- ಶ್ಲೋಕ – 14
ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ ।
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ॥೧೪॥
ತತಃ ಸಃ ವಿಸ್ಮಯ ಆವಿಷ್ಟಃ ಹೃಷ್ಟರೋಮಾ ಧನಂಜಯಃ ।
ಪ್ರಣಮ್ಯ ಶಿರಸಾ ದೇವಮ್ ಕೃತಾಂಜಲಿಃ ಅಭಾಷತ –ಬಳಿಕ ಬೆರಗಲ್ಲಿ ಮುಳುಗಿ ಮೈನವಿರೆದ್ದ ಅರ್ಜುನ ಭಗವಂತನಿಗೆ ತಲೆಬಾಗಿ ಕೈಜೋಡಿಸಿ ನುಡಿದ.
ಭಗವಂತನ ಈ ಅದ್ಭುತ ರೂಪವನ್ನು ಕಂಡ ಅರ್ಜುನ, ಆನಂದ ಆಶ್ಚರ್ಯ ದಿಗ್ಭ್ರಮೆಯಿಂದ ರೋಮಾಂಚನಗೊಂಡು ನಿಂತ. ಭಗವಂತನ ಅಪೂರ್ವವಾದ ಇಂತಹ ಅದ್ಭುತ ದರ್ಶನ ಸಂಪತ್ತನ್ನು(ಧನ) ಪಡೆದ ಆತ(ಧನಂಜಯಃ), ಭಕ್ತಿ ಪೂರ್ವಕವಾಗಿ ಉದ್ದಂಡ ನಮಸ್ಕಾರ ಮಾಡಿ, ತನ್ನೆರಡು ಕೈಯನ್ನು ಜೋಡಿಸಿ (ಕೈಮುಗಿದು) ನಿಂತು, ಭಗವಂತನನ್ನು ಸ್ತೋತ್ರ ಮಾಡಲಾರಂಭಿಸಿದ.
