ಶ್ಲೋಕ – 12
ದಿವಿ ಸೂರ್ಯಸಹಸ್ರಸ್ಯ ಭವೇದ್ ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ ॥೧೨॥
ದಿವಿ ಸೂರ್ಯ ಸಹಸ್ರಸ್ಯ ಭವೇತ್ ಯುಗಪತ್ ಉತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸ ತಸ್ಯ ಮಹಾತ್ಮನಃ – ಸಾವಿರ ಸಾವಿರ ಸೂರ್ಯರು ಒಮ್ಮೆಲೆ ಮುಗಿಲಲ್ಲಿ ಮೂಡಿಬಂದರೆ, ಅಂಥ ಬೆಳಕು ಆ ಮಹಾತ್ಮನ ಬೆಳಕಿಗೆ ಸರಿಗಟ್ಟಿತೇನೊ !
ಸಂಜಯ ಹೇಳುತ್ತಾನೆ: “ಸಾವಿರಾರು ಸೂರ್ಯರು ಆಕಾಶದಲ್ಲಿ ಒಮ್ಮೆಗೆ ಉದಿಸಿದರೆ ಎಷ್ಟು ಪ್ರಕಾಶಮಾನವಾಗಿರುತ್ತದೋ, ಅಂಥಹ ಪ್ರಕಾಶಮಾನನಾಗಿ ಭಗವಂತ ಕಾಣಿಸಿದ” ಎಂದು. ಯೋಗಿಗಳಿಗೆ ಭಗವಂತ ಒಳಗಣ್ಣಿನಲ್ಲಿ ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಎಷ್ಟು ಪ್ರಖರವಾಗಿರುತ್ತದೋ ಅಷ್ಟು ಪ್ರಖರವಾಗಿ ಕಾಣಿಸುತ್ತಾನೆ. ಆದರೆ ‘ಚಂದ್ರಾಂಶು’ವಾದ ಭಗವಂತ ಅಷ್ಟೇ ತಂಪು ಮತ್ತು ಅಹ್ಲಾದಮಯ. ಭಗವಂತ ಸೂರ್ಯನಂತೆ ಪ್ರಖರ ಆದರೆ ಚಂದ್ರನಂತೆ ತಂಪು. ಇಷ್ಟು ಪ್ರಕಾಶಮಾನನಾಗಿರುವ ಭಗವಂತನ ರೂಪವನ್ನು ಯಾರೂ ಎಂದೆಂದೂ ತಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ.
