ಹಾಸನ : ನಗರದ ತಣ್ಣೀರುಹಳ್ಳ ಶ್ರೀ ಮಠದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬಸವಾದಿ ಶರಣರ ವಚನ ಸಾಹಿತ್ಯದ ಸಂರಕ್ಷಣೆ ಹಾಗೂ ವಿಸ್ತರಣೆಗೆ ಮಠಗಳು ಸಕ್ರಿಯವಾಗಿ ಮುಂದಾಗಬೇಕು ಎಂದು ಸುತ್ತೂರು ಮಠದ ಪೂಜ್ಯ ಡಾ. ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.
ಲಿಂ. ಪೂಜ್ಯ ಡಾ. ಶಿವಕುಮಾರಸ್ವಾಮೀಜಿಗಳ ಜನ್ಮದಿನ, ಪೂಜ್ಯ ಶ್ರೀ ಶಿವಲಿಂಗಸ್ವಾಮೀಜಿಗಳ 92ನೇ ಜಯಂತೋತ್ಸವ, ದಾಸೋಹ ಭವನ ಉದ್ಘಾಟನೆ ಹಾಗೂ ಪೂಜ್ಯ ಶ್ರೀ ವಿಜಯಕುಮಾರ ಸ್ವಾಮೀಜಿಗಳ 56ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಬಸವಾದಿ ಶರಣರ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿದ್ದು, ಸಮಾನತೆ, ಕಾಯಕ ತತ್ವ, ಜಾತಿ-ಲಿಂಗ ಬೇಧ ನಿರ್ಮೂಲನೆ ಹಾಗೂ ಶುದ್ಧ ಭಕ್ತಿಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪುವ ಈ ವಚನಗಳು ಸಾಮಾಜಿಕ ಪರಿವರ್ತನೆಗೆ ಪ್ರೇರಕವಾಗಿವೆ ಎಂದು ಹೇಳಿದರು. ಮಠಗಳು ತ್ರಿವಿಧ ದಾಸೋಹದ ಜೊತೆಗೆ ವಚನ ಸಾಹಿತ್ಯ ಸಂರಕ್ಷಣೆಯ ಹೊಣೆ ಹೊತ್ತಾಗ ಮಾತ್ರ ಅದರ ಮಹತ್ವ ಹೆಚ್ಚುತ್ತದೆ ಎಂದರು.
ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ, ಮಠಗಳು ಅಕ್ಷರ, ವಸ್ತ್ರ ಮತ್ತು ವಸತಿ ಎಂಬ ತ್ರಿವಿಧ ದಾಸೋಹವನ್ನು ನೀಡುವ ಕೇಂದ್ರಗಳಾಗಬೇಕು. ಸಂಸ್ಕಾರಯುತ ಶಿಕ್ಷಣದಿಂದ ದೇಶದ ಭವಿಷ್ಯ ಬಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪುಷ್ಪಗಿರಿ ಮಠದ ಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂದಿನ ಕಾಲದಲ್ಲಿ ಮನುಷ್ಯ ಹಣ ಮತ್ತು ಅಧಿಕಾರದ ಹಿಂದೆ ಓಡುತ್ತಾ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ವಿಷಾದನೀಯ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮಾನಸಿಕ ಶಾಂತಿ ಮತ್ತು ಸಮತೋಲನ ಬದುಕಿಗೆ ನೆರವಾಗುತ್ತವೆ ಎಂದರು.

ವಿರಾಜಪೇಟೆ ಅರಮೇರಿ ಮಠದ ಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ತಣ್ಣೀರುಹಳ್ಳ ಮಠವು ಶತಮಾನಗಳಿಂದ ಧಾರ್ಮಿಕ, ಶೈಕ್ಷಣಿಕ ಮತ್ತು ದಾಸೋಹ ಸೇವೆಗಳ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಶ್ರೇಯಸ್ಸು ಎಂ. ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕ ಗಣ್ಯರು ಹಾಗೂ ವಿವಿಧ ಮಠಗಳ ಪೂಜ್ಯರು ಉಪಸ್ಥಿತರಿದ್ದರು.
– ಶಿವಕುಮಾರ್ ಕಟ್ಟಾಯ
