ರಾಮನಾಥಪುರ, ಏ.11 (RNP): ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಶೇ.93 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ.
ಪರೀಕ್ಷೆಗೆ ಹಾಜರಾದ 120 ವಿದ್ಯಾರ್ಥಿನಿಯರಲ್ಲಿ 111 ಮಂದಿ ಉತ್ತೀರ್ಣರಾಗಿದ್ದು, 38 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ, 55 ಪ್ರಥಮ ಶ್ರೇಣಿಯಲ್ಲಿ ಹಾಗೂ 11 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 8, ವಾಣಿಜ್ಯ ವಿಭಾಗದಲ್ಲಿ 27 ಹಾಗೂ ವಿಜ್ಞಾನ ವಿಭಾಗದಲ್ಲಿ 3 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಷಯವಾರು ಸಾಧನೆಯಲ್ಲಿ ವ್ಯವಹಾರ ಅಧ್ಯಯನ ಹಾಗೂ ಅರ್ಥಶಾಸ್ತ್ರದಲ್ಲಿ 3 ವಿದ್ಯಾರ್ಥಿನಿಯರು, ರಾಜ್ಯಶಾಸ್ತ್ರದಲ್ಲಿ 2 ಮತ್ತು ಇತಿಹಾಸದಲ್ಲಿ 1 ವಿದ್ಯಾರ್ಥಿನಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ವಿಭಾಗವಾರು ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ 49ರಲ್ಲಿ 45 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ.92, ವಾಣಿಜ್ಯ ವಿಭಾಗದಲ್ಲಿ 53ರಲ್ಲಿ 52 ಮಂದಿ ಉತ್ತೀರ್ಣರಾಗಿ ಶೇ.98.11 ಹಾಗೂ ವಿಜ್ಞಾನ ವಿಭಾಗದಲ್ಲಿ 18ರಲ್ಲಿ 14 ಮಂದಿ ಉತ್ತೀರ್ಣರಾಗಿ ಶೇ.78 ಫಲಿತಾಂಶ ಬಂದಿದೆ.



ವೈಯಕ್ತಿಕ ಸಾಧನೆಯಲ್ಲಿ ಕಲಾ ವಿಭಾಗದ ರಶ್ಮಿ 565 ಅಂಕ, ವಾಣಿಜ್ಯ ವಿಭಾಗದ ಲಕ್ಷ್ಮಿ ಬಿ.ಪಿ ಮತ್ತು ಯಶಸ್ವಿನಿ ಕೆ.ಆರ್ ತಲಾ 579 ಅಂಕ, ವಿಜ್ಞಾನ ವಿಭಾಗದ ಅಮೂಲ್ಯ ಬಿ.ಡಿ 576 ಅಂಕಗಳನ್ನು ಗಳಿಸಿ ಮೆಚ್ಚುಗೆ ಪಡೆದಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿಯೇ ಮೂವತ್ತು ವಿಭಾಗಗಳ ಟಾಪರ್ಗಳು ಇದೇ ಕಾಲೇಜಿನ ವಿದ್ಯಾರ್ಥಿನಿಯರೇ ಎಂಬುದು ವಿಶೇಷ.
ಈ ಸಾಧನೆಗೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಂ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ಪರಿಶ್ರಮ ಮತ್ತು ಉಪನ್ಯಾಸಕರ ಸಮರ್ಪಣೆಯೇ ಈ ಯಶಸ್ಸಿಗೆ ಕಾರಣವೆಂದು ಅವರು ತಿಳಿಸಿದ್ದಾರೆ.
ಪ್ರಾಂಶುಪಾಲರಾದ ಶ್ರೀಮತಿ ಸರ್ವಮಂಗಳ ಎಂ.ಎಸ್ ಅವರು ವಿದ್ಯಾರ್ಥಿನಿಯರು ಹಾಗೂ ಶ್ರಮಿಸಿದ ಎಲ್ಲಾ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸಹ ಶುಭಾಶಯ ಕೋರಿದರು.
