
- ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
“ಮಾಯಾಲೋಕ ಹೇಗಿದೆಯಯ್ಯಾ?”
ಮಾಯಾಲೋಕ ಕೃತಿಯನ್ನು ಆಗಷ್ಟೇ ಪ್ರಕಟಿಸಿದ್ದರು. ತೇಜಸ್ವಿಯವರ ಮನೆಗೇ ಹೋಗಿ ಅವರಿಂದಂಲೇ ಹಸ್ತಾಕ್ಷರ ಹಾಕಿಸಿಕೊಂಡು ಪಡೆದಿದ್ದ ಪುಸ್ತಕ ಓದಿ, ನಾಲ್ಕು ದಿನದ ನಂತರ ಬೇರೆನೋ ಕಾರಣಕ್ಕೆ ಅವರನ್ನು ಭೇಟಿಯಾದೆ. “ಮಾಯಾಲೋಕ ಹೇಗಿದೆಯಯ್ಯಾ?” ಎಂದರು.
“ನಿಮ್ಮ ಹಿಂದಿನ ಪುಸ್ತಕ ಓದಿದ್ದವರಿಗೆ ಇದು ಯಾಕೋ ಸಪ್ಪೆ ಅನಿಸುತ್ತೆ. ಕೆಲವೆಡೆ ಸಂಭಾಷಣೆ ತೀರಾ ದೀರ್ಘವಾಯಿತು ಎನಿಸಿತು” ಎಂದು ಪೆದ್ದುಪೆದ್ದಾಗಿ ಆ ಕ್ಷಣಕ್ಕೆ ಅನಿಸಿದನ್ನು ಹೇಳಿದೆ. ಪದೇಪದೇ ಎಸ್.ಎಸ್.ಎಲ್.ಸಿ. ಫೇಲಾಗುವ ವಿದ್ಯಾರ್ಥಿಯನ್ನು ನೋಡುವಂತೆ ನನ್ನನ್ನು ಒಮ್ಮೆ ಕನಿಕರದಿಂದ ನೋಡಿ “ಇನ್ನೊಂದು ಸಲ ಓದಿ ನೋಡು ಹೋಗ್”ಎಂದರು.
ಅವರು ಹೇಳಿದರಲ್ಲಾ ಎಂದು ಇನ್ನೊಮ್ಮೆ ಓದಲು ಶುರುಮಾಡಿದೆ ನೋಡಿ, ನಮ್ಮ ಸುತ್ತಮುತ್ತಲ ದಿನಂಪ್ರತಿ ನಡೆಯುವ ವಿದ್ಯಮಾನ, ನಮ್ಮ ಚಟುವಟಿಕೆಗಳು, ಪ್ರಕೃತಿ ಅದಕ್ಕೆ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸುವ ಸ್ಥಿತ್ಯಂತರ, ಜಾಗತೀಕರಣದ ಪರಿಣಾಮ, ಬದುಕು ಈ ಸಂಕ್ರಮಣಕ್ಕೆ ತೆರೆದುಕೊಳ್ಳುವ ರೀತಿ, ಬದಲಾಗುತ್ತಿರುವ ಮಾನವೀಯ ಸಂಬಂಧಗಳು, ಕಡೆಯಲ್ಲಿ ಎಲ್ಲವನ್ನು ಮುಕ್ಕಿ ಮಸಳಿಸುವ ನಿಸರ್ಗದ ಸಹಜತೆ, ಎಲ್ಲ್ಲವೂ ಇದೇನು? ಹೀಗಾಗುತ್ತಿದೆಯಲ್ಲಾ, ಎಂದು ನಮ್ಮನ್ನು ಅಚ್ಚರಿಯಲ್ಲಿ ಮುಳುಗಿಸಿ ಮುನ್ನಡೆಸುವ ಪರಿ ಇದೆಯೆಲ್ಲ ಅದು ತೇಜಸ್ವಿಯವರಿಗೆ ಮಾತ್ರ ಸಾಧ್ಯ.
ತೇಜಸ್ವಿಯವರ ಬರಹದ ಶೈಲಿ ಡಿಟೆಕ್ಟಿವ್ ಮಾದರಿಯನ್ನು ಹೋಲುತ್ತದೆ ಎಂದಿರುವ ಹಲವರ ಮಾತುಗಳಿಗೆ ಪೂರಕವಾಗಿ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕರ್ವಾಲೋ ಹೀಗೆ ಹತ್ತು ಹಲವು ಕೃತಿಗಳನ್ನು ಓದಿದಾಗ ಎನ್ಸೈಕ್ಲೋಪಿಡಿಯಾವನ್ನೂ ಈ ರೀತಿ ರೋಮಾಂಚಕಾರಿಯಾಗಿ ಹೇಳಬಹುದಲ್ಲವಾ? ಎನಿಸುತ್ತದೆ.
ತೀರಾ ಅಪೂರ್ವವಾಗಿ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತೇಜಸ್ವಿಯವರನ್ನು `ಈಗ ಏನು ಬರೆಯುತ್ತಿದ್ದೀರಿ?’ ಎಂದು ಯಾರಾದರೂ ಪ್ರಶ್ನಿಸಿದರೆ, ತಿರುಗಿ “ಯಾಕೆ ಬರೆಯಬೇಕು? ಒಂದಾದ ನಂತರ ಒಂದನ್ನು ಬರೆದುಕೊಡುತ್ತೀನಿ ಎಂದು ನಾನೆಲ್ಲಾದರೂ ಛಾಪಾ ಕಾಗದದ ಮೇಲೆ ಬರೆದುಕೊಟ್ಟಿದ್ದೀನಾ?” ಎಂದು ತಮಾಷೆಯಾಗಿ ಉತ್ತರ ಕೊಡುತ್ತಿದ್ದರು.
ಬರಹ ಸ್ವಾಭಾವಿಕವಾಗಿ ಹೊರಬರಬೇಕು. ಹಠಕ್ಕಾಗಿ ಬರೆಯುವುದು ಮೂರ್ಖತನ ಎಂದಿದ್ದ ತೇಜಸ್ವಿ, ಕಾಡು ಸುತ್ತುವುದು, ಪಕ್ಷಿ ವೀಕ್ಷಣೆ, ಛಾಯಾಗ್ರಹಣ, ಮೀನು ಶಿಕಾರಿ, ಮುಲಾಜಿಲ್ಲದ ಬದುಕು, ಖಂಡತುಂಡ ವೈಚಾರಿಕತೆಯನ್ನು ಮುಂಚಿನಿಂದಲೂ ಮೈಗೂಡಿಸಿಕೊಂಡಿದ್ದರು. ಯಾವುದೇ ಕಟ್ಟುಪಾಡುಗಳ ಹೊರತಾಗಿ ಬದುಕುತ್ತಿರುವುದರಿಂದ ನನ್ನ ಅಗತ್ಯ, ನನ್ನ ಕಲ್ಪನೆ, ನನ್ನ ಸಾಧ್ಯತೆಗಳಿಗೆ ಅನುಗುಣವಾಗಿ ನಾನು ತಿಳಿದಂತೆ, ಬಯಸಿದಂತೆ ಬದುಕಲು, ಬರೆಯಲು, ಅಭಿವ್ಯಕ್ತಿಗೊಳಿಸಲು ಸಾಧ್ಯವಾಗಿದೆ ಎನ್ನುತ್ತಿದ್ದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946