ಶ್ಲೋಕ – 40
ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋSಸ್ತು ತೇ ಸರ್ವತ ಏವ ಸರ್ವ ।
ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋSಸಿ ಸರ್ವಃ ॥೪೦॥
ನಮಃ ಪುರಸ್ತಾತ್ ಅಥ ಪೃಷ್ಠತಃ ತೇ ನಮಃ ಅಸ್ತು ತೇ ಸರ್ವತಃ ಏವ ಸರ್ವ ।
ಅನಂತವೀರ್ಯ ಅಮಿತವಿಕ್ರಮಃ ತ್ವಮ್ ಸರ್ವಮ್ ಸಮಾಪ್ರೋಷಿ ತತಃ ಅಸಿ ಸರ್ವಃ –ಮುಂಗಡ ನಿನಗೆ ವಂದನೆ. ಮತ್ತೆ ಬೆಂಗಡೆ ನಿನಗೆ ವಂದನೆ. ಓ, ಎಲ್ಲೆಡೆ ಇರುವವನೆ, ಎಲ್ಲ ಕಡೆ ನಿನಗೆ ವಂದನೆ. ನೀನು ಎಲ್ಲೆಯಿರದ ಬೀರದವನು.ಅಳತೆಯಿರದ ಅಳವಿನವನು. ಎಲ್ಲೆಡೆಯು ತುಂಬಿರುವೆ. ಅದಕೆಂದು ನೀನೆ ಎಲ್ಲ.
ಭಗವಂತನ ವಿಶ್ವರೂಪದಲ್ಲಿ ಆತನ ಮುಂಭಾಗ ಯಾವುದು ಹಿಂಭಾಗ ಯಾವುದು ಎಂದು ಹೇಗೆ ಗುರುತಿಸುವುದು. ಇದು ಅಸಾಧ್ಯ. ಅದಕ್ಕಾಗಿ ಅರ್ಜುನ ಹೇಳುತ್ತಾನೆ: ನಿನಗೆ ಎದುರಿನಿಂದ ನಮಸ್ಕಾರ, ನಿನ್ನ ಬೆಂಭಾಗದಿಂದ ನಮಸ್ಕಾರ, ಎಲ್ಲೆಡೆ ತುಂಬಿರುವ ನಿನಗೆ ಎಲ್ಲೆಡೆಯಿಂದ ನಮಸ್ಕಾರ. ನೀನು ಅನಂತವೀರ್ಯಃ. ನೀನು ಅಮಿತವಿಕ್ರಮಃ. ಓ ಸರ್ವನೇ, ನಿನಗೆ ನಮಸ್ಕಾರ. ಜಗತ್ತಿನ ಸಮಸ್ತ ಜೀವ ಜಾತದ ಸೃಷ್ಟಿಗೆ ಕಾರಣವಾಗಿ ಎಲ್ಲೆಡೆ ತುಂಬಿರುವ ಜಗತ್ತಿನ ನಿಯಾಮಕನಾದ ಈ ಅನಂತ ಶಕ್ತಿಗೆ ನಮಸ್ಕಾರ. ಎಲ್ಲವೂ ನೀನೆ.
