
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಅಂತರ್ಜಾಲ ಅವಾಂತರ
ಏನ್ ಡಾಕ್ಟ್ರೇ, ಅಪರೂಪಕ್ಕೆ ಈ ಕಡೆ ಬಂದ್ರಿ?
ಏನಿಲ್ಲಾ, ಡಾಕ್ಟರ್ ಸಾಹೇಬರೇ, ನಿಮಗೆ ಗೊತ್ತಿರಬಹುದು.
ನಾನು ದಿನಪತ್ರಿಕೆಯೊಂದಕ್ಕೆ ಅಂಕಣ ಬರಿತಿದ್ದೀನಿ.
ಹೌದೌದು, ನೋಡಿದ್ದೇನೆ. ಪರಿವಾಗಿಲ್ಲ. ಚೆನ್ನಾಗಿ ಬರ್ತಿದೆ. ಈಗೇನ್ ಸಮಾಚಾರ? ಮುಂದಿನ ಅಂಕಣದಲ್ಲಿ ‘ಮನೋಚಿತ್ರಣ’ವನ್ನು ಕುರಿತು ಬರೆಯಬೇಕೆಂದಿದ್ದೇನೆ. ನೀವು ಹಿರಿಯ ಮನೋವೈದ್ಯರು ಮತ್ತು ತಜ್ಞರು. ಹಾಗಾಗಿ ನನ್ನ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಮಾಹಿತಿಯೇನಾದರೂ ಕೊಡುತ್ತೀರೇನೊ ಅಂತ ನಿಮ್ಮಲ್ಲಿಗೆ ಬಂದೆ.
ದಿನ ಬೆಳಗಾದರೆ ಈಗ ಎಲ್ಲಾ ವಿಷಯಗಳೂ ಪುಸ್ತಕಗಳ ರೂಪದಲ್ಲಿ ಸಿಗುತ್ತದೆಯಲ್ಲಪ್ಪ ಅಂದರು. ಸಿಗುತ್ತವೆ. ಆದರೆ ಅವು ನನಗೆ ಮತ್ತು ಇತರೆ ವೈದ್ಯ ಸಮಾನರಾದವರಿಗೆ ಮಾತ್ರ ಅರ್ಥವಾಗುತ್ತವೆ. ಆದರೆ ಜನಸಾಮಾನ್ಯರಿಗೆ ಅಂದೆ. ಈಗ ಇಂಟರ್ನೆಟ್ (ಅಂತರ್ಜಾಲ)ದಲ್ಲಿ ಎಲ್ಲವೂ ಲಭ್ಯವಿದೆಯಲ್ಲಪ್ಪ ಎಂದು ಹೇಳಿ, ಅವರಿಗೆ ಆದ ಒಂದು ಸ್ವಾರಸ್ಯಕರವಾದ ಅನುಭವವನ್ನು ಪ್ರಸ್ತಾಪಿಸಿದರು.
`ಒಂದು ಮಗುವಿನ ಪೋಷಕರು ಅದರ ಚಿಕಿತ್ಸೆಗಾಗಿ ನನ್ನ ಚಿಕಿತ್ಸಾಲಯಕ್ಕೆ ಕರೆತಂದಿದ್ದರು. ಆ ಮಗುವಿನ ಚರಿತ್ರೆಯನ್ನು ಕೇಳಿ, ಪರೀಕ್ಷಿಸಿ, ಒಂದು ನರಕ್ಕೆ ಸಂಬಂಧಿಸಿದ ರೋಗದ ನಿರ್ಣಯಕ್ಕೆ ಬಂದೆ. ಈ ರೋಗವು ಮೆದುಳಿನ ಟೆಂಪೊರಲ್ ಪಟಿಲದಲ್ಲಿ ಮಿಸಿಯಲ್ ಸ್ಕ್ಲೆರೋಸಿಸ್ನಿಂದಾಗಿ ಅತಿಯಾದ ವಿದ್ಯುತ್ನ್ನು ಉತ್ಪಾದಿಸಿ ಮಿದುಳಿನ ಟೆಂಪೊರಲ್ ಪಟಿಲತೆಯ ಕಾರ್ಯ ನಿರ್ವಹಣೆಯಲ್ಲಿ ಅಡ್ಡಿಪಡಿಸುತ್ತಿತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಟೆಂಪೊರಲ್ ಲೋಬ್ ಎಪಿಲಪ್ಸಿ’ ಎನ್ನುತ್ತೇವೆ.
ಈ ನಿರ್ಣಯಕ್ಕೆ ಬಂದೆ. ಸಾಮಾನ್ಯವಾಗಿ ಈ ಕಾಯಿಲೆಗೆ ತುತ್ತಾದವರ ಸ್ವರೂಪ ಮತ್ತು ಲಕ್ಷಣಗಳನ್ನು ಗಮನಿಸಿ, ಸಾಮಾನ್ಯ ವೈದ್ಯರು ಇಂತಹದೇ ಕಾಯಿಲೆ ಎಂದು ನಿರ್ಣಯಕ್ಕೆ ಬರುವುದು ಅಥವಾ ಪತ್ತೆ ಹಚ್ಚುವುದು ಕಷ್ಟದ ಕೆಲಸ. ನಗರದಲ್ಲಿಯೇ ನರ ರೋಗ ತಜ್ಞರಿಗೆ ತೋರಿಸಿದ್ದರೂ ಆ ರೋಗಿಗೆ ಈ ಬಾಧೆಯು ನಿಯಂತ್ರಣಕ್ಕೆ ಬಾರದಿದ್ದರಿಂದ ನನ್ನಲ್ಲಿಗೆ ಕರೆದುಕೊಂಡು ಬಂದಿದ್ದರು.
ಈ ಅಪಸ್ಮಾರಕ್ಕೆ (ಫಿಟ್ಸ್) ವಿವಿಧ ರೀತಿಯ ಔಷಧಿಗಳು ಲಭ್ಯವಿದ್ದರೂ, ಲಗತ್ತಾದ ಔಷಧಿ Carbamegapine. ಆದರೆ ಈ ಔಷಧಿಯ ನಕಾರಾತ್ಮಕ ಗುಣವೆಂದರೆ, ಕೆಲವರಿಗೆ ಅಡ್ಡ ಪರಿಣಾಮಗಳಾಗುತ್ತವೆ (Alergy). ಆದ್ದರಿಂದ ಸಾಮಾನ್ಯವಾಗಿ ಈ ಔಷಧಿಯನ್ನು ಯಾರೂ ಬರೆದು ಕೊಡುವುದಿಲ್ಲ. ಹಾಗಾಗಿ ಅವನಿಗೂ ಯಾರೂ ಬರೆದು ಕೊಟ್ಟಿರಲಿಲ್ಲ. ನಾನು ರೋಗಿಯ ತಂದೆಯನ್ನು ಕರೆದು, ಈ ಔಷಧಿಯ ಗುಣಗಳನ್ನೆಲ್ಲಾ ತಿಳಿಸಿ, ಕೊಟ್ಟು ಕಳುಹಿಸಿದೆ’ ಮೂರು ದಿನಗಳ ನಂತರ ಆ ಮಗುವಿನ ಸೋದರ ಮಾವನಿಂದ ನನ್ನ ಮೊಬೈಲ್ಗೆ ಕರೆ ಬಂತು.
‘ಏನ್ ಡಾಕ್ಟ್ರೇ,, ಇಂಥ ಔಷಧಿಯನ್ನು ಕೊಟ್ಟು ನಮ್ಮ ಮಗುವನ್ನು ಸಾಯಿಸಬೇಕು ಅಂದ್ಕೊಂಡಿದ್ದೀರಾ?’ ಏರು ಧ್ವನಿಯಲ್ಲಿ ಕೇಳಿದ. ನನಗೆ ಯಾರು ಏನು ಎತ್ತ ಹೇಗೆ ಎಂದು ತಿಳಿಯದೆ ಒಂದು ಕ್ಷಣ ಗಾಬರಿಯಾದೆ. ಸಾವರಿಸಿಕೊಂಡು ಕೂಲಂಕುಷವಾಗಿ ವಿಚಾರಿಸಿದೆ. ಆತ ಒಂದು ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವುದಾಗಿಯೂ ಇಂಟರ್ನೆಟ್ (ಅಂತರ್ಜಾಲ)ನಲ್ಲಿ Carbamegapine ಔಷಧಿಯ ಬಗ್ಗೆ ತಿಳಿದು ಕರೆ ಮಾಡಿರುವುದಾಗಿಯೂ ತಿಳಿಸಿದೆ.
ಆತನಿಗೆ ಸಮಾಧಾನವಾಗಿ ಉತ್ತರಿಸಿ ನಾನೂ ಸಹ ಅಂತರ್ಜಾಲದಲ್ಲಿರುವ ಮಾಹಿತಿ ಕಡೆ ಕಣ್ಣಾಯಿಸಿದೆ. ಈ ಔಷಧಿಯ ಉಪಯೋಗಕ್ಕಿಂತ ಅದರ ಬಗ್ಗೆ ಅಡ್ಡಪರಿಣಾಮ ಮತ್ತು ದುಷ್ಪರಿಣಾಮಗಳ ಬಗ್ಗೆ ತುಂಬಿಹೋಗಿತ್ತು. ಹಾಗಾಗಿ ಆತ ಹೆದರಿ ನನಗೆ ಕರೆ ಮಾಡಿ ಬೆದರಿಸಿದ್ದ. ಆದರೂ ನಾನು ಅದೇ ಮಾತ್ರೆಯನ್ನು ಮುಂದುವರೆಸಲು ತಿಳಿಸಿ, ಅದರಿಂದ ಅಡ್ಡ ಪರಿಣಾಮ ಆದಲ್ಲಿ ನನ್ನಲ್ಲಿ ಕರೆತರುವಂತೆ ತಿಳಿಸಿದೆ. ಆದರೆ ಅಂತಹದ್ದೇನೂ ಆಗಿರಲಿಲ್ಲ. ಮುಂದಿನ ಸಾರಿ ಬಂದಾಗ ಆತನ ರೋಗ ನಿಯಂತ್ರಣಕ್ಕೆ ಬಂದಿತ್ತು’ ಎಂದರು.
ಸ್ನೇಹಿತರೇ, ನೋಡಿ ವೈದ್ಯರ ಪರಿಯನ್ನು. ನಿಜವಾಗಿಯೂ ಆತಂಕಕ್ಕೊಳಗಾಗುವ ಸಂದರ್ಭವಲ್ಲವೇ? ಈ ಕಾರಣಕ್ಕಾಗಿಯೇ ಡಾ. ಹುಚ್ಚುರಾವ್ ಅವರು ನನಗೆ ಏನೂ ಹೇಳುವುದಿಲ್ಲ. ಹೇಳಿದ್ದನ್ನು ಅಂತರ್ಜಾಲದಲ್ಲಿ ಹುಡುಕಿ ಕರೆ ಮಾಡುವರು ಎಂದು.
ಹೀಗೆ ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳು ಚಿಕಿತ್ಸಾ ವಿಷಯದಲ್ಲಿ ಗೊಂದಲವನ್ನೂ, ಪೂರ್ಣವಾಗಿ ತಿಳಿಯದಿದ್ದವರಿಗೆ ತೊಂದರೆಯನ್ನೂ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.

ಡಾ. ಹುಚ್ಚುರಾವ್ ಅವರು ನನ್ನ ಅಭಿಲಾಷೆಯ ಮೇರೆಗೆ ಮನೋ ಚಿತ್ರಣವನ್ನು ವಿವರಿಸುತ್ತಾ, ನೋಡಿ, ನಾನು ಪುಸ್ತಕದಲ್ಲಿರುವಂತಹ ಬದನೆಕಾಯಿಯನ್ನು ಹೇಳುವುದಿಲ್ಲ. ಅದು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಓದುಗರಿಗೆ ಅರ್ಥವಾಗುವಂತಹ ಮನೋ ವ್ಯಾಕುಲತೆಗಳ ಚಿತ್ರಣವನ್ನು ಮತ್ತು ಅದರ ವಿಂಗಡಣೆಯನ್ನು ಸರಳವಾಗಿ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಬಹುದು.
ಅವುಗಳೆಂದರೆ:
ಮನೋ ನ್ಯೂನತೆ, ಮನೋ ವಿಕಲತೆ,
ಮನೋ ವ್ಯಸನತೆ, ಮನೋ ಮಂಧತೆ
ಮನೋ ನ್ಯೂನತೆಯಡಿ ನಡವಳಿಕೆಗೆ, ವ್ಯಕ್ತಿತ್ವಕ್ಕೆ, ಅರ್ಥೈಸಿಕೊಳ್ಳುವಿಕೆಗೆ, ನರ ರಚನಾ ವಿಧಾನಕ್ಕೆ ಸಂಬಂಧಪಟ್ಟ ಮನೋವ್ಯಾಧಿಗಳು ಒಳಗೊಂಡಿರುತ್ತವೆ.
ಮನೋ ವಿಕಲತೆಯೇ ನಿಜವಾದ ಮನೋವ್ಯಾಕುಲತೆ. ಬುದ್ಧಿ ವಿಕಲ್ಪ ಇದರಲ್ಲಿ ಬಹುಮುಖ್ಯವಾಗಿ ಉನ್ಮಾದ, ಖಿನ್ನತೆ, ಸ್ಕೆಜೋಫ್ರೀನಿಯಗಳು ಸೇರುತ್ತವೆ. ಈ ಮಧ್ಯೆ ವಿವಿಧ ಲಕ್ಷಣಗಳ ಈ ಮನೋ ವ್ಯಾಕುಲತೆಯಲ್ಲಿ ಒಳಗೊಂಡಿರುತ್ತವೆ.
ಮನೋ ವ್ಯಸನಕ್ಕೆ ಸಂಬಂಧಿಸಿದಂತೆ ಮದ್ಯಪಾನ, ಧೂಮಪಾನ, ತಂಬಾಕು ಪದಾರ್ಥಗಳು, ಗುಟ್ಕಾದಂತಹ ಚಟಗಳು, ಇಂಧನಗಳಿಂದ ಪೆಟ್ರೋಲ್, ಡೀಸೆಲ್ ಮತ್ತು ಕರಗುವ ದ್ರಾವಕಗಳಾದ Ink Remover ಅಥವಾ ಉಗುರು ಬಣ್ಣ ((Nail Polish))ಗಳ ತರದ ರಸಾಯನಿಕಗಳು ಖುಷಿ, ಉನ್ಮಾದ ಮತ್ತು ಬರಿಸುವಂತಹ ವಿವಿಧ ಔಷಧಿಗಳು ಹಾಗೂ ವಸ್ತುಗಳು ಸಹ ಸೇರಿರಬಹುದು. ಇತ್ತೀಚೆಗೆ ಲೈಂಗಿಕತೆ ಸೇರಿರುವ ಸಾಧ್ಯತೆ ಇದೆ.
ಮನೋ ಮಂಧತೆ ಮತ್ತು ಬುದ್ಧಿ ಮಂಧತೆ ಎರಡೂ ಒಂದೇ. ಇದಕ್ಕೆ ಕಾರಣಗಳು ಅನೇಕ. ಜೀವ ತಂತುಗಳ ಕಾರ್ಯ, ಅನುವಂಶೀಯತೆ, ನಿರ್ವಹಣೆಯ ತೊಂದರೆ, ಶರೀರದ ಅಂಗ ಮತ್ತು ಬಲವರ್ಧನೆಗೆ ಸಂಬಂಧಪಟ್ಟಂತಹ ಚಪಾಚಪತೆ ನ್ಯೂನತೆ ಮತ್ತು ಅದರ ಸಂಸ್ಕರಣಾ ನ್ಯೂನತೆಗಳಿಂದ ಮೆದುಳಿನ ಬೆಳವಣಿಗೆ ಹಾಗೂ ವೃದ್ಧಿಯು ಆಗದೆ ಮನೋ ಮಂಧತೆಗಳನ್ನು ಕಾಣಬಹುದು.
ಇವುಗಳೆಲ್ಲ ಒಂದು ರೀತಿಯ ಮನೋ ವಿಂಗಡಣೆಗಳಾದರೆ, ನರ ರೋಗ ಮತ್ತು ನರಶಾಸ್ತ್ರ ಅಣ್ಣ ತಮ್ಮಂದಿರ ಹಾಗೆ. ಇವುಗಳ ತೊಂದರೆಗಳಿಂದಲೂ ಸಹ ಮನೋ ವ್ಯಾಕುಲತೆಗಳನ್ನು ಕಾಣಬಹುದಾಗಿದೆ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ