ಹಾಸನ: ಆಶ್ರಯ ಯೋಜನೆಯಡಿ ಕಾನೂನು ಬದ್ಧ ಹಕ್ಕುಪತ್ರ ಹೊಂದಿರುವ ಮನೆಗಳನ್ನು ಹಾನಿಗೊಳಿಸಿರುವುದನ್ನು ಖಂಡಿಸಿ, ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಒದಗಿಸುವಂತೆ ಆಗ್ರಹಿಸಿ ರೈತ ಸಂಘದ ಹೋರಾಟ ೮ ದಿನವು ಡಿಸಿ ಕಚೇರಿ ಆವರಣದಲ್ಲಿ ಮುಂದುವರೆಯಿತು.
ಬೇಡಿಕೆ ಈಡೇರದಿದ್ದರೇ ನಮ್ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಭೆ ಸೇರಿ ಇಲ್ಲಿಂದ ವಿಧಾನಸೌದದ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬು ಎಚ್ಚರಿಸಿದರು.
ರೈತ ಸಂಘದ ಬಾಬು ಮಾತನಾಡಿ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಎಬಿಎಂ ಹಳ್ಳಿಯ ನಿವಾಸಿಗಳಿಗೆ ೧೯೯೧-೯೨ರಲ್ಲಿ ತಹಶೀಲ್ದಾರ್ ಅವರಿಂದ ಆಶ್ರಯ ಯೋಜನೆ (ಐ&ಆ ೩೭/೯೧-೯೨) ಅಡಿಯಲ್ಲಿ ಕಾನೂನು ಬದ್ಧವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು ಎಂದು ವಿವರಿಸಿದರು.
ಆ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ವಾಸವಾಗಿದ್ದೇವೆ ಎಂದು ತಿಳಿಸಿದರು. ಆದರೆ ಇತ್ತೀಚೆಗೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಹಾಗೂ ಕಾನೂನು ಪ್ರಕ್ರಿಯೆ ಅನುಸರಿಸದೆ ಮನೆಗಳಿಗೆ ಹಾನಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕೆಲ ಮನೆಗಳ ಗೋಡೆಗಳನ್ನು ಕೆಡವಲಾಗಿದ್ದು, ಕೆಲವು ಮನೆಗಳನ್ನು ತೆರವುಗೊಳಿಸಲು ಯತ್ನಿಸಲಾಗಿದೆ. ಇದರಿಂದ ಕುಟುಂಬಗಳು ಆತಂಕದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ ಎಂದರು. ತಾಲ್ಲೂಕು ಆಡಳಿತವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹಕ್ಕುಪತ್ರದಾರರ ಮೇಲೆ ಅನ್ಯಾಯ ಮಾಡುತ್ತಿದೆ. ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ, ಅವರಿಗೆ ಸಹಕಾರ ನೀಡುತ್ತಿರುವುದು ಅಸಂವಿಧಾನಿಕ ನಡೆ ಎಂದು ಕಿಡಿಕಾರಿದರು.
ಜಾಗದ ಸರಿಯಾದ ಅಳತೆ ಹಾಗೂ ಗುರುತುಪಡಿಸುವ ಕೆಲಸ ಮಾಡದೇ, ನಿಜವಾದ ಹಕ್ಕುದಾರರನ್ನು ತೊಂದರೆಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಘಟನೆ ನಮ್ಮ ಮೂಲಭೂತ ಹಕ್ಕುಗಳ ಮೇಲಿನ ಸ್ಪಷ್ಟ ಹಲ್ಲೆಯಾಗಿದ್ದು, ಬಡ ಕುಟುಂಬಗಳನ್ನು ಅನಾಥರನ್ನಾಗಿ ಮಾಡುವ ಪ್ರಯತ್ನವಾಗಿದೆ. ತಕ್ಷಣವೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಮನೆಗಳ ಧ್ವಂಸ ಕಾರ್ಯವನ್ನು ತಕ್ಷಣ ನಿಲ್ಲಿಸಲು ಆದೇಶ ನೀಡಬೇಕು. ಈಗಾಗಲೇ ಹಾನಿಗೊಳಿಸಿದ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಹಕ್ಕುಪತ್ರದ ಆಧಾರದ ಮೇಲೆ ವಾಸಸ್ಥಳವನ್ನು ರಕ್ಷಣೆ ಮಾಡಬೇಕು, ಯಾವುದೇ ಸಾರ್ವಜನಿಕ ಯೋಜನೆಗಾಗಿ ಜಾಗ ಬೇಕಾದಲ್ಲಿ ಕಾನೂನುಬದ್ಧ ಪರಿಹಾರ ಹಾಗೂ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿದರು.
ನಮ್ಮ ನ್ಯಾಯಯುತ ಬೇಡಿಕೆ ಈಡೇರದಿದ್ದರೇ ಕೆಲ ದಿನಗಳಲ್ಲೆ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಸಭೆ ಸೇರಿ ಇಲ್ಲಿಂದ ವಿಧಾನಸೌದದ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಪವಿತ್ರ, ಅದರ ಅಕ್ಮಲ್ ಪಾಷಾ, ವಿಠಲ್ ಸೇರಿದಂತೆ ಹಲವಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು. Look
