
ಬೆಂಗಳೂರು: ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ಸಮುದ್ರಮಟ್ಟದಲ್ಲಿ ಉಂಟಾದ ಚಂಡಮಾರುತ ಪರಿಚಲನೆಯ ಪ್ರಭಾವದಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮಳೆ ದಾಖಲಾಯಿತು. ಬೆಂಗಳೂರಲ್ಲಿ 2025ರ ವರ್ಷದ ಮೊದಲ ಮಳೆ ಸುರಿದಿದೆ. ಬಿಸಿಲ ಬೇಗೆಗೆ ಕಾದ ನೆಲಕ್ಕೆ ವರ್ಷದ ಮಳೆ ತಂಪರೆದಿದೆ. ನಗರದ ವಿವಿಧ ಕಡೆಗಳಲ್ಲಿ ಗಂಟೆಗಳ ಕಾಲ ತುಂತುರು ಮತ್ತು ಸಾಧಾರಣ ಮಳೆ ಆಗಿದೆ. ಈ ಮಳೆ ಮುಂದಿನ ಮೂರು ದಿನ ಹೀಗೆ ಮುಂದುವರಿಯುವ ಸಾಧ್ಯತೆ ಇದೆ.
ಶುಷ್ಕ ಹವಾಮಾನದಿಂದ ಕೂಡಿದ್ದ ಬೆಂಗಳೂರಿಗೆ ಆಗಮಿಸಿದ 2025 ರ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ನೆರೆಯ ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಪೂರ್ವ ನೈಋತ್ಯ ಮುಂಗಾರು ಮಳೆ ದಾಖಲಾಗಿದೆ. ಮಂಗಳವಾರ ಸಂಜೆ ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಗುಡುಗು ಮತ್ತು ಮಿಂಚು ಸಮೇತವಾಗಿ ಜೋರಾಗಿ ಸುರಿದಿದೆ.
ಇಂದು ಮಧ್ಯಾಹ್ನದ ನಂತರ ನಗರಾದ್ಯಂತ ಮೋಡ ಕವಿದ ವಾತವರಣ ಕಂಡು ಬಂತು. ಸಂಜೆ ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶ, ಮಲ್ಲೇಶ್ವರಂ, ಶೇಷಾದ್ರಿಪುರಂ, ಬನಶಂಕರಿ, ಜಯನಗರ, ರಾಜಾಜಿನಗರ, ವಿಜಯನಗರ, ಇಂದಿರಾನಗರ, ಹಲಸೂರು, ಆವಲಹಳ್ಳಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಉತ್ತಮ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ. ಬಿಸಿಲಿಗೆ ತತ್ತರಿಸಿದ್ದ ನಗರವಾಸಿಗಳು ಮಳೆ ಕಂಡು ಫುಲ್ ಖುಷ್ ಆಗಿದ್ದಾರೆ. ಮಳೆ ಕುರಿತ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ತಾಪಮಾನ ಇಳಿಕೆ, ಮೋದ ಕವಿದ ವಾತಾವರಣ ಕೋರಮಂಗಲ, ಬಿಟಿಎಂ ಬಡಾವಣೆ, ಮಾತ್ತಹಳ್ಳಿ, ಲಾಲ್ಬಾಗ್, ಡೈರಿ ವೃತ್ತ, ಹೆಬ್ಬಾಳ, ನಾಯಂಡಹಳ್ಳಿ, ನೆಲಮಂಗಲ, ಯಲಹಂಕ, ದೊಮ್ಮಲೂರು, ರಾಜಮಹಲ್ ಗುಟ್ಟಹಳ್ಳಿ, ಹುಳಿಮಾವು ಸೇರಿದಂತೆ ಬೆಂಗಳೂರಿನಲ್ಲಿ ತಾಪಮಾನ ಇಳಿಕೆ ಆಗಿದೆ. ನಗರದಲ್ಲಿ ಸಂಜೆ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಿದೆ. ಗರಿಷ್ಠ ತಾಪಮಾನ 31ಕ್ಕೆ ಇಳಿಕೆ ಆಗಿದೆ ಎಂದು ಹವಾಮಾನ ಇಲಾಖೆ ಅಪ್ಡೇಟ್ ಮಾಹಿತಿ ನೀಡಿದೆ.
ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದಿಂದ ತಮಿಳುನಾಡು, ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಅಲ್ಲಿ ಭಾರೀ ಮಳೆ ನಿರೀಕ್ಷೆ ಇದೆ.
ಬೆಂಗಳೂರಿನಲ್ಲೂ ಸಹ ಮುಂದಿನ ಮೂರು ದಿನ ಇದೇ ರೀತಿ ವಾತಾವರಣ ಕಂಡು ಬರಲಿದೆ. ಬುಧವಾರ ಬೆಳಗ್ಗೆಯಿಂದಲೇ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಜೋರು ಮಳೆ ಬರುವ ಸಂಭವವಿದೆ. ಇದರ ಹೊರತು ಭಾರೀ ಮಳೆ ಮುನ್ಸೂಚನೆ ಸದ್ಯಕ್ಕೆ ಇಲ್ಲ ಎಂದು ತಿಳಿದು ಬಂದಿದೆ.