ರಾಮನಾಥಪುರ, ಮೇ 10: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ ನದಿ ತಟದ ರಾಮನಾಥಪುರದ ಪುರಾಣ ಪ್ರಸಿದ್ಧ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಅಷ್ಟಮಿ ಭಾನುವಾರದ ಪ್ರಯುಕ್ತ ಇಂದು ವಿಜೃಂಭಣೆಯಿಂದ ಸರ್ವ ಸೇವೆ ನೆರವೇರಿತು.

ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಪುಷ್ಪಗಳಿಂದ ಅಲಂಕರಿಸಿದ ಉತ್ಸವ ಮೂರ್ತಿಯನ್ನು ಅಡ್ಡೆಯಲ್ಲಿ ಕುಳ್ಳಿರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಭಕ್ತರು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ಹಾಕಿದರು.

ಸುತ್ತಮುತ್ತಲಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣಗಳಿಂದ ಆಗಮಿಸಿದ್ದ ನೂರಾರು ಭಕ್ತರು ಮಂಗಳ ವಾದ್ಯಗಳ ನಡುವೆ ಹರ್ಷೋದ್ಗಾರಗಳೊಂದಿಗೆ ಸ್ವಾಮಿಯ ಸರ್ವ ಸೇವೆಯಲ್ಲಿ ಭಾಗವಹಿಸಿ ಭಕ್ತಿ ಪರವಶರಾದರು.

ಈ ಸಂದರ್ಭದಲ್ಲಿ ದೇವಾಲಯದ ಪಾರುಪತ್ತೇಗಾರ್ ರಮೇಶ್ ಭಟ್ ಅವರು ಸರ್ವ ಸೇವೆ ಏರ್ಪಡಿಸಿದ್ದ ರಾಮನಾಥಪುರದ ನಿವೃತ್ತ ಮುಖ್ಯ ಶಿಕ್ಷಕ ನಂಜುಂಡಸ್ವಾಮಿ, ಬಸವಪಟ್ಟಣದ ಸೂರ್ಯನಾರಾಯಣ, ನರಸಿಂಹಮೂರ್ತಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದರು.
– ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
