ಕೆ.ಆರ್.ಪೇಟೆ,ಏ.17: ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ನಡೆಯುವ ವಿಶೇಷ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ನಿರ್ಮಾಣವಾಗುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಚೌಡಸಮುದ್ರ ಗ್ರಾಮದ ಕರ್ನಾಟಕ ರತ್ನ ಡಾ.ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿರುವ ಏಳು ದಿನಗಳ ವಾರ್ಷಿಕ ವಿಶೇಷ ಶ್ರಮಧಾನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವ ಮೂಲಕ ಅವರಲ್ಲಿ ಸಮಯ ಪಾಲನೆ, ಶಿಸ್ತು, ಪ್ರಾಮಾಣಿಕತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುತ್ತವೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಗ್ರಾಮೀಣ ಪರಿಸರದ ದೇಶಿಯ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಏಳು ದಿನಗಳ ನಡೆಯುವ ಶಿಬಿರವು ಶಿಬಿರಾರ್ಥಿಗಳಲ್ಲಿರುವ ಪ್ರತಿಭಾ ಸಾಮರ್ಥ್ಯದ ಗುಣಮಟ್ಟ ಹೆಚ್ಚಿಸುತ್ತದೆ.
ಪ್ರತಿದಿನ ವಿವಿಧ ಗಣ್ಯರು ಒಂದೊಂದು ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಜ್ಞಾನ ವಿಕಾಸಕ್ಕೆ ಅವಕಾಶವಾಗುತ್ತದೆ. ಈ ಶಿಬಿರದಿಂದ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸೇವಾ ಭಾವನೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಪರಿಸರದಲ್ಲಿ ಸೇವೆ ಮಾಡುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಶಾಸಕರು ಹೇಳಿದರು.
ಪ್ರಾಂಶುಪಾಲ ಡಾವಿ.ವಿ.ಜಗದೀಶ್, ಎನ್ಎಸ್ಎಸ್ ಘಟಕದ ಕ್ರಾರ್ಯಕ್ರಮಾಧಿಕಾರಿ ಪ್ರೊಆನಂದ್, ಸಹ ಶಿಬಿರಾಧಿಕಾರಿ ಶೋಭ, ಅಕ್ಕಿಹೆಬ್ಬಾಳು ಹೋಬಳಿ ಜೆಡಿಎಸ್ ಅಧ್ಯಕ್ಷ ಮಂಚೀಬೀಡು ಬಸವಲಿಂಗಪ್ಪ, ಬೀರುವಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಶಿವಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎನ್.ಕುಮಾರ್, ಬೀರುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈರೇಗೌಡ, ಹರೀಶ್, ಮುಖಂಡರಾದ ರುದ್ರಪ್ಪ, ರವಿ, ಶಿವಪ್ಪ, ರಾಜಪ್ಪ, ಮಲ್ಲೇಶ್, ಬಿ.ಎಲ್.ಡಿ.ಚಂದ್ರು, ಜೈನ್ನಹಳ್ಳಿ ಸಂತೋಷ್, ಉಪನ್ಯಾಸಕರಾದ ಡಾ.ರಮೇಶ್, ಡಾ.ಸವಿತಾ, ಡಾ.ಮಹೇಶ್, ಡಾ.ಶಿವಕುಮಾರಸ್ವಾಮಿ, ಜಯಕೀರ್ತಿ, ವೈ.ಎನ್.ಪುಷ್ಪಲತಾ, ರಿಯಾಜ್ ಅಹಮದ್, ಭುವವೇಶ್ವರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿಬಿರಾರ್ಥಿಗಳು ಎನ್ಎಸ್ಎಸ್ ಗೀತೆ ಹಾಡಿದರು, ಶಿಬಿರದಲ್ಲಿ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಿಬಿರದ ಆರಂಭಕ್ಕೂ ಮುನ್ನ ರಾಷ್ಡ್ರಪಿತ ಮಹಾತ್ಮ ಗಾಂಧೀಜಿ, ಸ್ವಾಮಿವಿವೇಕಾನಂದ, ಬಸವೇಶ್ವರ, ಸಿದ್ದಗಂಗಾಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು.
– ಶ್ರೀನಿವಾಸ್ ಆರ್.
