ಹಾಸನ: ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ಗಳ ಕೊರತೆ ಉಂಟಾಗಿ ಸಂಕಷ್ಟಕ್ಕೀಡಾಗಿದ್ದ ಸಣ್ಣ ಹೋಟೆಲ್ ಮಾಲೀಕರಿಗೆ ಆಹಾರ ಇಲಾಖೆ ಹಾಗೂ HP Gas ನೆರವಿಗೆ ಧಾವಿಸಿವೆ.
ಸಿಲಿಂಡರ್ ಕೊರತೆಯಿಂದ ನಗರದ ಎಂ.ಜಿ. ರಸ್ತೆಯ ಭಗತ್ಸಿಂಗ್ ಫುಡ್ಕೋರ್ಟ್ ಸೇರಿದಂತೆ ಅನೇಕ ಸಣ್ಣ ಹೋಟೆಲ್ಗಳು ಬಾಗಿಲು ಮುಚ್ಚಿ ವ್ಯಾಪಾರ ಸ್ಥಗಿತಗೊಳಿಸಿದ್ದವು. ಇದರಿಂದ ಸಣ್ಣ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
ಈ ನಡುವೆ, ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಗೃಹಬಳಕೆ ಸಿಲಿಂಡರ್ ಬಳಸುತ್ತಿದ್ದವರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರಿಂದ ಹೋಟೆಲ್ ಮಾಲೀಕರಲ್ಲಿ ಆತಂಕ ಹೆಚ್ಚಾಗಿತ್ತು.
ಸಂಕಷ್ಟದ ಪರಿಸ್ಥಿತಿಗೆ ಸ್ಪಂದಿಸಿದ ಆಹಾರ ಇಲಾಖೆ ಹಾಗೂ HP Gas ಸಂಸ್ಥೆ, ಫುಡ್ಕೋರ್ಟ್ನ ಸಣ್ಣ ಹೋಟೆಲ್ಗಳಿಗೆ ತಲಾ 5 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳನ್ನು ವಿತರಿಸಿತು. ಹಾಸನ ಗ್ಯಾಸ್ ಸಪ್ಲೈ ಮೂಲಕ ಕೇವಲ ₹613 ದರದಲ್ಲಿ ಸಿಲಿಂಡರ್ಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ನೀಡಲಾಗಿದೆ.
ಗ್ಯಾಸ್ ಖಾಲಿಯಾದ ಕೂಡಲೇ ಬುಕ್ಕಿಂಗ್ ಮಾಡಿದರೆ ತಕ್ಷಣವೇ ಮತ್ತೊಂದು ಸಿಲಿಂಡರ್ ನೀಡುವುದಾಗಿ ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ನೆರವಾದ ಆಹಾರ ಇಲಾಖೆ ಹಾಗೂ ಎಚ್ಪಿ ಗ್ಯಾಸ್ ಸಂಸ್ಥೆಗೆ ಹೋಟೆಲ್ ಮಾಲೀಕರು ಕೃತಜ್ಞತೆ ಸಲ್ಲಿಸಿದ್ದು, ಸಣ್ಣ ವ್ಯಾಪಾರಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ.