ಕೆ.ಆರ್.ಪೇಟೆ,ಏ.17: ತಾಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಯುವಕನೊಬ್ಬ ಕೆರೆಯ ನೀರಿನಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಲಿಂಗಾಪುರ ಗ್ರಾಮದ ರಾಮಯ್ಯ ಅವರ ಮಗ ಅರುಣ್ ಕುಮಾರ್ (26) ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕ.
ಅರುಣ್ಕುಮಾರ್ ಲಿಂಗಾಪುರ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಿದ ನಂತರ ಕೈಕಾಲು ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಬಿದ್ದಿದ್ದಾರೆ. ನೀರಿನ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೇ ಅರುಣ್ಕುಮಾರ್ ಜಲ ಸಮಾಧಿಯಾಗಿದ್ದಾರೆ.
ಕೆ.ಆರ್.ಪೇಟೆ ಅಗ್ನಿಶಾಮಕ ದಳದ ಪೋಲೀಸರು ಕಾರ್ಯಾಚರಣೆ ನಡೆಸಿ ಕೆಸರಿನಲ್ಲಿ ಹೂತು ಹೋಗಿದ್ದ ಅರುಣ್ ಕುಮಾರ್ ಶವವನ್ನು ಮೇಲೆತ್ತಿ ವಾರಸುದಾರರಿಗೆ ನೀಡಿದ್ದಾರೆ. ಆಕಸ್ಮಿಕವಾಗಿ ನಡೆದ ಘಟನೆಯಿಂದ ಬಾಳಿ ಬದುಕಬೇಕಿದ್ದ ತಮ್ಮ ಮಗನ ಅಕಾಲಿಕ ಸಾವನ್ನು ಕಂಡು ಪೋಷಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಘಟನೆಯಿಂದ ಲಿಂಗಾಪುರ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಶ್ರೀನಿವಾಸ್ ಆರ್.
