ಬೇಲೂರು: ತಾಲ್ಲೂಕಿನ ಚೀಕನಹಳ್ಳಿ ಗ್ರಾಮದ ಸುತ್ತಮುತ್ತ ನರಹಂತಕವಾಗಿ ವರ್ತಿಸುತ್ತಿರುವ ಒಂಟಿಕೊರೆ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿ ಎರಡನೇ ದಿನದ ಕಾರ್ಯಾಚರಣೆಯನ್ನು ಇಂದು ಬೆಳಿಗ್ಗೆ ಆರಂಭಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಮ್ಕಿ ಆನೆಗಳಾದ ಭೀಮ, ಶ್ರೀಕಂಠ, ಧನಂಜಯ, ಅಯ್ಯಪ್ಪ, ಶ್ರೀರಾಮ ಹಾಗೂ ಹರ್ಷ ಭಾಗವಹಿಸಿವೆ. ನಿನ್ನೆ ನಡೆದ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಇಂದು ಬೆಳಗ್ಗೆಯೇ ಸಿಬ್ಬಂದಿ ಕಾಡಾನೆಯ ಚಲನವಲನವನ್ನು ಪತ್ತೆಹಚ್ಚಿ ಟ್ರ್ಯಾಕ್ ಮಾಡಿದ್ದಾರೆ.

ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಸಿಬ್ಬಂದಿ ಮುಂದಾಗುತ್ತಿದ್ದಂತೆಯೇ, ಒಂಟಿಕೊರೆ ಕಾಡಾನೆ ಚತುರತೆಯಿಂದ ತಪ್ಪಿಸಿಕೊಂಡು ಕಾಡಿನೊಳಗೆ ಓಡಿಹೋಗಿದೆ. ಇದರಿಂದ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಂಡಿದ್ದು, ಇಟಿಎಫ್ ತಂಡ ಕಾಡಾನೆಯನ್ನು ಹಿಂಬಾಲಿಸುತ್ತಿದೆ.

ಈ ಮಧ್ಯೆ ಕಾರ್ಯಾಚರಣೆಗೆ ಹೆಚ್ಚಿನ ಬಲ ನೀಡುವ ಉದ್ದೇಶದಿಂದ ಸಾಕಾನೆಗಳಾದ ಸುಗ್ರೀವ ಹಾಗೂ ಲಕ್ಷ್ಮಣ ಬದಲಿಗೆ ಶ್ರೀಕಂಠ ಮತ್ತು ಭೀಮ ಅವರನ್ನು ಕರೆತರಲಾಗಿದೆ. ಕಾಡಾನೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯಾಚರಣೆ ಮುಂದುವರಿಸಿದೆ.
ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
