
ಅಧ್ಯಾಯ-1
ಶ್ಲೋಕ – 19
ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ ।
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ ॥೧೯॥
ಸ ಘೋಷಃ ಧಾರ್ತರಾಷ್ಟ್ರಾಣಾಮ್ ಹೃದಯಾನಿ ವ್ಯದಾರಯತ್ ನಭಃ ಚ ಪೃಥಿವೀಮ್ ಚ ಏವ ತುಮುಲಃ ವ್ಯನುನಾದಯನ್-
ಆ ಸದ್ದು ನೆಲ-ಮುಗಿಲು ತಬ್ಬಿ, ಪಡಿನುಡಿದು ಅಬ್ಬರಿಸಿ, ಧೃತರಾಷ್ಟ್ರನೆಂದು ಹೆಸರಾದ ನಿನ್ನ ಮಕ್ಕಳ ಎದೆಗಳಿಗಬ್ಬರಿಸಿತು.
ಇಲ್ಲಿ ಸಂಜಯನು ಧೃತರಾಷ್ಟ್ರನ ಮಕ್ಕಳನ್ನು ‘ಧಾರ್ತರಾಷ್ಟ್ರಾಣಾಂ‘ ಎಂದು ಸಂಬೋಧಿಸುತ್ತಾನೆ. ಏಕೆಂದರೆ ಇದು ಅವರ ಉಪನಾಮ(Surname). ಈ ಹಿಂದೆ “ನನ್ನ ಮಕ್ಕಳು ಮತ್ತು ಪಾಂಡವರು” ಎಂದು ಸಂಬೋಧಿಸಿದ್ದ ಧೃತರಾಷ್ಟ್ರನಿಗೆ ಸಂಜಯನ ಕುಹಕದ ಉತ್ತರವಿದು.
ಸಂಜಯ ಹೇಳುತ್ತಾನೆ: “ಪಾಂಡವರ ಕಡೆಯಿಂದ ಕ್ರಮಬದ್ಧವಾಗಿ ಮೊಳಗಿದ ಶಂಖನಾದ, ನೆಲಮುಗಿಲನ್ನು ತುಂಬಿ, ಪಡಿನುಡಿದು ಅಬ್ಬರಿಸಿ, ಧೃತರಾಷ್ಟ್ರನೆಂದು ಹೆಸರಾದ ನಿನ್ನ ಮಕ್ಕಳ ಎದೆಯನ್ನು ಸೀಳಿತು” ಎಂದು. ಈ ಹಿಂದೆ ಹೇಳಿದಂತೆ ಪಾಂಡವರ ಶಿಸ್ತುಬದ್ಧ ನಡೆ ಈಗಾಗಲೇ ಕೌರವರ ಎದೆಯನ್ನು ಭೇದಿಸಿತ್ತು. ಯುದ್ಧ ಪ್ರಾರಂಭವಾಗುವ ಮೊದಲೇ ಪಾಂಡವರು ಕೌರವರನ್ನು ಮಾನಸಿಕವಾಗಿ ಸೋಲಿಸಿದ್ದರು.