನ ಕೊಡಿ ಎಂದು ಮನವಿ ಮಾಡಿಕೊಳ್ಳುವುದು.
ನನ್ನಲ್ಲಿ ಪೋಷಕರ ದೂರೆಂದರೆ,
`ಯಾವಾಗಲೂ ಹೊಟ್ಟೆನೋವು ಅನ್ನುವನು. ವಾಂತಿ ಮಾಡುವನು. ತುಂಬಾ ಸಿಟ್ಟು, ಮುಂಗೋಪ. ನಮ್ಮನ್ನೇ ಹೊಡೆಯುವನಂತೆ ಬರುವನು. ಶಾಲೆಗೆ ಹೋಗುವುದಿಲ್ಲ ಎಂದು ಹೆದರಿಸುವನು. ಕೆಲವು ವೇಳೆ ಪ್ರಜ್ಞೆ ತಪ್ಪಿದವನಂತೆ ಬೀಳುವನು. ಎಷ್ಟೋ ಬಾರಿ ಮಾಮೂಲಿ ವೈದ್ಯರಿಗೆ ತೋರಿಸಿ, ಅಡ್ಮಿಟ್ ಮಾಡಿ ಹೊಟ್ಟೆನೋವು ಮತ್ತು ವಾಂತಿಗೆ ಔಷಧಿಯನ್ನು ಕೊಡಿಸಿದ್ದೇವೆ. ಎಲ್ಲಾ ತರಹದ ಸ್ಕ್ಯಾನ್ ಮಾಡಿಸಿದ್ದು ಆಯ್ತು. ನೀವೂ ನೋಡಿ ಸಾರ್, ರಿಪೋರ್ಟ್ ಎಲ್ಲವೂ ಸರಿಯಾಗಿದೆ ಅಂದಿದ್ದಾರೆ. ಆದರೂ ಸುಸ್ತು ಅನ್ನುತ್ತಾನೆ. ಭಯ ಇದ್ದೇ ಇದೆ. ಕ್ಲಾಸ್ ಟೆಸ್ಟ್ಗಳು ಬಂದರೆ ಸಾಕು, ಇವೆಲ್ಲಾ ಜಾಸ್ತಿ ಆಗುತ್ತದೆ’ ಎಂದರು.
ಇವನನ್ನು ಕೂಲಂಕುಶವಾಗಿ ಪರೀಕ್ಷಿಸಿದ ನಾನು ಒಂದಿಷ್ಟು ಲಜ್ಜೆ-ಸ್ವಭಾವದವನು, ಅಮ್ಮನ ಮಡಿಲಲ್ಲಿ ಬೆಳೆದವನು. ಸ್ನೇಹಿತರು ಕಡಿಮೆ. ಹೊರಗೆ ಹೋಗುವ ಅಭ್ಯಾಸಗಳನ್ನು ಬೆಳೆಸಿಕೊಂಡಿಲ್ಲ. ತನ್ನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಒಂದು ಚಿಕ್ಕ ಪ್ರಶ್ನೆಗೆ ಉತ್ತರಿಸಲು ಎರಡು, ಮೂರು ನಿಮಿಷಗಳನ್ನು ತೆಗೆದುಕೊಳ್ಳುವನು. ದಡ್ಡನಲ್ಲ. ಗಣಿತ ಮತ್ತು ವಿಜ್ಞಾನದಲ್ಲಿ ಆಸಕ್ತಿ ಕಡಿಮೆ. ತಂದೆಯ ಹಾವಭಾವ ಹಿಡಿಸುವುದಿಲ್ಲ. ಶಾಲೆ ಎಂದರೆ ಅವನದೇ ಒಂದು ಲೋಕ. ಹೇಳಿದ್ದನ್ನೇ ಹೇಳಿದರೆ ಕೋಪ. ಪದೇಪದೇ ಬುದ್ಧಿ ಹೇಳಿದರೆ ಇವನಿಗೆ ಬೈಯ್ದ ಹಾಗೆ ಭಾಸವಾಗುತ್ತೆ. ಚೆನ್ನಾಗಿ ಬೆಳೆಸಿರುವುದರಿಂದ ದಷ್ಟಪುಷ್ಟವಾಗಿದ್ದಾನೆ. ಇವನ ಶಾರೀರಿಕ ಬೆಳವಣಿಗೆ ಮತ್ತು ಬುದ್ಧಿಯು ಸರಿ ಇರುವುದು.
ಈತನಲ್ಲಿ ಗಾಬರಿಯಿಂದ Adrenaline ಎಂಬ ನರ ರಸ ಜಾಸ್ತಿ ಹೊರ ಸೂಸುವಿಕೆಯಿಂದ ಜಠರ ಮತ್ತು ಅನ್ನನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ Irritable bowel syndrome ಎಂಬ Functional ತೊಂದರೆಗೆ ಒಳಗಾಗಿರುವುದರಿಂದ ಅವನಿಗೆ ವಾಂತಿ, ವಾಂತಿಯಿಂದ ನೀರಿನ ಮತ್ತು ಲವಣಗಳ ಅಂಶ ಕಡಿಮೆಯಾಗಿ ಚಿಕಿತ್ಸೆ ಪಡೆಯುವುದು ಮಾಮೂಲಿಯಾಗಿದೆ. ಅವನು ಅರ್ಥೈಸಿಕೊಳ್ಳುವಲ್ಲಿ ಹಿಂದೆ ಇರುವುದರಿಂದ ವಿಪರೀತ ಕೋಪ, ಮಿತಿಮೀರಿದ ಸಿಟ್ಟು, ಹಲ್ಲು ಕಡಿಯುವಿಕೆ, ಓದು ಓದು ಎಂದು ಮನಸ್ಸಿಗೆ ಒತ್ತಡ ಹೇರಿದ್ದಕ್ಕೆ ಏನೂ ಹೇಳಿಕೊಳ್ಳಲಾಗದೆ ಜ್ಞಾನ ತಪ್ಪುವಿಕೆ (conversion reaciton) ಯಂತಹ ಅಸಹಜ ನಡವಳಿಕೆ ಬರುತ್ತದೆ ಎಂದೆಲ್ಲಾ ಪೋಷಕರಿಗೆ ತಿಳಿಸಿದೆ.
ನಂತರ ತಂದೆ ತಾಯಿ ಮತ್ತು ಆತನನ್ನು ಕುಳ್ಳಿರಿಸಿಕೊಂಡು ಸಲಹೆ ಮತ್ತು ಸೂಚನೆಯನ್ನು ನೀಡಿ:
`ಪದೇಪದೆ ಒತ್ತಡ ಹಾಕುವುದನ್ನು ನಿಲ್ಲಿಸಿ. ಇತರರೊಂದಿಗೆ ಹೋಲಿಸಿ ನೋಡಬೇಡಿ/ಬೈಯ್ಯಬೇಡಿ. ಮುಕ್ತವಾಗಿ ಇತರರೊಂದಿಗೆ ಬೆರೆಯಲು ಬಿಡಿ. ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಆಗಲಿ, ನಪಾಸಾದರೂ ಆಗಲಿ, ಪರೀಕ್ಷೆ ಎದುರಿಸಲಿ!’ ಎಂದೆಲ್ಲಾ ಹೇಳಿ ಗಾಬರಿ ಮತ್ತು ಖಿನ್ನತೆಗೆ ಸಂಬಂಧಿಸಿದ ಔಷಧಿಯನ್ನು ಕೊಟ್ಟ ಮೇಲೆ ಒಂದು ವಾರದಲ್ಲಿ ಸಹಜ ಸ್ಥಿತಿಗೆ ಬಂದ. ಪೋಷಕರೂ ಸಂತಸಪಟ್ಟರು.
ಎಲ್ಲವೂ ಪರಿಣಾಮ ಬೀರಿ ಸಾಮಾನ್ಯ ವಿದ್ಯಾರ್ಥಿಯಂತಾಗಿ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಅವನ ಮುಖದ ನಗು ನನ್ನ ವೃತ್ತಿ ಸಾರ್ಥಕ ಎನಿಸಿತು. ಇಂಥ ಸಾವಿರಾರು ಅನುಭವಗಳಿವೆ. ಸಮಯ ಬಂದಾಗ ಮೆಲುಕು ಹಾಕೋಣ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ