
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ನಾನೂ ನಿಮ್ಹಾಗೇ ಅನ್ನಾ ತಿನ್ನೋ ಮನುಷ್ಯ ಕಣ್ರಯ್ಯಾ”
ಒಮ್ಮೆ ಏನಾಯಿತೆಂದರೆ ನಮ್ಮ ನೇಚರ್ ಕ್ಲಬ್ನಿಂದ ದೇವರಮನೆ ಕಾಡಿಗೆ ಸ್ನೇಹಿತರೆಲ್ಲಾ ಟ್ರಕ್ಕಿಂಗ್ ಹೋಗುವುದು, ಅಲ್ಲಿ ಟೆಂಟ್ ಹಾಕಿ ರಾತ್ರಿ ತಂಗುವುದೆಂದು ನಿರ್ಧಾರವಾಯಿತು. ಹ್ಯಾಂಡ್ಪೋಸ್ಟ್ನಲ್ಲಿ ಎಲ್ಲಾ ಸೇರಿಕೊಂಡು ಜೀಪ್ನಲ್ಲಿ ಹೋಗಿ ನಂತರ ಚಾರಣ ಪ್ರಾರಂಭಿಸುವುದು ಎಂದು ನಿಗದಿಯಾಯ್ತು.
ಅಡುಗೆ ವ್ಯವಸ್ಥೆಗಾಗಿ ಸುಬ್ರಹ್ಮಣ್ಯರನ್ನು ಕರೆದುಕೊಂಡೆವು. ತೇಜಸ್ವಿಯವರು, ಅವರ ಶ್ರೀಮತಿ ರಾಜೇಶ್ವರಿಯವರು, ಅಳಿಯ ಜ್ಞಾನೇಶ್ ಸಹ ನಮ್ಮ ಗುಂಪನ್ನು ಸೇರಿಕೊಂಡರು. ಕ್ಯಾಮರಾ, ಬಟ್ಟೆಬರೆ ಇತರೆ ವಸ್ತುಗಳಿದ್ದ ತೇಜಸ್ವಿಯವರ ಬ್ಯಾಗ್ ಸಾಕಷ್ಟು ತೂಕವಿದ್ದಂತೆ ಕಂಡಿತು.
‘ಬ್ಯಾಗ್ ಕೊಡಿ ದೂರದಲ್ಲಿ ನಿಂತಿರುವ ಜೀಪಿಗೆ ಇಡ್ತೀನಿ’ ಎಂದು ಅವರ ಕೈನಲ್ಲಿದ್ದ ಬ್ಯಾಗ್ ಇಸ್ಕೊಳ್ಳಲು ಹೊರಟರೆ “ನಮ್ಗೇನು ಕೈಕಾಲು ಇಲ್ಲಾಂತ ತಿಳ್ಕಂಡಿದ್ದೀಯಾ, ನನ್ನ ಕೈಕಾಲು ಗಟ್ಟಿ ಇದಾವೆ ಕಣೋ ಮಾರಾಯಾ, ನಾನೂ ನಿಮ್ಹಾಗೇ ಅನ್ನಾ ತಿನ್ನೋ ಮನುಷ್ಯ ಕಣ್ರಯ್ಯಾ” ಎಂದು ಗದರಿಸಿ ಬ್ಯಾಗ್ ಎತ್ತಲೂ ಸಹ ಬಿಡಲಿಲ್ಲ. ದೇವರಮನೆಯಲ್ಲೂ ಸಹ ಜೀಪಿನವ ನನ್ನ ಜೊತೆ ಚೌಕಾಸಿ ಮಾಡುವಾಗ ‘ಏ ಒಂದು ನೂರು ರೂಪಾಯಿ ಜಾಸ್ತಿ ಕೊಟ್ಟು ಕಳಿಸ್ರಯ್ಯಾ ಅವರದೆಂತಾ ಕಿರಿಕಿರಿ’ ಎಂದಿದ್ದರು.
ದೇವಾಲಯದ ಪಕ್ಕದ ಬಯಲಿನಲ್ಲಿ ಹತ್ತುಹನ್ನೆರಡು ಜನ ಮಲಗಬಹುದಾದಷ್ಟು ದೊಡ್ಡದಾದ ಟೆಂಟ್ ಹಾಕಿ ರಾತ್ರಿ ಕಳೆಯಲು ಸಿದ್ಧರಾದೆವು. ಅಷ್ಟರಲ್ಲಿ ಮಲೆನಾಡಿಗೇ ವಿಶಿಷ್ಟವಾದ ನಿಶಾನಿಯ ಸದ್ದು ಕೇಳಿ ಆ ಕಾಳರಾತ್ರಿಯಲ್ಲಿ ಗಲಿಬಿಲಿಯಿಂದ ಹೊರಬಂದು ನೋಡಿದರೆ, ಇಪ್ಪತ್ತು-ಇಪ್ಪತ್ತೈದು ಜನರ ಗುಂಪೊಂದು ಗ್ರಾಮದೇವತೆಯನ್ನು ಹೊತ್ತುಕೊಂಡು ದೇವಾಲಯದ ಆವರಣದತ್ತ ದೊಂದಿಯ ಬೆಳಕಿನಲ್ಲಿ ದಾಪುಗಾಲಿಟ್ಟುಕೊಂಡು ಬರುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಹತ್ತಾರು ಮೈಲುಗಳ ಸುತ್ತಳತೆಯಲ್ಲೆಲ್ಲೂ ಜನವಸತಿಯ ಗ್ರಾಮಗಳಿಲ್ಲದ ಕಾಡಿನ ನಡುವಿನ ಗಾಢಾಂಧಕಾರದಲ್ಲಿ ಅನುರಣಿಸಿದ ಆ ನಿಶಾನಿಯ ಸದ್ದು ಶತಮಾನಗಳ ಹಿಂದಿನ ಯಾವುದೋ ಬುಡಕಟ್ಟುಗಳ ನಡುವಿನ ಕಾಳಗದ ರಣಘೋಷದಂತೆ ನಮ್ಮನ್ನೆಲ್ಲ ನಖಶಿಖಾಂತ ತತ್ತರಗೊಳಿಸಿತು. ಪರವೂರಿನಿಂದ ಹೋಗಿದ್ದ ನಮ್ಮನ್ನು ಪ್ರೀತಿಯಿಂದ ಆದರಿಸಿದ ಆ ಗ್ರಾಮದೇವತಾ ಆರಾಧಕರು ತಾವು ತಂದಿದ್ದ ಸೌದೆಯನ್ನು ಪೇರಿಸಿ ದೇವಾಲಯದ ಮುಂದೆ ಆಳೆತ್ತರದ ಬೆಂಕಿಯನ್ನು ಹಾಕಿದರು.
ಸುತ್ತಮುತ್ತಲಿನ ಬೆಟ್ಟಗುಡ್ಡಗಳೇ ಅದುರುವಂತೆ ಕೇಕೆ ಹಾಕುತ್ತಾ ನಿಶಾನಿಯ ಹಲಗೆಯ ಬಡಿತಕ್ಕೆ ಸುಗ್ಗಿ ಕುಣಿತ ಕುಣಿಯತ್ತಾ ಯಾವುದೋ ಪುರಾತನ ಹಬ್ಬದ ವಾತಾವರಣವನ್ನು ಮೂಡಿಸಿದರು. ಅವರ ಲಯಬದ್ಧವಾದ ಕುಣಿತದ ಕಾವಿಗೆ ಮಾರುಹೋದ ನಾವೂ ಕೆಲವರು ಅವರೊಂದಿಗೆ ಆವೇಶ ಬಂದವರಂತೆ ಕುಣಿದೇ ಕುಣಿದೆವು.
ಇದನ್ನೆಲ್ಲಾ ವೀಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ ಹರ್ಷ, ಕ್ಯಾಮರಾವನ್ನು ನನ್ನ ಕೈಗೆ ಕೊಟ್ಟು, ದೇವರಮಗನ ಕಠಾರಿಯನ್ನು ಕೈಯಲ್ಲಿ ಹಿಡಿದು, ಕಾಲು ಚಾಚುವಷ್ಟು ದೂರಕ್ಕೆ ಹೆಜ್ಜೆಗಳನ್ನಿಡುತ್ತಾ, ಮೈಮೇಲೆ ದೇವರನ್ನು ಆವಾಹಿಸಿಕೊಂಡವರಂತೆ ಸುಮಾರು ಕಾಲೆಕರೆ ಜಾಗದಲ್ಲಿ ಕತ್ತಿ ಬೀಸಿ ಅಲ್ಲಿದ್ದವರನ್ನೆಲ್ಲಾ ರಂಜಿಸಿದರು. ಕುಣಿತದಿಂದ ಸುಸ್ತು ಹೊಡೆದು ಹೋಗಿದ್ದ ನಾವೆಲ್ಲಾ ಬೆಳಿಗ್ಗೆ ಕಾಟಿಹರಕ್ಕೆ ಚಾರಣ ಹೋದೆವು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946