ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದ್ದು, ಪತಿಯನ್ನು ತ್ಯಜಿಸಿದ ಮಹಿಳೆ ತನ್ನ ಪ್ರಿಯಕರನಿಂದ ಕಾರಿನೊಳಗೆ ತಾಳಿ ಕಟ್ಟಿಸಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಸುಮಾರು ಎಂಟು ವರ್ಷಗಳ ಹಿಂದೆ ತನ್ನ ಸಂಬಂಧಿಯನ್ನೇ ಮದುವೆಯಾಗಿದ್ದ ಮಹಿಳೆ, ಇತ್ತೀಚೆಗೆ ಪ್ರಿಯಕರನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಹೋಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆ ಕುರಿತು ಕುಟುಂಬದವರ ನಡುವೆ ತೀವ್ರ ಗೊಂದಲ ಉಂಟಾಗಿ, ವಿಷಯವು ಗೊರೂರು ಪೊಲೀಸ್ ಠಾಣೆಗೆ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ರಾಜಿ ಪಂಚಾಯ್ತಿ ನಡೆಸಿ, ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.
ಆದರೆ, ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆ ಮತ್ತೆ ಗಂಡನ ಮನೆಗೆ ಹೋಗಬೇಕೆಂದು ಮನವಿ ಮಾಡಿಕೊಂಡು, ಕುಟುಂಬದವರ ನಂಬಿಕೆ ಗಳಿಸಿದ್ದಾಳೆ. ಇದನ್ನು ನಂಬಿದ ಪತಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.
ಆದರೆ, ಇದೇ ದಿನ ರಾತ್ರಿ ಮಹಿಳೆ ತನ್ನ ಪ್ರಿಯಕರನಿಗೆ ಸಂಪರ್ಕಿಸಿ, ಮತ್ತೊಮ್ಮೆ ಮನೆಯಿಂದ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ ಪತಿ ಮತ್ತೊಮ್ಮೆ ಮೋಸ ಹೋಗಿರುವುದು ತಿಳಿದುಬಂದಿದೆ.
ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
